ವಾಷಿಂಗ್ಟನ್: ಕಳೆದ ಐದು ತಿಂಗಳಿನಿಂದ ಮುಂದುವರಿದಿರುವ ಉದ್ವಿಗ್ನತೆ ಮತ್ತು ವಿಫಲವಾದ ರಾಜತಾಂತ್ರಿಕ ಮಾತುಕತೆಗಳ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ವಿರುದ್ಧ "ಆರ್ಥಿಕ ಡಿ-ಡೇ" (Economic D-Day) ಘೋಷಣೆ ಮಾಡಿದ್ದಾರೆ.
ಇರಾನ್ ಆಡಳಿತವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಜಾಗತಿಕ ಇತಿಹಾಸದಲ್ಲೇ ಅತ್ಯಂತ ಕಠಿಣವಾದ ಆರ್ಥಿಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ನೂತನ ಕಠಿಣ ನಿಯಮಗಳ ಪ್ರಕಾರ, ಇರಾನ್ ಜೊತೆಗೆ ವಾಣಿಜ್ಯ ಸಂಬಂಧ ಇಟ್ಟುಕೊಳ್ಳುವ ಯಾವುದೇ ದೇಶವು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಅಂತಹ ದೇಶಗಳ ರಫ್ತು ಸರಕುಗಳ ಮೇಲೆ ಅಮೆರಿಕ ಸರ್ಕಾರವು ಶೇಕಡಾ 25 ರಷ್ಟು ಭಾರಿ ಸುಂಕವನ್ನು ವಿಧಿಸಲಿದೆ. ಇರಾನ್‌ನ ಪ್ರಮುಖ ಆದಾಯ ಮೂಲಗಳಾದ ತೈಲ ಕಳ್ಳಸಾಗಣೆ, ಶೆಲ್ ಕಂಪನಿಗಳು ಮತ್ತು ಅಕ್ರಮ ಆರ್ಥಿಕ ವಹಿವಾಟುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಈ ಕಾರ್ಯಾಚರಣೆಯ ಮುಖ್ಯ ಗುರಿಯಾಗಿದೆ.
ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಅವರು, ಯಾವುದೇ ದೇಶದ ವಿರುದ್ಧ ಕೈಗೊಂಡ ಅತ್ಯಂತ ಕಠಿಣ ಆರ್ಥಿಕ ಕಾರ್ಯಾಚರಣೆಯನ್ನು ಘೋಷಿಸುತ್ತಿದ್ದೇನೆ. ಇದು ಹಿಂದೆಂದೂ ಕಾಣದ ಮಟ್ಟದ ಆರ್ಥಿಕ ಯುದ್ಧ ಮತ್ತು ಪ್ರತ್ಯೇಕತೆಯಾಗಲಿದೆ ಎಂದು ಹೇಳಿದ್ದಾರೆ.
ಇರಾನ್‌ಗೆ ರಾಜತಾಂತ್ರಿಕ ಮಾತುಕತೆಗೆ ಹಲವು ಅವಕಾಶಗಳನ್ನು ನೀಡಿದ್ದರೂ, ಆ ದೇಶ ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಇರಾನ್‌ನ ನೌಕಾಪಡೆ ನಾಶವಾಗಿದೆ, ವಾಯುಪಡೆ ಧ್ವಂಸಗೊಂಡಿದೆ, ಸೇನಾ ಕಾರ್ಖಾನೆಗಳು ಹಾಳಾಗಿವೆ ಹಾಗೂ ದೇಶದ ಕರೆನ್ಸಿ ಮೌಲ್ಯ ಕುಸಿದಿದೆ ಹೇಳಿದ್ದಾರೆ. ಇರಾನ್ ಈಗ ‘ಒಂದು ದಾರದ ಮೇಲೆ ನೇತಾಡುತ್ತಿದೆ’ ಎಂದೂ ಹೇಳಿದ್ದಾರೆ. ಹೊಸ ಆರ್ಥಿಕ ಕ್ರಮಗಳು ಇರಾನ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇರಾನ್‌ಗೆ ಯಾವುದೇ ರೀತಿಯ ಆರ್ಥಿಕ ನೆರವು ಒದಗಿಸುವ ಹಣಕಾಸು ಸಂಸ್ಥೆಗಳು, ಉದ್ಯಮಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳಿಗೆ ಅವಕಾಶ ನೀಡುವ ಯಾವುದೇ ದೇಶವೂ ‘ತೀವ್ರ ಆರ್ಥಿಕ ಪರಿಣಾಮ’ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತೈಲ ಕಳ್ಳಸಾಗಣೆ, ಕರೆನ್ಸಿ ವಿನಿಮಯ ವ್ಯವಸ್ಥೆಗಳು, ನಗದು ವರ್ಗಾವಣೆ, ಹಣ ವಿನಿಮಯ ಕೇಂದ್ರಗಳು, ಹಡಗು ನೋಂದಣಿ ಮತ್ತು ಮುಂಭಾಗದ ಕಂಪನಿಗಳ ಮೂಲಕ ಇರಾನ್‌ಗೆ ನೆರವು ನೀಡುವ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಈ ಅಭಿಯಾನವನ್ನು ‘ಆರ್ಥಿಕ ಡಿ-ಡೇ’ ಎಂದು ಬಣ್ಣಿಸಿರುವ ಟ್ರಂಪ್ ಅವರು, ಅಮೆರಿಕದ ಮಿತ್ರ ರಾಷ್ಟ್ರಗಳು ತಮ್ಮೊಂದಿಗೆ ಕೈಜೋಡಿಸಿ ಇರಾನ್ ಅನ್ನು ಪ್ರತ್ಯೇಕಿಸಬೇಕು ಎಂದು ಕರೆ ನೀಡಿದ್ದಾರೆ.
ಇರಾನ್‌ನ ಜಾಗತಿಕ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗುವ ಸಾಮರ್ಥ್ಯವನ್ನು ಈ ಕ್ರಮಗಳು ಕುಗ್ಗಿಸಲಿವೆ ಎಂದು ಅವರು ಹೇಳಿದ್ದಾರೆ. “ಇರಾನ್ ಎಂದಿಗೂ ಪರಮಾಣು ಶಸ್ತ್ರ ಹೊಂದುವುದಿಲ್ಲ” ಎಂದೂ ಟ್ರಂಪ್ ಪುನರುಚ್ಚರಿಸಿದ್ದಾರೆ.
ಟ್ರಂಪ್ ಅವರ ಈ ದಿಢೀರ್ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆ ಹಾಗೂ ಇಂಧನ ಪೂರೈಕೆ ಜಾಲದಲ್ಲಿ ಭಾರಿ ಏರುಪೇರಾಗುವ ಆತಂಕ ಎದುರಾಗಿದೆ.
ವಿಶೇಷವಾಗಿ ಇರಾನ್ ಮತ್ತು ಮಧ್ಯಪ್ರಾಚ್ಯದ ತೈಲವನ್ನು ಹೆಚ್ಚಾಗಿ ಅವಲಂಬಿಸಿರುವ ಭಾರತ, ಚೀನಾ ಮತ್ತು ಪಾಕಿಸ್ತಾನದಂತಹ ಏಷ್ಯಾದ ಪ್ರಮುಖ ಆರ್ಥಿಕತೆಗಳ ಮೇಲೆ ಇರಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಅಮೆರಿಕದಿಂದ ಭಾರಿ ಒತ್ತಡ ಉಂಟಾಗಲಿದೆ ಎಂದು ಜಾಗತಿಕ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಆರನೇ ತಿಂಗಳತ್ತ ಸಂಘರ್ಷ
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಆರನೇ ತಿಂಗಳತ್ತ ಸಾಗುತ್ತಿರುವ ಸಂದರ್ಭದಲ್ಲಿ ಟ್ರಂಪ್ ಈ ಹೊಸ ಆರ್ಥಿಕ ಕ್ರಮಗಳನ್ನು ಘೋಷಿಸಿದ್ದಾರೆ. ಫೆಬ್ರವರಿಯಲ್ಲಿ ಪ್ರಮುಖ ಇರಾನ್ ತಾಣಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಸಂಘರ್ಷ ತೀವ್ರಗೊಂಡಿತ್ತು.
ಇದಕ್ಕೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಕ್ರಮ ಕೈಗೊಂಡು, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಹಾಗೂ ತಿಳಿವಳಿಕೆ ಒಪ್ಪಂದದಿಂದ ಕೆಲಕಾಲ ಉದ್ವಿಗ್ನತೆ ಕಡಿಮೆಯಾಗಿದ್ದರೂ, ಜಲಸಂಧಿಯಲ್ಲಿ ಸಾಗಣೆ ಹಡಗುಗಳನ್ನು ಇರಾನ್ ಗುರಿಯಾಗಿಸಿಕೊಂಡ ಬಳಿಕ ಪರಿಸ್ಥಿತಿ ಮತ್ತೆ ಬಿಗಡಾಯಿಸಿತು.
ಇರಾನ್‌ನೊಂದಿಗೆ ಮಾತುಕತೆಗಳು ಈಗ ಸಕ್ರಿಯವಾಗಿಲ್ಲ ಎಂದು ಟ್ರಂಪ್ ಈ ವಾರದ ಆರಂಭದಲ್ಲಿ ಹೇಳಿದ್ದರು. ಇದೇ ವೇಳೆ, ಹಾರ್ಮುಜ್ ಜಲಸಂಧಿ ‘ಹೊಸ ಅಮೆರಿಕದ ಪ್ರದೇಶ’ವಾಗಬಹುದು ಎಂಬ ಹೇಳಿಕೆಯನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು.
ಇನ್ನಷ್ಟು ಕಠಿಣ ನಿರ್ಬಂಧಗಳ ಸುಳಿವು
ಇರಾನ್ ವಿರುದ್ಧ ಜಗತ್ತು ಹಿಂದೆಂದೂ ಕಂಡಿರದ ಮಟ್ಟದ ಆರ್ಥಿಕ ಪ್ರತ್ಯೇಕತೆ ಜಾರಿಗೆ ತರಲಾಗುವುದು ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಟ್ರಂಪ್ ಹೊಸ ಕ್ರಮಗಳನ್ನು ಘೋಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾ ನಿರ್ಬಂಧ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿಕೊಂಡಿದ್ದು, ಜಲಮಾರ್ಗದಲ್ಲಿ ಹಡಗುಗಳ ಸಂಚಾರ ಮುಂದುವರಿದಿದೆ ಎಂದಿದ್ದಾರೆ.
ನವೆಂಬರ್‌ನಲ್ಲಿ ಅಮೆರಿಕದ ಮಧ್ಯಂತರ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ದೀರ್ಘಕಾಲದಿಂದ ಮುಂದುವರಿದಿರುವ ಇರಾನ್ ಸಂಘರ್ಷದ ಬಗ್ಗೆ ಟ್ರಂಪ್ ಆಡಳಿತದ ಮೇಲಿನ ದೇಶೀಯ ಒತ್ತಡವೂ ಹೆಚ್ಚುತ್ತಿದೆ.