ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಇರಾನ್, ಅಮೆರಿಕದ ಯುದ್ಧ ತಂತ್ರವನ್ನೇ ಬದಲಿಸುವಂತೆ ಮಾಡಿದೆ. ಇರಾನ್ ಪರಮಾಣು ಅಸ್ತ್ರ ಪಡೆಯದಂತೆ ತಡೆಯುವುದಕ್ಕಿಂತ ಅಮೆರಿಕನ್ನರಿಗೆ ತೈಲ ಮತ್ತು ಪೆಟ್ರೋಲ್ ಬೆಲೆ ಕಡಿಮೆ ಮಾಡುವುದು ಈಗ ಮೊದಲ ಆದ್ಯತೆ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
ಇದೇ ವೇಳೆ ಇರಾನ್ ಮೇಲೆ ಮತ್ತಷ್ಟು ಕಠಿಣ ಆರ್ಥಿಕ ಕ್ರಮಗಳನ್ನು ಜಾರಿಗೊಳಿಸುವುದಾಗಿ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವೇ ಇದೀಗ ಯುದ್ಧದ ಪ್ರಮುಖ ಕೇಂದ್ರಬಿಂದುವಾಗಿ ಬದಲಾಗಿರುವುದನ್ನು ಸೂಚಿಸಿದೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೆ.ಡಿ. ವ್ಯಾನ್ಸ್, ಅಮೆರಿಕದ ಜನರಿಗೆ ತೈಲ ಮತ್ತು ಅನಿಲವನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಮೊದಲ ಗುರಿಯಾಗಿದೆ ಎಂದು ಹೇಳಿದ್ದಾರೆ. ಇರಾನ್ ಪರಮಾಣು ಅಸ್ತ್ರ ಪಡೆಯದಂತೆ ತಡೆಯುವುದು ಎರಡನೇ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತೈಲದ ಬೆಲೆ ಈಗ ಇಳಿಕೆಯಾಗಿದೆ. ಸಂಘರ್ಷದ ಆರಂಭದ ದಿನಗಳಲ್ಲಿ ಕಂಡ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಈಗ ಸಾಕಷ್ಟು ಕಡಿಮೆಯಾಗಿದೆ. ಅಮೆರಿಕದಾದ್ಯಂತ ಜನರಿಗೆ ತೈಲ ಮತ್ತು ಅನಿಲದ ಬೆಲೆ ಕೈಗೆಟುಕುವಂತಾಗುವುದು ನಮ್ಮ ಮೊದಲ ಗುರಿ. ನಂತರ ಇರಾನ್ ಎಂದಿಗೂ ಪರಮಾಣು ಅಸ್ತ್ರ ಹೊಂದದಂತೆ ನೋಡಿಕೊಳ್ಳುವುದು ಎರಡನೇ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಟ್ರಂಪ್ ಆಡಳಿತದ ನಿಲುವಿನಲ್ಲಿ ಈ ಬದಲಾವಣೆ ಗಮನಾರ್ಹವಾಗಿದೆ. ಇರಾನ್ ವಿರುದ್ಧದ ಯುದ್ಧ ಆರಂಭವಾದಾಗಿನಿಂದಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಪರಮಾಣು ಅಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಯುವುದೇ ತಮ್ಮ ಪ್ರಮುಖ ಉದ್ದೇಶ ಎಂದು ಹೇಳುತ್ತಿದ್ದರು. ಆದರೆ, ಇದೀಗ ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆ ಸ್ಥಗಿತಗೊಂಡಿರುವುದು ಅಮೆರಿಕದ ಆರ್ಥಿಕತೆ ಮತ್ತು ಜನರ ಮೇಲೆ ನೇರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಜಗತ್ತಿನ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಅಪಾರ ಪ್ರಮಾಣದ ಕಚ್ಚಾ ತೈಲ ಮತ್ತು ಇಂಧನ ಸಾಗಣೆ ನಡೆಯುತ್ತದೆ. ಯುದ್ಧಕ್ಕೂ ಮುನ್ನ ಈ ಜಲಸಂಧಿ ಸಾಮಾನ್ಯವಾಗಿ ಮುಕ್ತವಾಗಿತ್ತು. ಆದರೆ ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ದಾಳಿ ಆರಂಭಿಸಿದ ಬಳಿಕ ಇರಾನ್ ಜಲಸಂಧಿಯ ಮೂಲಕದ ಸಂಚಾರವನ್ನು ಬಹುತೇಕ ಸ್ಥಗಿತಗೊಳಿಸಿದೆ.
ಇದರಿಂದ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ಹೊಸ ಸವಾಲು ಎದುರಾಗಿದೆ. ಪರಮಾಣು ಕಾರ್ಯಕ್ರಮದ ವಿಚಾರದಲ್ಲಿ ಇರಾನ್ ಮೇಲೆ ಒತ್ತಡ ಹೇರುವುದರ ಜತೆಗೆ, ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಇರಾನ್ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಹಾರ್ಮುಜ್ ಜಲಸಂಧಿಯನ್ನು ಬಳಸುವ ಹಡಗುಗಳು ಅನುಮತಿ ಪಡೆಯಬೇಕು ಹಾಗೂ ಸಾಗಣೆ ಶುಲ್ಕ ಪಾವತಿಸಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಟ್ರಂಪ್ ಆಡಳಿತಕ್ಕೆ ಅತ್ಯಂತ ಪ್ರಮುಖ ಗುರಿಯಾಗಿದೆ. ತೈಲ ಸಾಗಣೆ ಸುಗಮವಾಗದಿದ್ದರೆ ಇಂಧನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು ಅಮೆರಿಕದ ಗ್ರಾಹಕರಿಗೆ ಮಾತ್ರವಲ್ಲದೆ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯ ನಡುವೆಯೇ ಅಮೆರಿಕಾ ಆರ್ಥಿಕ ಸಚಿವ ಸ್ಕಾಟ್ ಬೆಸೆಂಟ್ ಇರಾನ್ ವಿರುದ್ಧ ಮತ್ತಷ್ಟು ಕಠಿಣ ಆರ್ಥಿಕ ಕ್ರಮಗಳ ಸುಳಿವು ನೀಡಿದ್ದಾರೆ. ಇರಾನ್ ಅನ್ನು “ಜಗತ್ತು ಹಿಂದೆಂದೂ ಕಂಡಿರದ ರೀತಿಯ ಆರ್ಥಿಕ ಪ್ರತ್ಯೇಕತೆಗೆ” ಗುರಿಪಡಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಮುಂದಿನ ವಾರ ಹೊಸ ಆರ್ಥಿಕ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ತಂತ್ರ ಇದೀಗ ನೇರ ಮಿಲಿಟರಿ ದಾಳಿಗಿಂತ ಆರ್ಥಿಕ ಒತ್ತಡಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವಂತೆ ಕಾಣುತ್ತಿದೆ. ಇರಾನ್ ಬಂದರುಗಳ ಮೇಲೆ ನಾಕಾಬಂದಿ ಮುಂದುವರಿಸುವುದು, ದೇಶದ ತೈಲ ಮಾರಾಟಕ್ಕೆ ಅಡ್ಡಿಪಡಿಸುವುದು ಮತ್ತು ಹಣಕಾಸು ವ್ಯವಸ್ಥೆಯ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವುದು ಈ ತಂತ್ರದ ಭಾಗವಾಗಿರಬಹುದು.
ಇತ್ತೀಚೆಗಷ್ಟೇ ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಕುರಿತು ಇರಾನ್ ಜತೆ ಒಪ್ಪಂದ ಶೀಘ್ರದಲ್ಲೇ ಸಾಧ್ಯವಾಗಬಹುದು ಎಂಬ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅವರ ಆಡಳಿತದ ಹೇಳಿಕೆಗಳು ಹೆಚ್ಚು ಎಚ್ಚರಿಕೆಯ ಮತ್ತು ಕಠಿಣ ನಿಲುವಿನತ್ತ ತಿರುಗಿರುವುದು ಕಂಡುಬರುತ್ತಿದೆ. ರಾಜತಾಂತ್ರಿಕ ಮಾತುಕತೆಗಳು ನಿಧಾನಗೊಂಡಿರುವ ನಡುವೆ ಇರಾನ್‌ನ ಆರ್ಥಿಕ ಸಂಕಷ್ಟವನ್ನು ಹೆಚ್ಚಿಸುವ ಮೂಲಕ ಅದನ್ನು ಒಪ್ಪಂದಕ್ಕೆ ಬರುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
“ನಾವು ಇದನ್ನು ನಿಧಾನವಾಗಿ ಮಾಡುತ್ತಿದ್ದೇವೆ. ನಾವು ಅವರೊಂದಿಗೆ ಅರ್ಧಮನಸ್ಸಿನಿಂದ ಮಾತುಕತೆ ನಡೆಸುತ್ತಿದ್ದೇವೆ. ಇರಾನ್‌ನಲ್ಲಿ ಭಾರೀ ಹಣದುಬ್ಬರವಿದೆ ಮತ್ತು ಅವರ ಬಳಿ ಹಣವಿಲ್ಲ” ಎಂದು ಟ್ರಂಪ್ ಹೇಳಿದ್ದರು.
ಇದರ ನಡುವೆ ಯುದ್ಧದಿಂದ ಅಮೆರಿಕದ ಮೇಲೂ ಆರ್ಥಿಕ ಮತ್ತು ರಾಜಕೀಯ ಒತ್ತಡ ಹೆಚ್ಚುತ್ತಿದೆ. ಸಂಘರ್ಷ ಆರಂಭವಾದ ಬಳಿಕ ತೈಲ ಬೆಲೆ ಏರಿಕೆಯಾಗಿರುವುದು ಅಮೆರಿಕದ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಇಂಧನ ಬೆಲೆ ಏರಿಕೆ ಮುಂದುವರಿದರೆ ಮುಂಬರುವ ನವೆಂಬರ್ ಮಧ್ಯಂತರ ಚುನಾವಣೆಗಳಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷಕ್ಕೆ ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂಬ ಆತಂಕವೂ ಇದೆ.
ಯುದ್ಧದ ವೆಚ್ಚವೂ ಅಮೆರಿಕಕ್ಕೆ ದೊಡ್ಡ ಸವಾಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅಮೆರಿಕ ಸೇನೆ ದುಬಾರಿ ಮತ್ತು ಅತ್ಯಾಧುನಿಕ ಕ್ಷಿಪಣಿಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಇದಕ್ಕಾಗಿ ಕೋಟ್ಯಂತರ ಡಾಲರ್ ವೆಚ್ಚವಾಗಿದ್ದು, ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹದ ಮೇಲೂ ಒತ್ತಡ ಉಂಟಾಗಿದೆ ಎನ್ನಲಾಗಿದೆ. ಹೀಗಾಗಿ ಇರಾನ್ ವಿರುದ್ಧ ಮತ್ತೊಮ್ಮೆ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸುವ ಸಾಮರ್ಥ್ಯ ಮತ್ತು ಆಯ್ಕೆಗಳ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ.
ಇರಾನ್ ಕೂಡ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ತನ್ನದೇ ಆದ ಷರತ್ತುಗಳನ್ನು ಮುಂದಿಟ್ಟಿದೆ. ಎಲ್ಲ ರಂಗಗಳಲ್ಲೂ ಯುದ್ಧವನ್ನು ಅಂತ್ಯಗೊಳಿಸುವುದು, ಇರಾನ್ ಬಂದರುಗಳ ಮೇಲಿನ ಅಮೆರಿಕದ ನಾಕಾಬಂದಿ ತೆರವುಗೊಳಿಸುವುದು, ಅಮೆರಿಕದ ನಿರ್ಬಂಧಗಳನ್ನು ತೆಗೆದುಹಾಕುವುದು, ಸ್ಥಗಿತಗೊಳಿಸಿರುವ ಇರಾನ್‌ನ ಆಸ್ತಿಗಳನ್ನು ಬಿಡುಗಡೆ ಮಾಡುವುದು ಹಾಗೂ ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇರಾನ್ ಮುಂದಿಟ್ಟಿದೆ.
ಆದರೆ, ಇರಾನ್‌ನ ಈ ಬೇಡಿಕೆಗಳನ್ನು ಟ್ರಂಪ್ ಆಡಳಿತ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದೇ ರೀತಿಯ ಷರತ್ತುಗಳನ್ನು ಒಳಗೊಂಡ ಒಪ್ಪಂದವೊಂದು ಜೂನ್‌ನಲ್ಲಿ ರೂಪುಗೊಂಡಿದ್ದರೂ, ನಂತರ ಮತ್ತೆ ಸಂಘರ್ಷ ಆರಂಭವಾದ ಕಾರಣ ಅದು ವಿಫಲವಾಗಿತ್ತು. ಆ ಒಪ್ಪಂದದಲ್ಲಿ ಇರಾನ್‌ನ ಪುನರ್‌ನಿರ್ಮಾಣಕ್ಕಾಗಿ 300 ಬಿಲಿಯನ್ ಡಾಲರ್ ನಿಧಿ ಸ್ಥಾಪಿಸುವ ಪ್ರಸ್ತಾವವೂ ಸೇರಿತ್ತು.
ಒಟ್ಟಾರೆ, ಇರಾನ್ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಗುರಿಯಿಂದ ಆರಂಭವಾದ ಅಮೆರಿಕದ ಯುದ್ಧ ಇದೀಗ ತೈಲ ಬೆಲೆ, ಹೋರ್ಮುಜ್ ಜಲಸಂಧಿ ಮತ್ತು ಆರ್ಥಿಕ ಒತ್ತಡದ ಸುತ್ತ ಹೆಚ್ಚು ಕೇಂದ್ರೀಕೃತವಾಗುತ್ತಿರುವಂತೆ ಕಾಣುತ್ತಿದೆ.
ಹಾರ್ಮುಜ್ ಜಲಸಂಧಿ ಯಾವಾಗ ಮತ್ತೆ ಸಂಪೂರ್ಣವಾಗಿ ತೆರೆಯಲಿದೆ ಎಂಬುದು ಸ್ಪಷ್ಟವಾಗದಿರುವುದರಿಂದ ಮುಂದಿನ ದಿನಗಳಲ್ಲಿ ಜಾಗತಿಕ ತೈಲ ಬೆಲೆ ಮತ್ತು ಇಂಧನ ಪೂರೈಕೆಯ ಮೇಲೆ ಈ ಸಂಘರ್ಷದ ಪರಿಣಾಮ ಮುಂದುವರಿಯುವ ಸಾಧ್ಯತೆ ಇದೆ.