ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸೇನಾ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ ಸೇನೆ 7 ಬಂಡುಕೋರರನ್ನು ಕೊಂದು ಹಾಕಿದೆ.
ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನಕ್ಕೆ ಸೇರಿದ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನೆ ಭಾನುವಾರ ತಿಳಿಸಿದೆ.
ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರರ ಉಪಸ್ಥಿತಿಯ ವರದಿಯಾದ ನಂತರ ದಕ್ಷಿಣ ವಜೀರಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಭದ್ರತಾ ಪಡೆಗಳು ಹೊಡೆದುರುಳಿಸಿದ ಏಳು ಜನರಲ್ಲಿ ಮೂವರು ಅಫ್ಘಾನ್ ಪ್ರಜೆಗಳು ಮತ್ತು ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಸೇರಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಹೇಳಿಕೆಯಲ್ಲಿ ತಿಳಿಸಿದೆ.
ಅಫ್ಘಾನ್ ತಾಲಿಬಾನ್ ನಡೆಸುತ್ತಿರುವ ಮಧ್ಯಂತರ ಅಫ್ಘಾನ್ ಸರ್ಕಾರವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯುತ್ತದೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ತನ್ನ ಮಣ್ಣಿನ ಬಳಕೆಯನ್ನು ನಿರಾಕರಿಸುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಇದಕ್ಕೂ ಮೊದಲು, ಸೆಪ್ಟೆಂಬರ್ 13-14 ರಂದು, ಖೈಬರ್ ಪಖ್ತುಂಖ್ವಾದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕನಿಷ್ಠ 31 ಟಿಟಿಪಿ ಉಗ್ರರನ್ನು ಕೊಲ್ಲಲಾಗಿತ್ತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ಪ್ರಧಾನಿ ಶೆಹಬಾಜ್ ಷರೀಫ್, ಅಫ್ಘಾನಿಸ್ತಾನ ಭಯೋತ್ಪಾದಕರ ಪರ ನಿಲ್ಲುವುದೋ ಅಥವಾ ಪಾಕಿಸ್ತಾನದ ಜೊತೆ ನಿಲ್ಲುವುದೋ ಎರಡನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಪಾಕಿಸ್ತಾನ ಇತ್ತೀಚೆಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಹೆಚ್ಚಳವನ್ನು ಕಾಣುತ್ತಿದ್ದು, ಮುಖ್ಯವಾಗಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರಾಂತ್ಯಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ.