ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ Fraud Czar ನ್ನಾಗಿ ನೇಮಿಸುತ್ತಿರುವುದಾಗಿ ಹೇಳಿದ್ದಾರೆ.
ಇದಕ್ಕೂ ಮೊದಲು ಟ್ರಂಪ್ ಇರಾನ್ ಯುದ್ಧದ ನಡುವೆ ಅಮೆರಿಕದ ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲಾಗಿತ್ತು. ಯುದ್ಧದ ಬಿಸಿಯಲ್ಲಿರುವ ಅಮೆರಿಕಾದಲ್ಲಿ ಟ್ರಂಪ್ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಈಗ ಅಮೆರಿಕಾದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ಟ್ರಂಪ್ Fraud Czar ಪಟ್ಟ ಕಟ್ಟಿದ್ದಾರೆ. ತಮ್ಮ ಹೊಸ ಜವಾಬ್ದಾರಿಯಲ್ಲಿ ಜೆಡಿ ವ್ಯಾನ್ಸ್ ಡೆಮಾಕ್ರಾಟ್ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಗಮನಹರಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ತಮ್ಮ ಈ ನಿರ್ಧಾರದಿಂದ ದೇಶದ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದಲ್ಲಿ Fraud Czar ಜವಾಬ್ದಾರಿ ತೆಗೆದುಕೊಂಡ ಬಳಿಕ ವ್ಯಾನ್ಸ್ “ಮೋಸ” ಪ್ರಕರಣಗಳ ತನಿಖೆಯನ್ನು ನೋಡಿಕೊಳ್ಳಲಿದ್ದಾರೆ.
“ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈಗ ಅಮೆರಿಕಾದಲ್ಲಿನ ‘ಮೋಸ’ ಜಾಲದ ತನಿಖೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಬಹಳ ದೊಡ್ಡ ಜಾಲವಾಗಿದ್ದು, ಎಲ್ಲೆಡೆ ವ್ಯಾಪಿಸಿದೆ. ಟ್ರಂಪ್ ಆಡಳಿತದೊಳಗಿನ ಅನೇಕ ಶ್ರೇಷ್ಠ ವ್ಯಕ್ತಿಗಳೊಂದಿಗೆ ಸೇರಿ ವ್ಯಾನ್ಸ್ ಮಾಡುವ ಕೆಲಸ, ನಮ್ಮ ದೇಶದ ಭವಿಷ್ಯ ಎಷ್ಟು ಮಹಾನ್ ಆಗಬಹುದು ಎಂಬುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಟ್ರಂಪ್ ಬರೆದಿದ್ದಾರೆ.
ವ್ಯಾನ್ಸ್ ಅವರ ಕಾರ್ಯಕ್ಷೇತ್ರ “ಎಲ್ಲೆಡೆ” ಇರಲಿದೆ, ಆದರೆ ಮುಖ್ಯವಾಗಿ ಡೆಮಾಕ್ರಾಟ್ ಆಡಳಿತದ ರಾಜ್ಯಗಳಲ್ಲಿ ಇರಲಿದೆ ಎಂದು ಹೇಳಿದ್ದಾರೆ. ಕ್ಯಾಲಿಫೋರ್ನಿಯಾ, ಇಲಿನಾಯ್ಸ್ ಮತ್ತು ಮಿನೆಸೋಟಾ ರಾಜ್ಯಗಳನ್ನು ವಿಶೇಷವಾಗಿ ಉಲ್ಲೇಖಿಸಿದರು. ಲಾಸ್ ಏಂಜಲ್ಸ್‌ನಲ್ಲಿ “ದಾಳಿಗಳು” ಈಗಾಗಲೇ ಆರಂಭವಾಗಿವೆ ಎಂದು ಅವರು ಹೇಳಿದರು.
“ನಾವು ಅವರನ್ನು ‘Fraud Czar’ ಎಂದು ಕರೆಯುತ್ತೇವೆ, ಅವರ ಗಮನ ‘ಎಲ್ಲೆಡೆ’ ಇರಲಿದೆ, ಆದರೆ ವಿಶೇಷವಾಗಿ ಆ ನೀಲಿ ರಾಜ್ಯಗಳಲ್ಲಿ, ಅಲ್ಲಿ ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಮಿನೆಸೋಟಾ (ಸೊಮಾಲಿಯಾ ಎಚ್ಚರ!), ಮೇನ್, ನ್ಯೂಯಾರ್ಕ್ ಮತ್ತು ಇನ್ನೂ ಅನೇಕ ಕಡೆಗಳಲ್ಲಿರುವ ಭ್ರಷ್ಟ ಡೆಮಾಕ್ರಾಟ್ ರಾಜಕಾರಣಿಗಳು ತೆರಿಗೆದಾರರ ಹಣವನ್ನು ಅಪೂರ್ವ ಮಟ್ಟದಲ್ಲಿ ದೋಚಲು ‘ಮುಕ್ತ ಅವಕಾಶ’ ಪಡೆದಿದ್ದಾರೆ. ಅಲ್ಲಿ ನಡೆಯುತ್ತಿರುವ ಹಣದ ದೋಚುವ ಪ್ರಮಾಣ ಇಷ್ಟು ದೊಡ್ಡದಾಗಿದೆ, ನಾವು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರೆ ಅಮೆರಿಕಾದ ಬಜೆಟ್‌ನ್ನು ನೇರವಾಗಿ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಲಾಸ್ ಏಂಜಲ್ಸ್‌ನಲ್ಲಿ ದಾಳಿಗಳು ಈಗಾಗಲೇ ಆರಂಭವಾಗಿವೆ. ಜೆಡಿ ವ್ಯಾನ್ಸ್ ಗೆ ಶುಭಾಶಯಗಳು!” ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ತಿಂಗಳು ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಹಣಾ ಆದೇಶದ ಮೂಲಕ, ವ್ಯಾನ್ಸ್ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆಗೆ ಚಾಲನೆ ನೀಡಲಾಗಿದ್ದು, ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಮೀಸಲಾದ ಫೆಡರಲ್ ನಿಧಿಗಳನ್ನು ಕೆಲವು ರಾಜ್ಯಗಳಲ್ಲಿ ಕಳವು ಮಾಡಲಾಗುತ್ತಿದೆ ಎಂಬ ಅಧ್ಯಕ್ಷರ ಆರೋಪಗಳನ್ನು ಸಾಬೀತುಪಡಿಸುವುದು ಈ ಕಾರ್ಯಪಡೆಯ ಉದ್ದೇಶವಾಗಿದೆ.