ಚಂಡೀಗಢ: ಕಳೆದ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಭಾರತೀಯ ಪ್ರಜೆಗಳ ಮೇಲಿನ ದಾಳಿಗಳ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಕೆನಡಾ ದೇಶಗಳಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಸಂಸತ್ ಗೆ ಮಾಹಿತಿ ನೀಡಿದೆ.
2021 ಮತ್ತು 2025ರ ನಡುವೆ ಅಮೆರಿಕದಲ್ಲಿ ಇಂತಹ 33 ದಾಳಿ ಘಟನೆಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಯುಎಇ, ಯುಕೆ ಮತ್ತು ಕೆನಡಾಗಳಲ್ಲಿ ಕ್ರಮವಾಗಿ 32, 31 ಮತ್ತು 30 ದಾಳಿಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ವಿದೇಶದಲ್ಲಿ ವಾಸಿಸುವ ಭಾರತೀಯರ ಮೇಲಿನ ದಾಳಿಗಳ ಸಂಖ್ಯೆ ಸುಮಾರು ಏಳು ಪಟ್ಟು ಹೆಚ್ಚಾಗಿದೆ.
2021ರಲ್ಲಿ 15ರಷ್ಟಿದ್ದ ಈ ಸಂಖ್ಯೆ 2025ರಲ್ಲಿ 104ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ದಾಳಿಗಳು ವರದಿಯಾಗಿರುವ ಅಮೆರಿಕ, ಯುಎಇ, ಯುಕೆ ಮತ್ತು ಕೆನಡಾ ಹೊರತುಪಡಿಸಿ, ಐರ್ಲೆಂಡ್, ರಷ್ಯಾ ಮತ್ತು ಜರ್ಮನಿ ದೇಶಗಳಲ್ಲಿ ಕ್ರಮವಾಗಿ 24, 23 ಮತ್ತು 19 ಪ್ರಕರಣಗಳು ವರದಿಯಾಗಿವೆ ಎಂದು 36 ದೇಶಗಳು ಮತ್ತು ಪ್ರದೇಶಗಳನ್ನು ಒಳಗೊಂಡಿರುವ ದತ್ತಾಂಶವು ತಿಳಿಸಿದೆ. ಇದೇ ಅವಧಿಯಲ್ಲಿ ಭಾರತೀಯರ ಮೇಲಿನ ದಾಳಿಗಳ ಒಟ್ಟು 302 ಪ್ರಕರಣಗಳು ವರದಿಯಾಗಿವೆ.
2021ರಲ್ಲಿ 15, 2022ರಲ್ಲಿ 31, 2023ರಲ್ಲಿ 67, 2024ರಲ್ಲಿ 85 ಮತ್ತು ಕಳೆದ ವರ್ಷ 104 ದಾಳಿಗಳು ನಡೆದಿವೆ. ಅಮೆರಿಕದಲ್ಲಿ 2025ರಲ್ಲಿ ಅತಿ ಹೆಚ್ಚು 14 ಭಾರತೀಯರ ಮೇಲೆ ದಾಳಿ ನಡೆದಿದೆ. 2024ರಲ್ಲಿ 11, 2023ರಲ್ಲಿ ಒಂದು, 2022ರಲ್ಲಿ ಆರು ಮತ್ತು 2021ರಲ್ಲಿ ಒಂದು ದಾಳಿ ನಡೆದಿದೆ.
ಅಮೆರಿಕದಲ್ಲಿ ವಲಸೆ ನೀತಿ, ಅದರಲ್ಲೂ ವಿಶೇಷವಾಗಿ ಭಾರತೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆಯುವ 'H-1B ವೀಸಾ' ಕಾರ್ಯಕ್ರಮದ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಈ ಅಂಕಿಅಂಶಗಳು ಹೊರಬಿದ್ದಿವೆ. ಕಳೆದ ವರ್ಷದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಅಮೆರಿಕದ ಬಲಪಂಥೀಯ ಗುಂಪುಗಳ ವಲಯದಲ್ಲಿ ಭಾರತೀಯ ವಲಸಿಗರು ಮತ್ತು ದಕ್ಷಿಣ ಏಷ್ಯಾದವರ ವಿರುದ್ಧ ಆನ್‌ಲೈನ್‌ನಲ್ಲಿ ದ್ವೇಷಪೂರಿತ ವರ್ತನೆ ಹೆಚ್ಚಾಗಿದೆ. ಕೆನಡಾದಲ್ಲಿಯೂ ದಾಳಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, 2021ರಲ್ಲಿ ಮೂರು ಪ್ರಕರಣಗಳಿದ್ದರೆ, 2022 ಮತ್ತು 2023ರಲ್ಲಿ ತಲಾ ಆರು, 2024ರಲ್ಲಿ ಏಳು ಮತ್ತು 2025ರಲ್ಲಿ ಎಂಟು ಪ್ರಕರಣಗಳು ವರದಿಯಾಗಿವೆ.
ಯುಕೆಯಲ್ಲಿ 2021ರಲ್ಲಿ ಒಂದು ಪ್ರಕರಣ ದಾಖಲಾಗಿತ್ತು. 2022ರಲ್ಲಿ ನಾಲ್ಕು, 2023ರಲ್ಲಿ 11, 2024ರಲ್ಲಿ10, 2025ರಲ್ಲಿ ಐದು ದಾಳಿ ಪ್ರಕರಣಗಳು ವರದಿಯಾಗಿವೆ. ಕುತೂಹಲಕಾರಿ ಸಂಗತಿ ಎಂದರೆ, ಮಾಲಿಯಲ್ಲೂ 2025ರಲ್ಲಿ 11 ದಾಳಿ ಪ್ರಕರಣ ವರದಿಯಾಗಿದೆ. ಜರ್ಮನಿಯಲ್ಲಿ 2024ರಲ್ಲಿ 12 ಪ್ರಕರಣಗಳು ದಾಖಲಾಗಿವೆ. ಐರ್ಲೆಂಡ್ ನಲ್ಲಿ 2021 ಮತ್ತು 2022ರಲ್ಲಿ ತಲಾ ಒಂದು ದಾಳಿ ಪ್ರಕರಣ ನಡೆದಿತ್ತು. 2023ರಲ್ಲಿ ಐದು, 2024ರಲ್ಲಿ ಏಳು ಮತ್ತು 2025ರಲ್ಲಿ 10 ದಾಳಿ ಪ್ರಕರಣ ವರದಿಯಾಗಿದೆ. ರಷ್ಯಾದಲ್ಲಿ 2023ರಲ್ಲಿ 12 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 2 ಪ್ರಕರಣ ಹಾಗೂ 2025ರಲ್ಲಿ 8 ದಾಳಿ ಪ್ರಕರಣಗಳು ವರದಿಯಾಗಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಮೇಲೆ ಪರಿಣಾಮ ಬೀರುವ ಯಾವುದೇ ಅಹಿತಕರ ಘಟನೆಗಳ ಬಗ್ಗೆ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ನಿಗಾ ವಹಿಸುತ್ತವೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತವೆ" ಎಂದು ಹೇಳಿದರು. ಅಂತಹ ಘಟನೆಗಳು ನಡೆದಾಗ ಪ್ರಕರಣಗಳ ಸರಿಯಾದ ತನಿಖೆ ನಡೆಯುವುದನ್ನು ಮತ್ತು ಅಪರಾಧಿಗಳಿಗೆ ಆಯಾ ದೇಶದ ಕಾನೂನುಗಳ ಪ್ರಕಾರ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ದೇಶದ ಅಧಿಕಾರಿಗಳೊಂದಿಗೆ ತಕ್ಷಣವೇ ವಿಷಯವನ್ನು ಪ್ರಸ್ತಾಪಿಸಲಾಗುತ್ತದೆ ಎಂದು ಸಿಂಗ್ ತಿಳಿಸಿದರು.
ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ, ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಲ್ಲಿ ಸ್ಥಾಪಿಸಲಾಗಿರುವ 'ಭಾರತೀಯ ಸಮುದಾಯ ಕಲ್ಯಾಣ ನಿಧಿ'ಯನ್ನು (Indian Community Welfare Fund) ಆರ್ಥಿಕ ಅಗತ್ಯತೆ ಮತ್ತು ಅರ್ಹತೆಯ ಆಧಾರದ ಮೇಲೆ ತುರ್ತು ವೆಚ್ಚಗಳನ್ನು ಭರಿಸಲು ಬಳಸಲಾಗುತ್ತದೆ. ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವಾಗಲು ಸರ್ಕಾರವು ದುಬೈ, ಶಾರ್ಜಾ, ರಿಯಾದ್, ಜೆಡ್ಡಾ ಮತ್ತು ಕೌಲಾಲಂಪುರ್‌ನಲ್ಲಿ 'ಪ್ರವಾಸಿ ಭಾರತೀಯ ಸಹಾಯ ಕೇಂದ್ರ'ಗಳನ್ನು ಸಹ ಸ್ಥಾಪಿಸಿದೆ ಎಂದು ಅವರು ಮಾಹಿತಿ ನೀಡಿದರು.