ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಸದಸ್ಯರ ಮೇಲೆ ದಾಳಿ ಮುಂದುವರೆದಿದ್ದು,ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ.
ಗುರುವಾರ ಬಾಂಗ್ಲಾದೇಶದ ಸುನಾಮಗಂಜ್ ಜಿಲ್ಲೆಯಲ್ಲಿ ಜಾಯ್ ಮಹಾಪಾತ್ರೋ ಎಂಬ ಹಿಂದೂ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಲಾಗಿದ್ದು, ಹಲ್ಲೆ ಬಳಿಕ ಆತನಿಗೆ ವಿಷ ಪ್ರಾಶನ ಮಾಡಿ ಹತ್ಯೆಗೈಯ್ಯಲಾಗಿದೆ.
ಮಹಾಪಾತ್ರೋ ಅವರ ಕುಟುಂಬದ ಪ್ರಕಾರ, ಅವರನ್ನು ಸ್ಥಳೀಯರು ಹೊಡೆದು ವಿಷಪ್ರಾಶನ ಮಾಡಿದ್ದಾರೆ. ಅಮೀರುಲ್ ಇಸ್ಲಾಂ ಎಂಬ ಸ್ಥಳೀಯ ಮುಸ್ಲಿಂ ಥಳಿಸಿ, ನಂತರ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಸಿಲ್ಹೆಟ್ ಎಂಎಜಿ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಮಹಾಪಾತ್ರೋ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ಹೇಳಲಾಗಿದೆ.
ಸರಣಿ ಕುಕೃತ್ಯಗಳು
ಇನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಇದೇ ಮೊದಲೇನಲ್ಲ.. ಈ ಹಿಂದೆ ದೀಪು ಚಂದ್ರದಾಸ್, ಮಿಥುನ್ ಸರ್ಕಾರ ಎಂಬ ಹಿಂದೂ ವ್ಯಕ್ತಿಗಳನ್ನು ಕೂಡ ಇದೇ ರೀತಿ ವಿವಿಧ ಆರೋಪ ಹೊರಿಸಿ ಥಳಿಸಿ ಕೊಂದು ಹಾಕಲಾಗಿತ್ತು.
ಈ ಹಿಂದೆ ಕಳ್ಳತನದ ಶಂಕೆಯ ಮೇಲೆ ಗುಂಪೊಂದು ತನ್ನನ್ನು ಬೆನ್ನಟ್ಟುತ್ತಿದ್ದಾಗ ತಪ್ಪಿಸಿಕೊಳ್ಳಲು 25 ವರ್ಷದ ಹಿಂದೂ ವ್ಯಕ್ತಿ ಮಿಥುನ್ ಸರ್ಕಾರ್ ಎಂಬಾತ ಕಾಲುವೆಗೆ ಹಾರಿ ಸಾವನ್ನಪ್ಪಿದ್ದ. ಇದಕ್ಕೂ ಮೊದಲು ಗಾರ್ಮೆಂಟ್ ಕೆಲಸಗಾರ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಗುಂಪು ಥಳಿಸಿ ಕೊಂದು ಸುಟ್ಟು ಹಾಕಿತ್ತು.
ಈ ಎಲ್ಲ ಪ್ರಕರಣಗಳು ಹಸಿರಾಗಿರುವಾಗಲೇ ಜಾಯ್ ಮಹಾಪಾತ್ರೋರನ್ನೂ ಕೂಡ ಹಲ್ಲೆ ಮಾಡಿ ಕೊಂದು ಹಾಕಲಾಗಿದೆ.
ಹಿಂದೂಗಳ ಮೇಲಿನ ಹಿಂಸಾಚಾರ ನಿಲ್ಲುವ ಲಕ್ಷಣಗಳೇ ಇಲ್ಲ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಸರಣಿ ದಾಳಿಗಳು ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಕಳೆದ 18 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ 7 ಹಿಂದೂ ಪುರುಷರನ್ನು ಹತ್ಯೆ ಮಾಡಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳ ಹೆಚ್ಚಳವು ಸರ್ಕಾರದ ಹಿಡಿತ ದುರ್ಬಲಗೊಂಡಾಗಲೆಲ್ಲಾ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಹೆಚ್ಚಾಗುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಏಕತಾ ಮಂಡಳಿ (BHBCUC) ಕಳೆದ ತಿಂಗಳು 51 ಕೋಮು ಹಿಂಸಾಚಾರ ಘಟನೆಗಳನ್ನು ದಾಖಲಿಸಿದೆ.
ಇವುಗಳಲ್ಲಿ 10 ಕೊಲೆಗಳು, 10 ಕಳ್ಳತನ ಮತ್ತು ದರೋಡೆ ಪ್ರಕರಣಗಳು ಮತ್ತು 23 ಆಕ್ರಮಣ, ಲೂಟಿ ಮತ್ತು ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳಿಗೆ ಬೆಂಕಿ ಹಚ್ಚುವ ಘಟನೆಗಳು ಸೇರಿವೆ. ಇದಲ್ಲದೆ, ಜನವರಿಯಲ್ಲಿ ಇಲ್ಲಿಯವರೆಗೆ ನಾಲ್ಕು ಹಿಂದೂಗಳು ಸಾವನ್ನಪ್ಪಿದ್ದಾರೆ, ಡಿಸೆಂಬರ್‌ನಿಂದ ಒಟ್ಟು ಸಾವುಗಳ ಸಂಖ್ಯೆ 14 ಕ್ಕೆ ತಲುಪಿದೆ.