ಢಾಕಾ: ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಅಂಡಮಾನ್ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಪರಿಣಾಮ ಮಕ್ಕಳು ಸೇರಿದಂತೆ ಸುಮಾರು 250 ಜನರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ಬಾಂಗ್ಲಾದೇಶದ ಟೆಕ್ನಾಫ್‌ನಿಂದ ಮಲೇಷ್ಯಾಕ್ಕೆ ಹೊರಟಿದ್ದ ದೋಣಿ ಬಿರುಗಾಳಿ, ಅಲೆಗಳ ಅಬ್ಬರ ಮತ್ತು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತೊಯ್ಯುತ್ತಿದ್ದ ಪರಿಣಾಮ ದೋಣಿ ಮಗುಚಿ ಬಿದ್ದಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೋಣಿಯಲ್ಲಿ ರೊಹಿಂಗ್ಯಾ ನಿರಾಶ್ರಿತರು ಹಾಗೂ ಬಾಂಗ್ಲಾದೇಶದ ನಾಗರಿಕರು ಇದ್ದರು ಎಂದು ಹೇಳಲಾಗುತ್ತಿದೆ. ಬಹುತೇಕರು ಮ್ಯಾನ್ಮಾರ್‌ನ ರಖೈನ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಪಾರಾಗಲು ಪ್ರಯತ್ನಿಸುತ್ತಿದ್ದವರಾಗಿದ್ದರು ಎನ್ನಲಾಗಿದೆ.
ಮಯನ್ಮಾರ್‌ನ ರಾಖೈನ್ ಪ್ರದೇಶದಲ್ಲಿ ಹಿಂಸಾಚಾರವು ಮುಂದುವರೆದಿದ್ದು, ಅವರು ಮರಳಿ ಅಲ್ಲಿಗೆ ಹಿಂದಿರುಗುವುದು ಅನಿಶ್ಚಿತವಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಮಾನವೀಯ ನೆರವು ಸೀಮಿತವಾಗಿರುವುದು, ನಿರುದ್ಯೋಗ ಮತ್ತು ಶಿಕ್ಷಣದ ಸೌಲಭ್ಯಗಳು ಇಲ್ಲದೇ ಇರುವುದು ಅವರನ್ನು ಅಪಾಯಕಾರಿ ಸಮುದ್ರ ಪ್ರಯಾಣಗಳಿಗೆ ತಳ್ಳುತ್ತಿದೆ. ವಿದೇಶಗಳಲ್ಲಿ ಉತ್ತಮ ಅವಕಾಶ ಸಿಗುವ ಭರವಸೆಯಿಂದ ಅಪಾಯಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ಮತ್ತು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್(ಐಒಎಂ) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಮಯನ್ಮಾರ್‌ನ ಹತ್ತು ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳು ಬಾಂಗ್ಲಾದೇಶದಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಅವರಿಗೆ ಅಂತರರಾಷ್ಟ್ರೀಯ ಸಮುದಾಯವು ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ದೋಣಿಯಲ್ಲಿ ಸುಮಾರು 280 ಮಂದಿ ಇದ್ದು, ಏಪ್ರಿಲ್ 4ರಂದು ಪ್ರಯಾಣ ಆರಂಭಿಸಿತ್ತು. ದೋಣಿ ನಾಲ್ಕು ದಿನಗಳ ಪ್ರಯಾಣ ನಡೆಸಿದ್ದು, ನಂತರ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಬದುಕುಳಿದವರಲ್ಲಿ ಒಬ್ಬರಾದ ರಫೀಕುಲ್ ಇಸ್ಲಾಂ ಎಂಬುವವರು ಮಾತನಾಡಿ, “ಮಲೇಷ್ಯಾದಲ್ಲಿ ಉದ್ಯೋಗ ಸಿಗುತ್ತದೆ ಎಂದು ವಂಚಿಸಿ ನಮ್ಮನ್ನು ಕರೆದೊಯ್ಯಲಾಗುತ್ತಿತ್ತು. ನಮ್ಮಲ್ಲಿ ಹಲವರನ್ನು ಟ್ರಾಲರ್ (ಸಮುದ್ರದ ಆಳದಲ್ಲಿ ಮೀನುಗಾರಿಕೆ ನಡೆಸಲು ಬಳಸುವ ವಿಶೇಷ ದೋಣಿ) ಇರಿಸಲಾಗಿತ್ತು. ಟ್ರಾಲರ್ ನಿಂದ ಸೋರಿಕೆಯಾದ ಎಣ್ಣೆಯಿಂದ ಕೆಲವರು ಅಲ್ಲಿಯೇ ಸಾವನ್ನಪ್ಪಿದರು. ನಾನೂ ಸುಟ್ಟ ಗಾಯಗಳಿಂದ ಬಳಲುತ್ತಿದ್ದೆ. ದೋಣಿ ನಾಲ್ಕು ದಿನಗಳ ಕಾಲ ಪ್ರಯಾಣ ನಡೆಸಿದ್ದು, ನಂತರ ಮಗುಚಿ ಬಿದ್ದಿತು. ಸುಮಾರಪು 36 ಗಂಟೆಗಳ ಕಾಲ ತೇಲುತ್ತಲೇ ನಾನು ಬದುಕುಳಿದೆ. ನಂತರ ನಮ್ಮನ್ನು ರಕ್ಷಣೆ ಮಾಡಿದರು ಎಂದು ಹೇಳಿದ್ದಾರೆ.