ಭಯೋತ್ಪಾದಕರನ್ನು ರಕ್ಷಿಸಲು ವಿಶ್ವಸಂಸ್ಥೆಯಂತಹ ಜಾಗತಿಕ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಷ್ಟ್ರಗಳ ವಿರುದ್ಧ ಭಾರತ ಕಠಿಣ ನಿಲುವು ತಳೆದಿದೆ. ಭದ್ರತಾ ಮಂಡಳಿಯ ಸದಸ್ಯತ್ವವನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಪಾಕಿಸ್ತಾನ ಹಾಗೂ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾರ್ಯವಿಧಾನಗಳ ಕುರಿತು ನಡೆದ ಮುಕ್ತ ಚರ್ಚೆಯಲ್ಲಿ ಭಾರತದ ರಾಯಭಾರಿ ಯೋಜನಾ ಪಟೇಲ್ ಮಾತನಾಡಿ, ಭದ್ರತಾ ಮಂಡಳಿಯ ಸದಸ್ಯತ್ವವನ್ನು ‘ಸಂಕುಚಿತ ರಾಜಕೀಯ ಹಿತಾಸಕ್ತಿಗಳನ್ನು ಮುಂದುವರಿಸಲು ಬಳಸಬಾರದು ಎಂದು ಹೇಳಿದ್ದಾರೆ.
ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಭದ್ರತಾ ಮಂಡಳಿಯ ಸದಸ್ಯತ್ವವನ್ನು ಭಯೋತ್ಪಾದಕರಿಗೆ ರಕ್ಷಣೆ ನೀಡಲು ಅಥವಾ ಅವರನ್ನು ಕಪ್ಪುಪಟ್ಟಿಯಿಂದ ತೆಗೆದುಹಾಕಲು ಬಳಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಅಗತ್ಯ. ಭದ್ರತಾ ಮಂಡಳಿಯಲ್ಲಿನ ಸ್ಥಾನವನ್ನು ರಾಜಕೀಯ ಕಾರಣಗಳಿಗಾಗಿ ಭಯೋತ್ಪಾದಕರನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅವರಿಗೆ ಮಾನ್ಯತೆ ನೀಡಲು ಅಥವಾ ಇತರ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲು ಬಳಸಬಾರದು ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿಶ್ವಸಂಸ್ಥೆಯು ‘ಸಂಕುಚಿತ ರಾಜಕೀಯ ಹಿತಾಸಕ್ತಿಗಳನ್ನು’ ಬೆನ್ನಟ್ಟುವ ವೇದಿಕೆಯಾಗಬಾರದು ಎಂದು ಕಠಿಣ ಸಂದೇಶ ನೀಡಿದ್ದಾರೆ.
ನಿರ್ಧಾರಗಳನ್ನು ರಾಜಕೀಯ ಹಿತಾಸಕ್ತಿಗಳ ಆಧಾರದ ಮೇಲೆ ಅಲ್ಲ, ಸ್ಪಷ್ಟ ಸಾಕ್ಷ್ಯಗಳ ಆಧಾರದ ಮೇಲೆ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.
ಎರಡನೇ ಮಹಾಯುದ್ಧದ ನಂತರದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಭಾರತ, ವಿಶ್ವಸಂಸ್ಥೆಯ ನಿರ್ಧಾರಗಳು ಇಂದಿನ ಜಾಗತಿಕ ವಾಸ್ತವಾಂಶಗಳನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದೆ.
1945ರ ಜಗತ್ತು ಈಗ ಸಂಪೂರ್ಣವಾಗಿ ಬದಲಾಗಿದೆ. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 80 ವರ್ಷಗಳ ಹಿಂದೆ ನಡೆದ ಒಂದು ಸಂಘರ್ಷದ ಫಲಿತಾಂಶವೇ ಶಾಶ್ವತವಾಗಿ ವಿಶ್ವಸಂಸ್ಥೆಯ ರಚನೆ ಮತ್ತು ಕಾರ್ಯವಿಧಾನವನ್ನು ನಿರ್ಧರಿಸಬಾರದು. ಈ ಬದಲಾವಣೆ ತಕ್ಷಣ ಆಗಬೇಕು ಎಂದು ತಿಳಿಸಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಭಾರತ ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಭದ್ರತಾ ಮಂಡಳಿಯ ಶಾಶ್ವತ ಮತ್ತು ತಾತ್ಕಾಲಿಕ ಎರಡೂ ವರ್ಗಗಳಲ್ಲಿ ವಿಸ್ತರಣೆ ಮಾಡಬೇಕು ಹಾಗೂ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಭಾರತದ ಈ ಹೇಳಿಕೆ, ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಯಡಿ ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾವನೆಗಳಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಲವು ಸಂದರ್ಭಗಳಿಗೆ ಪರೋಕ್ಷವಾಗಿ ಸಂಬಂಧಿಸಿದೆ ಎನ್ನಲಾಗಿದೆ.
ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿರುವ ಚೀನಾ, ಪಾಕಿಸ್ತಾನ ಮೂಲದ ಭಯೋತ್ಪಾದಕರು ಮತ್ತು ಸಂಘಟನೆಗಳನ್ನು 1267 ನಿರ್ಬಂಧ ವ್ಯವಸ್ಥೆಯಡಿ ಗುರುತಿಸುವ ಪ್ರಸ್ತಾವನೆಗಳಿಗೆ ಹಲವು ಬಾರಿ ತಾಂತ್ರಿಕ ತಡೆ ಅಥವಾ ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಘಟನೆಗಳು ಸೇರಿವೆ.