ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಸುಂಕ ಹೇರಿಕೆ ಅಂದುಕೊಂಡಷ್ಟು ಸುಲಭದ ಕೆಲಸವಲ್ಲಾ. ಏಕೆಂದರೆ ಇದರಿಂದ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ಫಾಕ್ಸ್ ಮತ್ತು ಫ್ರೆಂಡ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ನೋಡಿ, ಭಾರತ ರಷ್ಯಾದ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಅವರು ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ಶೇ. 50 ರಷ್ಟು ಸುಂಕವನ್ನು ಹಾಕಿದ್ದೇನೆ ಎಂದರು.
ಅದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದೊಂದು ದೊಡ್ಡ ಡೀಲ್ ಆಗಿದೆ. ಇದರಿಂದ ಭಾರತದ ಜೊತೆಗಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತಿದೆ. ಆದರೆ, ಇದನ್ನು ಈಗಾಗಲೇ ಮಾಡಿದ್ದೇನೆ. ಇದು ನಮ್ಮ ಸಮಸ್ಯೆಗಿಂತಲೂ ಯುರೋಪ್ ಸಮಸ್ಯೆಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಹೇಳಿದರು.
ತಮ್ಮ ಎರಡನೇ ಅವಧಿಯಲ್ಲಿ ಅನೇಕ ಜಾಗತಿಕ ಸಂಘರ್ಷಗಳನ್ನು ಪರಿಹರಿಸಿರುವುದಾಗಿ ಪುನರುಚ್ಚರಿಸಿದ ಟ್ರಂಪ್, "ನಾನು ಏಳು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಹಲವು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಪರಿಹರಿಸಲಾಗದೆ ಸಾಧ್ಯವಾಗದಂತಹ ಕಾಂಗೋ ಮತ್ತು ರುವಾಂಡಾ ಸಮಸ್ಯೆಯನ್ನು ಬಗೆಹರಿಸಿದ್ದೇನೆ. ಇದು 31 ವರ್ಷಗಳ ಕಾಲ ನಡೆದಿತ್ತು. ಲಕ್ಷಾಂತರ ಜನರು ಹತ್ಯೆಯಾಗಿದ್ದರು. ಇಂತಹ ಪರಿಹರಿಸಲಾಗದಂತಹ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಅವರು ತಿಳಿಸಿದರು.
ಈ ಮಧ್ಯೆ ಭಾರತವು ರಷ್ಯಾದಿಂದ ಕಚ್ಚಾ ತೈಲದ ಖರೀದಿಯನ್ನು ಸಮರ್ಥಿಸಿಕೊಂಡಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಾರುಕಟ್ಟೆ ಪೈಪೋಟಿಯಿಂದ ಇಂಧನ ಸಂಗ್ರಹಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ.