ಕಠ್ಮಂಡು: ಟಿಬೆಟ್‌ನಲ್ಲಿ ಹಿಮನದಿ ಕುಸಿತದ ಬಳಿಕ ಚೀನಾ-ನೇಪಾಳ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೂ ಮುನ್ನ ಚೀನಾದಿಂದ ನೇಪಾಳಕ್ಕೆ ಸಮಯೋಚಿತ ಮಾಹಿತಿ ಅಥವಾ ಮುನ್ನೆಚ್ಚರಿಕೆ ನೀಡಲಿಲ್ಲ ಎಂದು ನೇಪಾಳದ ಮಾಜಿ ಅರಣ್ಯ ಮತ್ತು ಪರಿಸರ ಸಚಿವ ಮಾಧವ ಪ್ರಸಾದ್ ಚೌಲಗೈನ್ ಆತಂಕ ವ್ಯಕ್ತಪಡಿಸಿದ್ದಾರೆ.
ದುರಂತದ ಸಂಪೂರ್ಣ ಚಿತ್ರಣ ಇನ್ನೂ ಸ್ಪಷ್ಟವಾಗಬೇಕಿರುವುದರಿಂದ ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದು, ವಿವಿಧ ದೇಶಗಳ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಚೌಲಗೈನ್ ಹೇಳಿದ್ದಾರೆ.
ಚೌಲಗೈನ್ ಪ್ರಕಾರ, 2025ರಲ್ಲೂ ನೇಪಾಳದಲ್ಲಿ ಸಣ್ಣ ಪ್ರಮಾಣದ ಹಿಮನದಿ ಕುಸಿತ ಸಂಭವಿಸಿತ್ತು. ಹೀಗಾಗಿ ಇಂತಹ ಅಪಾಯಗಳ ಬಗ್ಗೆ ಚೀನಾ ಮತ್ತು ನೇಪಾಳದ ನಡುವೆ ಮುನ್ನೆಚ್ಚರಿಕೆ ಮಾಹಿತಿ ತ್ವರಿತವಾಗಿ ಹಂಚಿಕೊಳ್ಳುವುದು ಅತ್ಯಗತ್ಯವಾಗಿತ್ತು.
“ಇದು ಅತ್ಯಂತ ಕಳವಳಕಾರಿ ಸಂಗತಿ. ಮುಂಜಾನೆ ಘಟನೆ ಸಂಭವಿಸಿದರೂ ಎರಡೂ ದೇಶಗಳ ನಡುವೆ ಸಮಯಕ್ಕೆ ಸರಿಯಾಗಿ ಮಾಹಿತಿ ವಿನಿಮಯವಾಗಿಲ್ಲ ಎಂಬುದು ಕಂಡುಬಂದಿದೆ” ಎಂದು ಅವರು ತಿಳಿಸಿದ್ದಾರೆ.
ಇದೀಗ ನೇಪಾಳ ಮತ್ತು ಚೀನಾ ವಿಪತ್ತು ಸಂಬಂಧಿತ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲು ಒಪ್ಪಿಕೊಂಡಿವೆ ಎಂದು ಚೌಲಗೈನ್ ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಟಿಬೆಟ್‌ನಲ್ಲಿ ಸಂಭವಿಸಿದ ಹಿಮನದಿ ಕುಸಿತದಿಂದ ಚೀನಾ ಮತ್ತು ನೇಪಾಳದ ಗಡಿ ಪ್ರದೇಶಗಳಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ನೇಪಾಳದಲ್ಲಿ ಇದುವರೆಗೆ 270 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ನೇಪಾಳ ಮತ್ತು ಟಿಬೆಟ್ ಸೇರಿ ಸಾವಿನ ಸಂಖ್ಯೆ 500 ದಾಟಿದೆ ಎನ್ನಲಾಗಿದೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಸುಮಾರು 300 ಭಾರತೀಯ ಪ್ರವಾಸಿಗರು ಸೇರಿದ್ದಾರೆ.
ಭೂಕಂಪವಲ್ಲ, ಭೂಕುಸಿತ-ಹಿಮ ಕುಸಿತ
ಆರಂಭದಲ್ಲಿ ಕೆಲ ವರದಿಗಳಲ್ಲಿ ಪ್ರವಾಹಕ್ಕೆ ಭೂಕಂಪ ಕಾರಣವೆಂದು ಹೇಳಲಾಗಿತ್ತು. ಆದರೆ ಅದು ಸರಿಯಲ್ಲ ಎಂದು ಮಾಜಿ ಸಚಿವ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಭೂಕುಸಿತ ಹಾಗೂ ಹಿಮ ಕುಸಿತದಿಂದ ನದಿಯ ಹರಿವು ತಡೆಯಲ್ಪಟ್ಟಿದ್ದು, ಬಳಿಕ ತಡೆ ಒಡೆದ ಪರಿಣಾಮ ಭಾರಿ ಪ್ರಮಾಣದ ನೀರು ಏಕಾಏಕಿ ಹರಿದುಬಂದಿದೆ.
ಆದರೆ ನಿಖರವಾಗಿ ಭೂಕುಸಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ ಮತ್ತು ಹಿಮನದಿಗಳ ಕರಗುವಿಕೆ ಪ್ರಮುಖ ಕಾರಣಗಳಾಗಿರಬಹುದು ಎಂದು ಅವರು ಹೇಳಿದ್ದಾರೆ.
ಟಿಬೆಟ್ ಭಾಗದ ಉಪಗ್ರಹ ಚಿತ್ರಗಳು ಬೇಕು
ಘಟನೆ ನಿಖರವಾಗಿ ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಟಿಬೆಟ್ ಭಾಗದ ಹೆಚ್ಚಿನ ಉಪಗ್ರಹ ಚಿತ್ರಗಳು ಹಾಗೂ ಮಾಹಿತಿ ನೇಪಾಳಕ್ಕೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ನಮಗೆ ಇನ್ನಷ್ಟು ಸ್ಪಷ್ಟತೆ ಸಿಗಲಿದೆ ಎಂಬ ನಿರೀಕ್ಷೆಯಿದೆ” ಎಂದು ಚೌಲಗೈನ್ ತಿಳಿಸಿದ್ದಾರೆ.
ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ನಾಪತ್ತೆಯಾದವರ ಅಧಿಕೃತ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್ಚರಿಸಿದ್ದು, ಪ್ರವಾಹಪೀಡಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅನೇಕ ಪ್ರವಾಸಿಗರು ಮತ್ತು ಯಾತ್ರಿಕರು ಅಧಿಕೃತ ದಾಖಲೆಗಳಲ್ಲಿ ಸೇರ್ಪಡೆಯಾಗದೇ ಇರಬಹುದು.
ಈ ಪ್ರದೇಶ ಕೇವಲ ಚೀನಾ-ನೇಪಾಳ ಗಡಿ ದಾಟುವ ಸ್ಥಳವಲ್ಲ. ಕೈಲಾಸ ಮಾನಸ ಸರೋವರ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೆ ತೆರಳುವ ಪ್ರಮುಖ ಯಾತ್ರಾ ಮಾರ್ಗವೂ ಹೌದು. ಭಾರತೀಯ ಪ್ರವಾಸಿಗರು, ಟ್ರೆಕ್ಕರ್‌ಗಳು ಹಾಗೂ ಸ್ಥಳೀಯ ಯಾತ್ರಿಕರು ಕೂಡ ಈ ಪ್ರದೇಶದ ಮೂಲಕ ಸಂಚರಿಸುತ್ತಾರೆ. ಹೀಗಾಗಿ ನಾಪತ್ತೆಯಾದವರ ನಿಜವಾದ ಸಂಖ್ಯೆ ಇನ್ನೂ ಹೆಚ್ಚಿರಬಹುದು. “ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು” ಎಂದು ಚೌಲಗೈನ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಿಂದ ತ್ವರಿತ ನೆರವು
ದುರಂತ ಸಂಭವಿಸಿದ ಬಳಿಕ ಭಾರತವು ನೆರವಿಗೆ ಧಾವಿಸಿದ ಮೊದಲ ನೆರೆ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೌಲಗೈನ್ ಹೇಳಿದ್ದು, ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿ ಶೋಧ ಕಾರ್ಯಾಚರಣೆಗೆ ನೆರವು ನೀಡುತ್ತಿದೆ.
ಪರಿಣಾಮಿತ ಪ್ರದೇಶದಲ್ಲಿದ್ದ ಪ್ರವಾಸಿಗರ ಸಂಖ್ಯೆಯನ್ನು ಪತ್ತೆಹಚ್ಚಲು ಹಾಗೂ ನಾಪತ್ತೆಯಾದವರನ್ನು ಗುರುತಿಸಲು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಭಾರತ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನವನ್ನು ಕಳುಹಿಸಿದ್ದು, ಚೀನಾ ಕೂಡ ಪರಿಹಾರ ಕಾರ್ಯಾಚರಣೆಗಳಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ವಿಶ್ವಬ್ಯಾಂಕ್, ಅಮೆರಿಕ ಮತ್ತು ಸ್ವಯಂಸೇವಾ ಸಂಘಟನೆಗಳಿಂದಲೂ ನೆರವು ದೊರೆಯುತ್ತಿದೆ ಎಂದರು.
ಯಾರೂ ಸಿದ್ಧರಾಗಿರಲಿಲ್ಲ
ನೇಪಾಳದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ವಿಪತ್ತುಗಳನ್ನು ಎದುರಿಸಲು ವಿಪತ್ತು ನಿರ್ವಹಣಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಗಳಿವೆ. ಅಪಾಯಕಾರಿ ಹಿಮನದಿ ಸರೋವರಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮೊಬೈಲ್ ನೆಟ್‌ವರ್ಕ್ ಮೂಲಕ ಎಚ್ಚರಿಕೆ ನೀಡುವ ವ್ಯವಸ್ಥೆಯೂ ಇದೆ. ಆದರೆ ಈ ಬಾರಿ ಸಂಭವಿಸಿದ ದುರಂತದ ಪ್ರಮಾಣ ಊಹೆಗೂ ಮೀರಿದ್ದರಿಂದ ಯಾರೂ ಸಮರ್ಪಕವಾಗಿ ಸಿದ್ಧರಾಗಿರಲಿಲ್ಲ. ಈ ಪ್ರಮಾಣದ ದುರಂತವನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಯಾರೂ ಸಿದ್ಧರಾಗಿರಲಿಲ್ಲ” ಎಂದು ಮಾಜಿ ಸಚಿವ ಹೇಳಿದ್ದಾರೆ.
40 ಕಿ.ಮೀ ರಸ್ತೆ, 18 ಸೇತುವೆ ಕೊಚ್ಚಿಹೋಗಿವೆ
ಪ್ರವಾಹದಿಂದ ನೇಪಾಳದ ಮೂಲಸೌಕರ್ಯಕ್ಕೂ ಭಾರಿ ಹಾನಿಯಾಗಿದೆ. ಸುಮಾರು 40 ಕಿಲೋಮೀಟರ್ ರಸ್ತೆಗಳು ಮತ್ತು 18 ಸೇತುವೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಚೌಲಗೈನ್ ತಿಳಿಸಿದ್ದಾರೆ. ಹಾನಿಗೊಳಗಾದ ಮೂಲಸೌಕರ್ಯವನ್ನು ಮರುನಿರ್ಮಿಸಿ, ಸಂಪರ್ಕ ಕಡಿತಗೊಂಡ ಪ್ರದೇಶಗಳನ್ನು ಮತ್ತೆ ಸಂಪರ್ಕಿಸಲು ತುರ್ತು ಮಾರ್ಗಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.
ಪರ್ವತ ಜನರು ನರಳುತ್ತಿದ್ದಾರೆ
ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಹಿಮಾಲಯ ಪ್ರದೇಶ ಹೆಚ್ಚು ಅಪಾಯಕ್ಕೆ ಸಿಲುಕುತ್ತಿದೆ ಎಂದು ಚೌಲಗೈನ್ ಎಚ್ಚರಿಸಿದ್ದು, “ನಾವು ಪರ್ವತ ದೇಶಗಳು. ಪರಿಸರಕ್ಕೆ ನಾವು ದೊಡ್ಡ ಹಾನಿ ಮಾಡಿಲ್ಲ. ಆದರೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಪರ್ವತಗಳು ಮತ್ತು ಪರ್ವತ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಅವರು ವಿಷಾದಿಸಿದ್ದಾರೆ.
ಅಂದಹಾಗೆ ನೇಪಾಳ ಸರ್ಕಾರವು ಪ್ರವಾಹಪೀಡಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಬಳಸುತ್ತಿದೆ.