ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್. 
ವಿದೇಶ

ಮಧ್ಯಪ್ರಾಚ್ಯ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕ್‌ ಪ್ರಯತ್ನ; ಇರಾನ್‌ ಜೊತೆ ಅಸೀಮ್‌ ಮುನೀರ್‌ ಮಹತ್ವದ ಮಾತುಕತೆ..!

ಅಮೆರಿಕ-ಇರಾನ್‌ ಸಂಘರ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಿಸಿ ಮಾತುಕತೆ ಪುನರಾರಂಭಿಸುವ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಇಂಟರ್‌ ಸರ್ವೀಸಸ್‌ ಪಬ್ಲಿಕ್‌ ರಿಲೇಷನ್ಸ್‌ (ISPR) ಹೇಳಿಕೆಯಲ್ಲಿ ತಿಳಿಸಿದೆ.

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ನಿಯಂತ್ರಿಸಲು ಹಾಗೂ ಜಾಗತಿಕವಾಗಿ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮರುಮುಕ್ತಗೊಳಿಸಲು ಪಾಕಿಸ್ತಾನ ಮತ್ತು ಇರಾನ್ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಯಲ್ಲಿ "ಮಹತ್ವದ ಪ್ರಗತಿ" ಸಾಧಿಸಿವೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಮೊಹ್ಸಿನ್ ನಖ್ವಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಗೃಹ ಸಚಿವ ಮೊಹ್ಸಿನ್‌ ನಖ್ವಿ ಅವರೊಂದಿಗೆ ಇರಾನ್‌ಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದ ಮುನೀರ್‌ ಅವರು ಮಾತುಕತೆ ಪೂರ್ಣಗೊಳಿಸಿ ಪಾಕಿಸ್ತಾನಕ್ಕೆ ಮರಳಿದ್ದಾರೆ.

ಅಮೆರಿಕ-ಇರಾನ್‌ ಸಂಘರ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಿಸಿ ಮಾತುಕತೆ ಪುನರಾರಂಭಿಸುವ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಇಂಟರ್‌ ಸರ್ವೀಸಸ್‌ ಪಬ್ಲಿಕ್‌ ರಿಲೇಷನ್ಸ್‌ (ISPR) ಹೇಳಿಕೆಯಲ್ಲಿ ತಿಳಿಸಿದೆ.

ಪ್ರದೇಶದಲ್ಲಿ ದೀರ್ಘಕಾಲೀನ ಶಾಂತಿ ಹಾಗೂ ಅಸ್ಥಿರತೆಗೆ ಶಾಶ್ವತ ಅಂತ್ಯ ಕಂಡುಕೊಳ್ಳುವ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಭೇಟಿಯ ಉದ್ದೇಶವಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಸೀಮ್‌ ಮುನೀರ್‌ ಅವರು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌, ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿನ ಸುಪ್ರೀಂ ನಾಯಕನ ಪ್ರತಿನಿಧಿ ಮೊಹ್ಸೆನ್‌ ರೆಜಾಯಿ, ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಘರ್‌ ಗಾಲಿಬಾಫ್‌, ವಿದೇಶಾಂಗ ಸಚಿವ ಸೆಯ್ಯದ್‌ ಅಬ್ಬಾಸ್‌ ಅರಾಘ್ಚಿ ಹಾಗೂ ಗೃಹ ಸಚಿವ ಎಸ್ಕಂದರ್‌ ಮೊಮೆನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಂತೆ ಕ್ರಮ, ಹಾರ್ಮುಜ್‌ ಜಲಸಂಧಿ ಪುನರಾರಂಭ ಹಾಗೂ ಸಂಘರ್ಷವನ್ನು ಶೀಘ್ರವಾಗಿ ಅಂತ್ಯಗೊಳಿಸುವ ಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆದಿದೆ ಎಂದು ISPR ತಿಳಿಸಿದೆ.

ಇರಾನ್‌ ಮತ್ತು ಒಮಾನ್‌ ನಡುವಿನ ಸುಮಾರು 55 ಕಿ.ಮೀ. ಅಗಲದ ಕಿರಿದಾದ ಜಲಮಾರ್ಗವೇ ಹಾರ್ಮುಜ್‌ ಜಲಸಂಧಿ. ಇದು ಪರ್ಷಿಯನ್‌ ಕೊಲ್ಲಿಯನ್ನು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.

ವಿಶ್ವದ ಅತ್ಯಂತ ಪ್ರಮುಖ ಹಾಗೂ ವ್ಯಸ್ತ ಸಮುದ್ರ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್‌ ಮೂಲಕ ಸಂಘರ್ಷ ಆರಂಭಕ್ಕೂ ಮುನ್ನ ಜಾಗತಿಕ ತೈಲದ ಸುಮಾರು ಐದನೇ ಒಂದು ಭಾಗ ಸಾಗಾಟವಾಗುತ್ತಿತ್ತು.

ಪಾಕಿಸ್ತಾನ ಮತ್ತು ಇರಾನ್‌ ನಾಯಕರ ಮಾತುಕತೆಯಲ್ಲಿ ಪ್ರಾದೇಶಿಕ ಶಾಂತಿ ಹಾಗೂ ವಿವಾದಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂವಾದ, ಸಂಘರ್ಷ ನಿಯಂತ್ರಣ ಹಾಗೂ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಪಾಕಿಸ್ತಾನ ವಹಿಸುತ್ತಿರುವ “ರಚನಾತ್ಮಕ ಪಾತ್ರವನ್ನು” ಇರಾನ್‌ ಶ್ಲಾಘಿಸಿದೆ.

ಸ್ಥಗಿತಗೊಂಡಿರುವ ಅಮೆರಿಕ-ಇರಾನ್‌ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ಪಾಕಿಸ್ತಾನ ಸಕ್ರಿಯ ಪ್ರಯತ್ನ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಅಮೆರಿಕ-ಇರಾನ್‌ ಸಂಘರ್ಷ ಅಂತ್ಯಗೊಳಿಸುವ ಒಪ್ಪಂದದೊಂದಿಗೆ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಬಳಿಕ ಶಾಂತಿ ಪ್ರಕ್ರಿಯೆ ವಿಫಲಗೊಂಡಿದ್ದು, ಮತ್ತೆ ಮಾತುಕತೆ ಹಳಿಗೆ ಬಂದಿಲ್ಲ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ ಸಂಘರ್ಷ ಆರಂಭವಾಗಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ ದಾಳಿ ನಡೆಸಿದ್ದು, ಪ್ರಮುಖ ಹಾರ್ಮುಜ್‌ ಜಲಸಂಧಿಯಲ್ಲಿ ಸಾಗಾಟಕ್ಕೆ ಅಡ್ಡಿಯುಂಟಾಗಿ ತೈಲ ಬೆಲೆ ಏರಿಕೆಯಾಗಿತ್ತು.

ಪಾಕಿಸ್ತಾನ ಖಾತರಿದಾರನಾಗಿ ಸಹಿ ಮಾಡಿದ್ದ ಮಧ್ಯಂತರ ಶಾಂತಿ ಒಪ್ಪಂದವೂ ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಹದಗೆಟ್ಟಿತ್ತು. ಅಮೆರಿಕ ಮತ್ತು ಇರಾನ್‌ ಮತ್ತೆ ಸೇನಾ ದಾಳಿಗಳನ್ನು ಆರಂಭಿಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

ಸಂಘರ್ಷಕ್ಕೆ ಅಂತ್ಯ ಹಾಡಲು ಮಾತುಕತೆ ಪುನರಾರಂಭಿಸುವ ಪಾಕಿಸ್ತಾನದ ಪ್ರಯತ್ನಗಳು ಈವರೆಗೆ ನಿರೀಕ್ಷಿತ ಫಲ ನೀಡಿಲ್ಲ.

ಇದೇ ವೇಳೆ, ಇರಾನ್‌ ವಿರುದ್ಧ ಅಮೆರಿಕ ತನ್ನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ತೆಹ್ರಾನ್‌ನ ಆರ್ಥಿಕ ಜೀವನಾಡಿಯನ್ನು ಕಡಿತಗೊಳಿಸುವ ಉದ್ದೇಶದಿಂದ ವಿಸ್ತೃತ ನಿರ್ಬಂಧಗಳನ್ನು ವಿಧಿಸಿರುವುದಾಗಿ ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಇರಾನ್‌ಗೆ ಯಾವುದೇ ರೀತಿಯ ಆರ್ಥಿಕ ನೆರವು ಅಥವಾ “ಜೀವನಾಡಿ” ಒದಗಿಸುವ ದೇಶಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್‌ ಜಲಸಂಧಿಯ ಮೂಲಕ ತೈಲ ಸಾಗಾಟ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ಅನುಮತಿಯಿಲ್ಲದೆ ಜಲಮಾರ್ಗ ಪ್ರವೇಶಿಸುವ ಟ್ಯಾಂಕರ್‌ಗಳನ್ನು ಗುರಿಯಾಗಿಸುವುದಾಗಿ ಇರಾನ್‌ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!