ಟೆಹ್ರಾನ್: ಕಳೆದ ಎರಡು ವಾರಗಳಿಂದ ಇರಾನ್ ನಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಆರಂಭದಲ್ಲಿ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಆರಂಭವಾದ ಪ್ರತಿಭಟನೆ ತದನಂತರ ಆಡಳಿತಗಾರರು ಕೆಳಗಿಳಿಯುವಂತೆ ಪ್ರತಿಭಟನಾಕಾರರ ಒತ್ತಾಯದೊಂದಿಗೆ ರಾಜಕೀಯ ಸ್ವರೂಪ ಪಡೆಯಿತು.
ಇಸ್ಲಾಮಿಕ್ ಗಣರಾಜ್ಯವನ್ನು ಖಂಡಿಸುವ ಸಾಮೂಹಿಕ ಪ್ರತಿಭಟನೆಗಳಿಂದ ಇರಾನ್ ರಾತ್ರೋರಾತ್ರಿ ಉದ್ವಿಗ್ನಗೊಂಡಿತು. ನಗರ ಕೇಂದ್ರಗಳಿಗೆ ಮುತ್ತಿಗೆ ಹಾಕಲು ಸಜ್ಜಾಗುವಂತೆ 1979 ರ ಇಸ್ಲಾಮಿಕ್ ಕ್ರಾಂತಿಯ ಸಮಯದಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಇರಾನ್‌ನ ಕೊನೆಯ ಷಾ ಮೊಹಮ್ಮದ್ ರೆಜಾ ಪಹ್ಲವಿ ಅವರ ಮಗ, ದೇಶಭ್ರಷ್ಟ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಪ್ರತಿಭಟನಾಕಾರರಿಗೆ ಶನಿವಾರ ಕರೆ ನೀಡಿದ್ದಾರೆ.
ಇನ್ನು ಮುಂದೆ ಬೀದಿಗಿಳಿಯುವುದು ನಮ್ಮ ಗುರಿ ಇಲ್ಲ. ನಗರ ಕೇಂದ್ರಗಳ ವಶಕ್ಕೆ ಸಜ್ಜಾಗುವುದು ನಮ್ಮ ಗುರಿಯಾಗಿದೆ ಎಂದು ಯುಎಸ್ ಮೂಲದ ರೆಜಾ ಪಹ್ಲವಿ ಹೇಳಿದ್ದಾರೆ. ಶುಕ್ರವಾರದ ಪ್ರತಿಭಟನೆಯನ್ನು ಅವರು ಶ್ಲಾಘಿಸಿದ್ದು, ಇಂದು ಮತ್ತು ನಾಳೆ ಮತ್ತಷ್ಟು ಹೆಚ್ಚಿನದಾಗಿ ಪ್ರತಿಭಟನೆ ನಡೆಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಮತ್ತೊಂದೆಡೆ ಮೂಲಸೌಕರ್ಯ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆ ತನ್ನ ಆದ್ಯತೆಯಾಗಿದೆ ಎಂದು ಇರಾನ್ ಸೇನೆ ಹೇಳಿದೆ. ಶತ್ರುಗಳ ಸಂಚುಗಳನ್ನು" ವಿಫಲಗೊಳಿಸುವಂತೆ ಇರಾನಿಯನ್ನರನ್ನು ಒತ್ತಾಯಿಸಿದೆ. ಪಹ್ಲವಿ ಅವರನ್ನು ಭೇಟಿ ಮಾಡಲು ಒಲವು ಹೊಂದಿಲ್ಲ ಎಂದು ಗುರುವಾರ ಟ್ರಂಪ್ ಹೇಳುವ ಮೂಲಕ ಕಾದು ನೋಡುವ ತಂತ್ರ ಅನುಸರಿಸಿದ್ದರು. ದೇಶದಲ್ಲಿನ ವಿಧ್ವಂಸಕ ವಿರುದ್ಧ ಖಮೇನಿ ಶುಕ್ರವಾರ ಕಿಡಿಕಾರಿದ್ದರು. ನಮ್ಮ ದೇಶ ಟ್ರಂಪ್ ರೀತಿಯ ವಿಧ್ವಂಸಕರ ಮುಂದೆ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಇರಾನ್ ನಲ್ಲಿನ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ ಕನಿಷ್ಠ 62 ಜನರು ಸಾವನ್ನಪ್ಪಿದ್ದಾರೆ. ಇದು ಸರ್ಕಾರಕ್ಕೆ ಅತ್ಯಂತ ಮಹತ್ವದ ಸವಾಲಾಗಿ ಮಾರ್ಪಟ್ಟಿದೆ. ಭದ್ರತಾ ಪಡೆಗಳು ಹತ್ಯಾಕಾಂಡ" ಮಾಡಲು ತಯಾರಿ ನಡೆಸುತ್ತಿವೆ ಎಂದು ಇರಾನ್‌ನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಎಚ್ಚರಿಕೆ ನೀಡಿದ್ದು, ಟೆಹ್ರಾನ್‌ನ ಪಶ್ಚಿಮದಲ್ಲಿರುವ ಕರಾಜ್‌ನಲ್ಲಿ ಸರ್ಕಾರದ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ರಾಜ್ಯ ಮಾಧ್ಯಮ ಹೇಳಿದೆ.