ಢಾಕಾ: ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮುಂದುವರೆಯುತ್ತಿದೆ. ಸಮೀರ್ ದಾಸ್ ಎಂಬ 28 ವರ್ಷದ ಹಿಂದೂ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜ.12ರಂದು ಬೆಳಕಿಗೆ ಬಂದಿದೆ.
ಸಮೀರ್ ಕುಮಾರ್ ದಾಸ್ ಫೆನಿ ಜಿಲ್ಲೆಯ ನಿವಾಸಿ. ಆಟೋ ಓಡಿಸಿ ಜೀವನ ನಡೆಸುತ್ತಿದ್ದರು. ಜ.11ರಾತ್ರಿ ಭಾನುವಾರ ಎಂದಿನಂತೆ ಅವರು ಕೆಲಸಕ್ಕೆ ತೆರಳಿದ್ದರು. ಆದರೆ, ಅಂದು ಅವರು ಮನೆಗೆ ವಾಪಸ್ ಆಗಲೇ ಇಲ್ಲ. ಗೊಂದಲ, ಆತಂಕಕ್ಕೆ ಒಳಗಾದ ಕುಟುಂಬಸ್ಥರು, ಪೊಲೀಸರಿಗೆ ದೂರು ಕೊಟ್ಟರು. ಸೋಮವಾರ ಮುಂಜಾನೆ ದಕ್ಷಿಣ ಕರಿಂಪುರದ ಮುಹುರಿ ಬಾರಿ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ಕುಮಾರ್‌ದಾಸ್‌ಅವರ ದೇಹ ಸಿಕ್ಕಿದೆ.
ಚಿತ್ತಗಾಂಗ್‌ನ ದಗನ್‌ಭೂಯಾನ್ ಎಂಬಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ಸಮೀರ್ ದಾಸ್ ಅವರನ್ನು ಸುತ್ತುವರಿದು, ನಾಡಬಂದೂಕು ಹಾಗೂ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ, ಬರ್ಬರವಾಗಿ ಕೊಂದಿದ್ದಾರೆ. ಹತ್ಯೆಯ ನಂತರ, ಆರೋಪಿಗಳು ಅವರ ಬ್ಯಾಟರಿ ಚಾಲಿತ ಆಟೋ ರಿಕ್ಷಾವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದು ಪೂರ್ವನಿಯೋಜಿತ ಕೊಲೆಯಂತೆ ಭಾಸವಾಗುತ್ತಿದೆ. ಕೊಲೆಗಾರರು ಆಟೋವನ್ನು ಲೂಟಿ ಮಾಡಿದ್ದಾರೆ. ಸಂತ್ರಸ್ತನ ಕುಟುಂಬವು ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕಾಗಿ ತನಿಖೆ ಆರಂಭಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.