ಅಮೆರಿಕದ ಮೈನೆ ರಾಜ್ಯದಲ್ಲಿ ಪ್ರಮುಖ ವಿಮಾನ ಅಪಘಾತ ಸಂಭವಿಸಿದೆ. ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಏಳು ಜನರು ಸಾವನ್ನಪ್ಪಿದ್ದು, ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಪ್ರಕಾರ, ಅಮೆರಿಕದ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮಗಾಳಿ ವೇಳೆ ಖಾಸಗಿ ಜೆಟ್ ಅಪಘಾತಕ್ಕೀಡಾಗಿದೆ. ಭಾನುವಾರ ರಾತ್ರಿ ಟೇಕ್ ಆಫ್ ಆಗುವಾಗ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾಗಿದೆ. ಆ ಸಮಯದಲ್ಲಿ, ನ್ಯೂ ಇಂಗ್ಲೆಂಡ್ ಸೇರಿದಂತೆ ಅಮೆರಿಕದ ಹಲವು ಭಾಗಗಳಲ್ಲಿ ತೀವ್ರ ಶೀತ ಮತ್ತು ಹಿಮ ಬೀಳುತ್ತಿತ್ತು. ಜೆಟ್ ಟೇಕ್ ಆಫ್ ಮಾಡಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು, ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸಂಜೆ 7:45 ರ ಸುಮಾರಿಗೆ ವಾಯುನೆಲೆಯಲ್ಲಿ ಅಪಘಾತ ಸಂಭವಿಸಿದೆ. ವಿಮಾನವು ಟೇಕ್ ಆಫ್ ಕ್ಲಿಯರೆನ್ಸ್ ಪಡೆದ ಸುಮಾರು 45 ಸೆಕೆಂಡುಗಳ ನಂತರ ಅಪಘಾತ ಸಂಭವಿಸಿದೆ. ಅಪಘಾತದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತುರ್ತು ತಂಡಗಳು ಸ್ಥಳಕ್ಕೆ ಬಂದಿವೆ ಎಂದು ಜೋಸ್ ಸಾವೇದ್ರಾ ಹೇಳಿದ್ದಾರೆ.