ವಾಷಿಂಗ್ಟನ್: ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮುಕ್ತ ವ್ಯಾಪಾರ ಒಪ್ಪಂದಗಾಗಿ (FTA) ಮಾತುಕತೆಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುವುದು ಅಮೆರಿಕದ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ. ಭಾರತ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪ್ ತನ್ನ ವಿರುದ್ಧದ ಯುದ್ಧಕ್ಕೆ ಅದೇ ಹಣಕಾಸು ಒದಗಿಸುತ್ತಿದೆ ಎಂದು ಹೇಳಿದೆ.
ಯುರೋಪ್ ರಷ್ಯಾದೊಂದಿಗಿನ ನೇರ ಇಂಧನ ಸಂಬಂಧಗಳನ್ನು ಗಣನೀಯವಾಗಿ ಹಂತಹಂತವಾಗಿ ಸ್ಥಗಿತಗೊಳಿಸಿರಬಹುದು. ಆದರೆ ಅಮೆರಿಕ ಭಾರತಕ್ಕೆ ಸುಂಕ ಹೇರಿದ್ದರೂ ಅಲ್ಲಿನ ಸಂಸ್ಕರಿಸಿದ ರಷ್ಯಾದ ತೈಲ ಉತ್ಪನ್ನಗಳನ್ನು ಖರೀದಿಸುವ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಹಣವನ್ನು ನೀಡುತ್ತಿದ್ದಾರೆ ಎಂದು US ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಭಾರತ ಮತ್ತು ಯುರೋಪಿಯನ್ ಯೂನಿಯನ್ ತಮ್ಮ ದೀರ್ಘಾವಧಿಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಮುಕ್ತಾಯಗೊಳಿಸಿರುವಂತೆಯೇ ಬೆಸೆಂಟ್ ಈ ಹೇಳಿಕೆ ನೀಡಿದ್ದಾರೆ.
US ಹೇಳಿದ್ದೇನು! ಈ ಸಮಸ್ಯೆಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ನಡುವಿನ ತ್ಯಾಗದಲ್ಲಿನ ಅಸಮತೋಲನ ಕಾರಣ ಎಂದು ಬೆಸೆಂಟ್ ಹೇಳಿದ್ದಾರೆ. ರಷ್ಯಾದಿಂದ ತೈಲ ವ್ಯಾಪಾರವನ್ನು ಅಸ್ಥಿರಗೊಳಿಸಲು ವಾಷಿಂಗ್ಟನ್ ಒತ್ತಾಯಿಸುತ್ತಿದ್ದರೆ ಜಾಗತಿಕ ತೈಲ ವ್ಯಾಪಾರದಲ್ಲಿನ ಲೋಪದೋಷಗಳಿಂದ ಯುರೋಪ್ ಆರ್ಥಿಕವಾಗಿ ಲಾಭ ಪಡೆಯುತ್ತಿದೆ ಎಂದು ಅವರು ವಾದಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮೇಲೆ ಶೇ. 25 ರಷ್ಟು ಸೇರಿದಂತೆ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ಇತ್ಯರ್ಥಕ್ಕೆ ಮಾತುಕತೆ ನಡೆಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲಸ ಮಾಡುತ್ತಿದ್ದಾರೆ. ಯುಎಸ್ ಯುರೋಪಿಯನ್ನರಿಗಿಂತ ಹೆಚ್ಚಿನ ತ್ಯಾಗ ಮಾಡಿದೆ. "ನಾವು ರಷ್ಯಾದ ತೈಲವನ್ನು ಖರೀದಿಸಲು ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕಗಳನ್ನು ಹಾಕಿದ್ದೇವೆ. ಆದರೆ ಏನಾಗಿದೆ ನೋಡಿ, ಯುರೋಪಿಯನ್ನರು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ" ಎಂದು ಬೆಸೆಂಟ್ ಎಬಿಸಿ ನ್ಯೂಸ್‌ಗೆ ಹೇಳಿದ್ದಾರೆ.
"ಮತ್ತು ಮತ್ತೆ ಸ್ಪಷ್ಟವಾಗಿ ಹೇಳಬೇಕೆಂದರೆ, ರಷ್ಯಾದ ತೈಲವು ಭಾರತಕ್ಕೆ ಹೋಗುತ್ತದೆ. ಅಲ್ಲಿನ ಸಂಸ್ಕರಿಸಿದ ಉತ್ಪನ್ನಗಳನ್ನು ಯುರೋಪಿಯನ್ನರು ಖರೀದಿಸುತ್ತಾರೆ. ಅವರು ತಮ್ಮ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದಾರೆ. ಟ್ರಂಪ್ ನಾಯಕತ್ವದಲ್ಲಿ ಅಂತಿಮವಾಗಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇವೆ ಎಂದು ಹೇಳಿದ್ದಾರೆ.