ಕೋಪನ್‌ಹೇಗನ್: ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕದ ನಿಯಂತ್ರಣಕ್ಕೆ ಬೆಂಬಲ ನೀಡದ ದೇಶಗಳ ಮೇಲೆ ಹೆಚ್ಚಿನ ತೆರಿಗೆ (ಟ್ಯಾರಿಫ್) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಎಚ್ಚರಿಸಿದ್ದಾರೆ.
ಡೆನ್ಮಾರ್ಕ್ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಅಮೆರಿಕಾದ ಸಂಸತ್ ಸದಸ್ಯರ ದ್ವಿಪಕ್ಷೀಯ ನಿಯೋಗ ಭೇಟಿ ನೀಡಿದ್ದ ಸಮಯದಲ್ಲೇ ಟ್ರಂಪ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಔಷಧಗಳ ಮೇಲೆ ಸುಂಕ ವಿಧಿಸುವ ಮೂಲಕ ಯುರೋಪಿಯನ್ ಮಿತ್ರರಾಷ್ಟ್ರಗಳಿಗೆ ಹೇಗೆ ಬೆದರಿಕೆ ಹಾಕಿದ್ದೇನೆ ಎಂಬುದನ್ನು ವಿವರಿಸಿರುವ ಟ್ರಂಪ್ ಅವರು, "ನಾನು ಗ್ರೀನ್‌ಲ್ಯಾಂಡ್‌ಗೂ ಸಹ ಹಾಗೆ ಮಾಡಬಹುದು ಎಂದು ಹೇಳಿದ್ದಾರೆ.
ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕದ ನಿಯಂತ್ರಣಕ್ಕೆ ಬೆಂಬಲ ನೀಡದ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು. ಏಕೆಂದರೆ ನಮಗೆ ರಾಷ್ಟ್ರೀಯ ಭದ್ರತೆಗಾಗಿ ಗ್ರೀನ್‌ಲ್ಯಾಂಡ್ ಅಗತ್ಯವಿದೆ. ಆದ್ದರಿಂದ ಹೆಚ್ಚಿನ ತೆರಿಗೆ ವಿಧಿಸುವ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ವಿದೇಶಾಂಗ ಮಂತ್ರಿಗಳು ವಾಷಿಂಗ್ಟನ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿ ಮಾಡಿದ್ದರು.
ಮಾತುಕತೆಗಳಿಂದ ಭಿನ್ನಾಭಿಪ್ರಾಯಗಳು ಪರಿಹಾರವಾಗದಿದ್ದರೂ, ಕಾರ್ಯನಿರತ ಗುಂಪನ್ನು ಸ್ಥಾಪಿಸಲು ಒಪ್ಪಂದವಾಯಿತು. ಆದರೆ, ಅದರ ಉದ್ದೇಶದ ಬಗ್ಗೆ ಡೆನ್ಮಾರ್ಕ್ ಮತ್ತು ವೈಟ್ ಹೌಸ್ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.
ಯುರೋಪಿನ ನಾಯಕರು ಗ್ರೀನ್‌ಲ್ಯಾಂಡ್ ಕುರಿತ ನಿರ್ಧಾರವನ್ನು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಮಾತ್ರ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಡೆನ್ಮಾರ್ಕ್ ತನ್ನ ಮಿತ್ರರ ಸಹಕಾರದೊಂದಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ಹಾಜರಾತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಡೆನ್ಮಾರ್ಕ್‌ನ ನಾಟೋ ಮಿತ್ರ ರಾಷ್ಟ್ರದ ಅಡಿಯಲ್ಲಿ ಇರುವ ಅರೆಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ಅಮೆರಿಕದ ನಿಯಂತ್ರಣಕ್ಕೆ ಬರಬೇಕು ಎಂದು ಟ್ರಂಪ್ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದಾರೆ