ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರ ಜಾಲದ ಕುರಿತು ಪಾಕಿಸ್ತಾನದಲ್ಲೇ ಕೇಳಿಬಂದಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾಶ್ಮೀರಕ್ಕೆ ಕಳುಹಿಸಿದ್ದ ಎಂದು ಪಾಕಿಸ್ತಾನಿ ಧರ್ಮಗುರು ಮೌಲಾನಾ ನಾಸಿರ್ ಮದನಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಯೀದ್ ಪರವಾಗಿ ಮಾತನಾಡುವ ವೇಳೆ ಮದನಿ ನೀಡಿರುವ ಈ ಹೇಳಿಕೆ, ಕಾಶ್ಮೀರದತ್ತ ಉಗ್ರರ ರವಾನೆ ಕುರಿತು ಭಾರತ ಹಲವು ವರ್ಷಗಳಿಂದ ಮಾಡುತ್ತಿರುವ ಆರೋಪಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಬಹವಲ್ಪುರದಲ್ಲಿ ಪಾಕಿಸ್ತಾನ್ ಮಾರ್ಕಜಿ ಮುಸ್ಲಿಂ ಲೀಗ್ (PMML) ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಮೌಲಾನಾ ನಾಸಿರ್ ಮದನಿ ಈ ಹೇಳಿಕೆ ನೀಡಿದ್ದಾರೆ. PMML ಪಕ್ಷವು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ.
‘10,000 ಯುವಕರನ್ನು ಕಾಶ್ಮೀರಕ್ಕೆ ಕಳುಹಿಸಿದ್ದ’
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಾಷಣದ ವಿಡಿಯೋದಲ್ಲಿ ಮದನಿ, ಪ್ರಸ್ತುತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಫೀಜ್ ಸಯೀದ್‌ರನ್ನು ಸಮರ್ಥಿಸಿಕೊಂಡಿದ್ದಾರೆ. ಸಯೀದ್ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿರುವುದು ಕಂಡು ಬಂದಿದೆ.
“ಈ ಹಫೀಜ್ ಸಯೀದ್ ತ್ಯಾಗ ಮಾಡಿದ್ದಾರೆ. ಇಂದು ಅವರು ಜೈಲಿನಲ್ಲಿದ್ದಾರೆ” ಎಂದು ಮದನಿ ಹೇಳಿದ್ದಾರೆ. ಬಳಿಕ ಸಯೀದ್ “10,000 ಯುವಕರನ್ನು ಕಾಶ್ಮೀರಕ್ಕಾಗಿ ಹಾಗೂ ತ್ಯಾಗಕ್ಕಾಗಿ ಕಳುಹಿಸಿದ್ದರು” ಎಂದು ಹೇಳಿರುವುದು ಕಂಡು ಬಂದಿದೆ.
ಈ ಯುವಕರನ್ನು ‘ಕಮಾಂಡೋಗಳು’ ಎಂದೂ ಮದನಿ ಉಲ್ಲೇಖಿಸಿದ್ದು, ಸಯೀದ್ ಜೈಲಿನಲ್ಲಿರುವಾಗ ಅವರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರ ಹೇಳಿಕೆ ಹಫೀಜ್ ಸಯೀದ್ ಹಾಗೂ ಕಾಶ್ಮೀರದತ್ತ ಉಗ್ರರ ಸಾಗಣೆಯ ನಡುವಿನ ನೇರ ಸಂಪರ್ಕವನ್ನು ಸೂಚಿಸುವಂತಿದೆ.
ಭಾರತದ ಆರೋಪಗಳಿಗೆ ಮತ್ತಷ್ಟು ಬಲ..!
ಹಫೀಜ್ ಸಯೀದ್ ಹಾಗೂ ಲಷ್ಕರ್-ಎ-ತೊಯ್ಬಾ ವಿರುದ್ಧ ಭಾರತ ಹಲವು ವರ್ಷಗಳಿಂದ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದೆ. ಭಾರತದಲ್ಲಿ ದಾಳಿಗಳನ್ನು ನಡೆಸಲು ಉಗ್ರರನ್ನು ನೇಮಕ ಮಾಡುವುದು, ತರಬೇತಿ ನೀಡುವುದು ಹಾಗೂ ಅವರಿಗೆ ನೆರವು ಒದಗಿಸುವಲ್ಲಿ ಸಯೀದ್ ಮತ್ತು ಲಷ್ಕರ್-ಎ-ತೊಯ್ಬಾ ಪಾತ್ರವಿದೆ ಎಂದು ಭಾರತ ಆರೋಪಿಸಿದೆ.
ಹಫೀಜ್ ಸಯೀದ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದು, ಬಳಿಕ ಜಮಾತ್-ಉದ್-ದವಾ (JuD) ಸಂಘಟನೆಯನ್ನೂ ಸ್ಥಾಪಿಸಿದ್ದಾನೆ. ವಿಶ್ವಸಂಸ್ಥೆ ಹಾಗೂ ಅಮೆರಿಕ ಸಯೀದ್‌ನನ್ನು ಭಯೋತ್ಪಾದಕ ಎಂದು ಗುರುತಿಸಿವೆ. ಅಲ್ಲದೆ, ಆತನ ಶಿಕ್ಷೆಗೆ ಕಾರಣವಾಗುವ ಮಾಹಿತಿ ನೀಡುವವರಿಗೆ ಅಮೆರಿಕ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.