ಪ್ಯಾರಿಸ್: ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮಂಗಳವಾರ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಬಿಎಫ್‌ಎಂಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಶಕ್ತಿ ಟ್ರಂಪ್ ಅವರಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ.
ನಾನು ಇಂದು ಬೆಳಗ್ಗೆ ವಿಶ್ವಸಂಸ್ಥೆಯಲ್ಲಿ ಟ್ರಂಪ್ ಅವರು ಮಾಡಿದ ಭಾಷಣವನ್ನು ಕೇಳಿದ್ದೇನೆ. ಶಾಂತಿ ಸ್ಥಾಪನೆ ಬಗ್ಗೆ ಪುನರುಚ್ಚರಿಸಿದ್ದಾರೆ. ‘ನನಗೆ ಶಾಂತಿ ಬೇಕು. ನಾನು 7 ಸಂಘರ್ಷಗಳನ್ನು ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ.
ಟ್ರಂಪ್ ಅವರು ನೊಬೆಲ್ ಪ್ರಶಸ್ತಿಯನ್ನು ಬಯಸುತ್ತಿದ್ದಾರೆ. ಆದರೆ, ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲಬಲ್ಲರು ಎಂದು ತಿಳಿಸಿದ್ದಾರೆ.
ಟ್ರಂಪ್ ಅವರು ಇಸ್ರೇಲ್ ಮೇಲೆ ಒತ್ತಡ ಹೇರಿದರೆ ಯುದ್ಧ ನಿಲ್ಲುತ್ತದೆ. ಯುದ್ಧ ನಿಲ್ಲಿಸುವ ಬಗ್ಗೆ ಏನಾದರೂ ಮಾಡುವ ವ್ಯಕ್ತಿ ಇದ್ದರೆ ಅದು ಅಮೆರಿಕಾದ ಅಧ್ಯಕ್ಷರಿಂದ ಸಾಧ್ಯ. ಅವರು ನಮಗಿಂತ ಹೆಚ್ಚಿನದನ್ನು ಮಾಡಬಲ್ಲರು. ನಾವು ಗಾಜಾದಲ್ಲಿ ಯುದ್ಧ ನಡೆಸಲು ಅನುವು ಮಾಡಲು ಶಸ್ತ್ರಾಸ್ತ್ರ ಪೂರೈಸುವುದಿಲ್ಲ, ಉಪಕರಣಗಳನ್ನು ಕೊಡುವುದಿಲ್ಲ ಎಂದು ಅಮೆರಿಕಾ ಹೇಳಿದ್ದೇ ಆದರೆ, ಯುದ್ಧ ನಿಲ್ಲಬಹುದು ಎಂದಿದ್ದಾರೆ.
ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಶಾಂತಿ ಸ್ಥಾಪನೆ ಕುರಿತು ತಮ್ಮ ಹೋರಾಟಗಳನ್ನು ಸ್ಮರಿಸಿದರು. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ಶಾಂತಿ ಮಾತುಕತೆ ನಡೆಸಬೇಕು ಎಂದು ಪ್ರತಿಪಾದಿಸಿದರು.
ಇದೇ ವೇಳೆ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ಮಾನ್ಯತೆಗೆ ಬೆಂಬಲ ನೀಡಿದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಪ್ರಯತ್ನಗಳನ್ನು ಟ್ರಂಪ್ ತಿರಸ್ಕರಿಸಿದ್ದು, ಇದು ಹಮಾಸ್ ಉಗ್ರಗಾಮಿಗಳಿಗೆ ಪ್ರತಿಫಲವಾಗುತ್ತದೆ ಎಂದು ಹೇಳಿದ್ದರು.