ವಾಷಿಂಗ್ಟನ್: ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈವಾನ್‌ಗೆ ಸೇನಾ, ಆರ್ಥಿಕ ನೆರವು ನಿಲ್ಲಿಸಿದ್ದಾರೆ.
400 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವಿಗೆ ಅನುಮೋದನೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಟ್ರಂಪ್ ತಮ್ಮ ಚೀನಾದ ಸಹವರ್ತಿ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆಯ ಒಪ್ಪಂದಕ್ಕೆ ಪ್ರಯತ್ನಿಸುತ್ತಿದ್ದು, ಬೀಜಿಂಗ್ ನೊಂದಿಗೆ ಸಂಬಂಧವನ್ನು ಮೃದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ಪತ್ರಿಕೆ ಗುರುವಾರ ವರದಿ ಮಾಡಿದೆ.
ಇಂದು ಸಂಜೆ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿನ್ ಅವರನ್ನು ಟ್ರಂಪ್ ಭೇಟಿ ಮಾಡುತ್ತಿರುವಂತೆಯೇ ಅಮೆರಿಕ ಮಾಧ್ಯಮಗಳು ಈ ವರದಿ ಮಾಡಿದೆ. ತೈವಾನ್ ಗೆ ಆರ್ಥಿಕ ನೆರವು ಸ್ಥಗಿತದ ನಿರ್ಧಾರ ಅಂತಿಮವಲ್ಲ ಮತ್ತು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಶ್ವೇತಭವನದ ಪ್ರತಿನಿಧಿ ಹೇಳಿದ್ದಾರೆ.
ಅಮೆರಿಕದಲ್ಲಿ ಟಿಕ್ ಟಾಕ್ ನಿಷೇಧವನ್ನು ತಪ್ಪಿಸಲು ಅದರ ಚೀನಾದ ಮಾಲೀಕರಾದ ಬೈಟ್‌ಡ್ಯಾನ್ಸ್‌ನಿಂದ ಬೇರ್ಪಡಿಸುವ ಒಪ್ಪಂದ ಕುರಿತು ಉಭಯ ನಾಯಕರು ಚರ್ಚಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟಿಕ್ ಟಾಕ್ ಕುರಿತು ಚೀನಾ ಅಧ್ಯಕ್ಷರೊಂದಿಗೆ ಇಂದು ಮಾತುಕತೆ ನಡೆಸುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು. ರಾಷ್ಟ್ರೀಯ ಭದ್ರತೆಯ ಕಳವಳದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮೆರಿಕದಲ್ಲಿ ಟಿಕ್ ಟಾಕ್ ಆ್ಯಪ್ ನ್ನು ಟ್ರಂಪ್ ಆಡಳಿತ ಬ್ಯಾನ್ ಮಾಡುವ ಕಾನೂನು ರೂಪಿಸಿತ್ತು. ಈ ಕಾನೂನು ಈ ವರ್ಷದ ಜನವರಿಯಿಂದ ಜಾರಿಯಾಗಬೇಕಿತ್ತು. ಆದರೆ, ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಟ್ರಂಪ್ ಡೆಡ್ ಲೈನ್ ನ್ನು ವಿಸ್ತರಿಸಿದ್ದರು.