ಮಿನಿಯಾಪೊಲಿಸ್: ಅಮೆರಿಕಾದ ಮಿನಿಯಾಪೊಲಿಸ್ ನಗರದಲ್ಲಿ ಶನಿವಾರ ವಲಸೆ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ನೂರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು,ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಗುಂಡಿನ ದಾಳಿ ನಂತರ ಆಕ್ರೋಶಗೊಂಡ ಜನರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದು, ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳನ್ನು “ಹೇಡಿಗಳು” ಎಂದು ಕರೆದ ಅವರು, “ವಾಪಸ್ ತೆರಳುವಂತೆ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟಕರು ರಸ್ತೆ ತಡೆಗಾಗಿ ಕಸದ ಡಂಪ್‌ಸ್ಟರ್‌ಗಳನ್ನು ಎಳೆದು ತಂದು ಅಡ್ಡಗಟ್ಟಿದ್ದು “ICE (ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್) ಹೊರಹೋಗಲಿ” ಎಂಬ ಘೋಷಣೆಗಳನ್ನೂ ಕೂಗಿದ್ದಾರೆ,
ಘಟನೆ ಕುರಿತು ಡಮಾಕ್ರಾಟ್ ಪಕ್ಷದ ಗವರ್ನರ್ ವಾಲ್ಜ್ ಕಿಡಿಕಾರಿದ್ದು, ಸೂಕ್ತ ತರಬೇತಿ ಇಲ್ಲದ ಸಾವಿರಾರು ಅಧಿಕಾರಿಗಳನ್ನು ಮಿನೆಸೋಟಾದಿಂದ ತಕ್ಷಣ ಹಿಂದಕ್ಕೆ ಕರೆಸಿಕೊಳ್ಳುವಂತ ಆಗ್ರಹಿಸಿದ್ದಾರೆ.
ಮಿನಿಯಾಪೊಲಿಸ್ ನಿವಾಸಿ ಜೋಷ್ ಕೋಸ್ಕಿ ಎಂಬುವವರು ಮಾತನಾಡಿ. ನನ್ನ ನೆರೆಹೊರೆಯವರನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಭದ್ರತಾ ನಿಯಂತ್ರಣಕ್ಕಾಗಿ ಲಾಠಿಚಾರ್ಚ್,ಫ್ಲ್ಯಾಶ್ ಬ್ಯಾಂಗ್‌ಗಳನ್ನು ಪ್ರಯೋಗಿಸಿದ್ದಾರೆ.
ಮಿನಿಯಾಪೊಲಿಸ್ ಪೊಲೀಸ್ ಮುಖ್ಯಸ್ಥ ಬ್ರಿಯನ್ ಓ’ಹಾರಾ ಅವರು ಮಾತನಾಡಿ, ಸಾರ್ವಜನಿಕರು ಶಾಂತತೆಯನ್ನು ಕಾಪಾಡಿಕೊಳ್ಳಬೇಕು.ನಗರವನ್ನು ಹಾನಿಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.
ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಕ್ತಾರ ಟ್ರಿಷಿಯಾ ಮ್ಯಾಕ್ಲಾಘ್ಲಿನ್ ಅವರು ಮಾತನಾಡಿ, ಮೃತ ವ್ಯಕ್ತಿಯ ಬಳಿ ಎರಡು ಮಾಗಜಿನ್‌ಗಳೊಂದಿಗೆ ಬಂದೂಕು ಇದ್ದುದಾಗಿ ತಿಳಿಸಿದ್ದಾರೆ. ಅಲ್ಲದೆ, ವ್ಯಕ್ತಿಯ ಬಳಿ ಇದ್ದ ಬಂದೂಕಿನ ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ.
ಈ ಘಟನೆ ಜನವರಿ 7ರಂದೂ ಇದೇ ರೀತಿಯ ಘಟನೆಯೊಂದು ನಡೆದಿತ್ತು. 37 ವರ್ಷದ ರಿನಿ ಗುಡ್ ಎಂಬ ಮಹಿಳೆಯ ವಾಹನದಮೇಲೆಐಸಿಇ ಅಧಿಕಾರಿ ಗುಂಡು ಹಾರಿಸಿದ್ದರು. ಪರಿಣಾಮ ಮಹಿಳೆ ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ವಲಸೆ ವಿರೋಧಿ ಕಾರ್ಯಾಚರಣೆಗಳ ವಿರುದ್ಧ ಈ ಪ್ರದೇಶದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ತೀವ್ರ ಚಳಿಯ ನಡುವೆಯೂ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹತ್ಯೆಯಾದ ವ್ಯಕ್ತಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ
ಏತನ್ಮಧ್ಯೆ ಹತ್ಯೆಯಾದ ವ್ಯಕ್ತಿ ವೇಟರನ್ಸ್ ಅಫೇರ್ಸ್ (VA) ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಸಿಯು ನರ್ಸ್ ಆಗಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು ಅಲೆಕ್ಸ್ ಜೆಫ್ರಿ ಪ್ರೆಟ್ಟಿ (37) ಎಂದು ಗುರುತಿಸಲಾಗಿದೆ. ಈತ ವಲಸಿಗರ ಮೇಲೆ ನಡೆಯುತ್ತಿರುವ ಕಠಿಣ ಕ್ರಮಗಳ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಪ್ರೆಟ್ಟಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಗಳ ವಿರುದ್ಧ ಮಿನಿಯಾಪೊಲಿಸ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಎಂದು ತಿಳಿದುಬಂದಿದೆ.
ನನ್ನ ಮಗ ಜನರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಎಂದು ಅಲೆಕ್ಸ್ ಜೆಫ್ರಿ ಪ್ರೆಟ್ಟಿ ಅವರ ತಂದೆ ಮೈಕಲ್ ಪ್ರೆಟ್ಟಿ ಹೇಳಿದ್ದಾರೆ.
ಅಲೆಕ್ಸ್ ಇಲಿನಾಯ್ಸ್‌ನಲ್ಲಿ ಜನಿಸಿದ ಅಮೆರಿಕದ ನಾಗರಿಕರಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಕೆಲ ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಪ್ರಕರಣ ಬಿಟ್ಟರೆ ಯಾವುದೇ ಪ್ರಕರಣದಲ್ಲೂ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಪ್ರೆಟ್ಟಿ 9 ಮಿಮೀ ಸೆಮಿಆಟೋಮ್ಯಾಟಿಕ್ ಪಿಸ್ತೂಲ್‌ನೊಂದಿಗೆ ಅಧಿಕಾರಿಗಳತ್ತ ಹತ್ತಿರ ಬಂದ ಎಂದು ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳಲ್ಲಿ ಪ್ರೆಟ್ಟಿ ಕೈಯಲ್ಲಿ ಮೊಬೈಲ್ ಫೋನ್ ಕಾಣಿಸಿಕೊಂಡಿದೆಯೇ ಹೊರತು ಶಸ್ತ್ರಾಸ್ತ್ರವಲ್ಲ. ಗನ್ ಇರಿಸಿಕೊಳ್ಳಲು ಆತನಿಗೆ ಪರವಾನಗಿ ಇತ್ತು. ಆದರೂ ಆತನ ಬಳಿ ಗನ್ ಇದ್ದುದ್ದನ್ನು ನಾವೆಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.
ಗುಂಡೇಟು ಕುರಿತು ಅಸೋಸಿಯೇಟೆಡ್ ಪ್ರೆಸ್ ವರದಿಗಾರರಿಂದಷ್ಟೇ ನಮಗೆ ಮಾಹಿತಿ ಸಿಕ್ಕಿತ್ತು. ನಂತರ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಯತ್ನಿಸಿದರೂ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮಗನ ಬಗ್ಗೆ ಹೇಳಲಾಗುತ್ತಿರುವ ಸುಳ್ಳುಗಳು ಅತೀವ್ರ ನೋವು ತಂದಿವೆ. ವಿಡಿಯೋಗಳಲ್ಲಿ ಅಲೆಕ್ಸ್ ಗನ್ ಹಿಡಿದಿರಲಿಲ್ಲ, ಬದಲಾಗಿ ಪೆಪ್ಪರ್ ಸ್ಪ್ರೇಗೆ ಒಳಗಾಗುತ್ತಿದ್ದ ಮಹಿಳೆಯನ್ನು ಆತ ರಕ್ಷಿಸಲು ಪ್ರಯತ್ನಿಸುತ್ತಿದ್ದ ಎಂದು ಹೇಳಿದ್ದಾರೆ.
ಗ್ರೀನ್ ಬೇ, ವಿಸ್ಕಾನ್ಸಿನ್‌ನಲ್ಲಿ ಬೆಳೆದ ಅಲೆಕ್ಸ್ ಪ್ರೆಟ್ಟಿ, ಶಾಲಾ ದಿನಗಳಲ್ಲಿ ಕ್ರೀಡೆಗಳಲ್ಲಿ ಸಕ್ರಿಯನಾಗಿದ್ದ. ಮಿನೆಸೋಟಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು ನಂತರ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದ.
ಈ ಘಟನೆ ಇದೀಗ ಮಿನಿಯಾಪೊಲಿಸ್ ಹಾಗೂ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕಾನೂನು ರಕ್ಷಕರಾಗಿರುವ ವಲಸೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.