ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ, ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!

ಗ್ರೀನ್‌ಲ್ಯಾಂಡ್ ಅಮೆರಿಕದ ನಿಯಂತ್ರಣದಲ್ಲಿರಬೇಕು, ಡೆನ್ಮಾರ್ಕ್‌ನಲ್ಲಲ್ಲ. ನಾವು ಆ ಪ್ರದೇಶಕ್ಕೆ ಯಾವುದೇ ರೀತಿಯ ಬೆದರಿಕೆ ಬರಲು ಅವಕಾಶ ನೀಡುವುದಿಲ್ಲ.

ಅಂಕಾರಾ: ನಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗ್ರೀನ್‌ಲ್ಯಾಂಡ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದು ಡೆನ್ಮಾರ್ಕ್‌ನ ಬದಲಿಗೆ ಅಮೆರಿಕದ ನಿಯಂತ್ರಣದಲ್ಲಿರಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ನಾಟೋ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳ ಖರೀದಿ ಯೋಜನೆಗಳನ್ನು ಘೋಷಿಸಿದೆ.

ಇದರ ಜೊತೆಗೆ ಟರ್ಕಿ ಮೇಲಿನ ಅಮೆರಿಕದ ನಿರ್ಬಂಧ ತೆರವುಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದು, ಟರ್ಕಿಗೆ ಅತ್ಯಾಧುನಿಕ F-35 ಯುದ್ಧವಿಮಾನಗಳ ಮಾರಾಟದ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದಾರೆ.

ಟರ್ಕಿ ಅಧ್ಯಕ್ಷ ರೆಜೆಪ್ ತಯ್ಯಿಪ್ ಎರ್ಡೊಗಾನ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಗ್ರೀನ್‌ಲ್ಯಾಂಡ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ ಎಂದು ಹೇಳಿದರು.

ಚೀನಾ ಮತ್ತು ರಷ್ಯಾ ಉತ್ತರ ಧ್ರುವ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರೀನ್‌ಲ್ಯಾಂಡ್‌ನ ಕಾರ್ಯತಂತ್ರದ ಮಹತ್ವ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದರು.

ಗ್ರೀನ್‌ಲ್ಯಾಂಡ್ ಅಮೆರಿಕದ ನಿಯಂತ್ರಣದಲ್ಲಿರಬೇಕು, ಡೆನ್ಮಾರ್ಕ್‌ನಲ್ಲಲ್ಲ. ನಾವು ಆ ಪ್ರದೇಶಕ್ಕೆ ಯಾವುದೇ ರೀತಿಯ ಬೆದರಿಕೆ ಬರಲು ಅವಕಾಶ ನೀಡುವುದಿಲ್ಲ. ಗ್ರೀನ್‌ಲ್ಯಾಂಡ್ ಸುತ್ತಮುತ್ತ ಚೀನಾ ಮತ್ತು ರಷ್ಯಾದ ಹಡಗುಗಳು ಹೆಚ್ಚಾಗಿ ಸಂಚರಿಸುತ್ತಿವೆ ಎಂಬ ಮತ್ತೊಮ್ಮೆ ಪುನರುಚ್ಚರಿಸಿದರು.

ಟ್ರಂಪ್ ಅವರ ಈ ಹೇಳಿಕೆ ಯುರೋಪಿನ ರಾಷ್ಟ್ರಗಳಲ್ಲಿ ಮತ್ತೊಮ್ಮೆ ಅಸಮಾಧಾನಕ್ಕೆ ಕಾರಣವಾಗಿದೆ. ನಾಟೋ ಸ್ಥಾಪನೆಯ ಮೂಲ ಉದ್ದೇಶವೇ ಸದಸ್ಯ ರಾಷ್ಟ್ರಗಳು ಪರಸ್ಪರದ ಭೂಭಾಗವನ್ನು ರಕ್ಷಿಸುವುದು. ಇಂತಹ ಸಂದರ್ಭದಲ್ಲಿ ಸದಸ್ಯ ರಾಷ್ಟ್ರವಾದ ಡೆನ್ಮಾರ್ಕ್‌ಗೆ ಸೇರಿದ ಸ್ವಾಯತ್ತ ಪ್ರದೇಶದ ಮೇಲೆ ಅಮೆರಿಕದ ನಿಯಂತ್ರಣ ಇರಬೇಕು ಎಂಬ ಟ್ರಂಪ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ನಾಟೋ ಸದಸ್ಯ ರಾಷ್ಟ್ರಗಳು ತಮ್ಮ ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕೆಂಬ ಟ್ರಂಪ್ ಅವರ ಬಹುಕಾಲದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಹೊಸ ರಕ್ಷಣಾ ಯೋಜನೆಗಳನ್ನು ಘೋಷಿಸಿದವು.

ನಾಟೋ ಮಹಾಸಚಿವ ಮಾರ್ಕ್ ರುಟ್ಟೆ, ರಕ್ಷಣಾ ಕ್ಷೇತ್ರದಲ್ಲಿ ಮಾಡುತ್ತಿರುವ ಹೂಡಿಕೆಗಳು ಸದಸ್ಯ ರಾಷ್ಟ್ರಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಹೇಳಿದರು.

ಇದು ಭದ್ರತೆಗೆ ಮಾಡಿದ ಉತ್ತಮ ಹೂಡಿಕೆ. ಇಂದಿನ ಭದ್ರತಾ ಸವಾಲುಗಳನ್ನು ಎದುರಿಸಲು ನಾಟೋ ಇನ್ನಷ್ಟು ಆಧುನಿಕ ತಂತ್ರಜ್ಞಾನ ಹಾಗೂ ಸಾಮರ್ಥ್ಯವನ್ನು ಹೊಂದಬೇಕಾಗಿದೆ ಎಂದು ಅವರು ಹೇಳಿದರು.

ಸುಮಾರು ಐದು ದಶಕಗಳಿಂದ ಸೇವೆಯಲ್ಲಿರುವ ನಾಟೋದ AWACS ಕಣ್ಗಾವಲು ವಿಮಾನಗಳ ಬದಲಿಗೆ ಸ್ವೀಡನ್‌ನ ಸಾಬ್ ಕಂಪನಿಯಿಂದ 10 ಹೊಸ GlobalEye ಕಣ್ಗಾವಲು ವಿಮಾನಗಳನ್ನು ಖರೀದಿಸುವ ನಿರ್ಧಾರ ಪ್ರಕಟಿಸಲಾಯಿತು.

ಈ ವಿಮಾನಗಳು ದೂರದವರೆಗೆ ಗಗನ, ಸಮುದ್ರ ಹಾಗೂ ಭೂಭಾಗದ ಚಲನವಲನವನ್ನು ಏಕಕಾಲದಲ್ಲಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ. ಇದರ ಜೊತೆಗೆ 15 ರಾಷ್ಟ್ರಗಳು ಸೇರಿ ಏರ್‌ಬಸ್ ಕಂಪನಿಯಿಂದ ಗಗನದಲ್ಲಿ ಇಂಧನ ತುಂಬುವ ಹಾಗೂ ಸಾರಿಗೆ ವಿಮಾನಗಳನ್ನು ಖರೀದಿಸಲು ಒಪ್ಪಿಕೊಂಡಿವೆ.

ಮತ್ತೊಂದು ಯೋಜನೆಯಡಿ ನಾಲ್ಕು ರಾಷ್ಟ್ರಗಳು ಸೇರಿ ಐದು ಹೊಸ Triton ಕಣ್ಗಾವಲು ಡ್ರೋನ್‌ಗಳನ್ನು ಖರೀದಿಸಲಿವೆ. ಈ ಎಲ್ಲಾ ಯೋಜನೆಗಳಿಗೆ ಯುರೋಪಿಯನ್ ಒಕ್ಕೂಟ ರೂಪಿಸಿರುವ ಸುಮಾರು 170 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಸಾಲ ಯೋಜನೆಯಿಂದಲೂ ನೆರವು ದೊರೆಯಲಿದೆ.

ಶೃಂಗಸಭೆಯ ಮತ್ತೊಂದು ಮಹತ್ವದ ಬೆಳವಣಿಗೆಯಾಗಿ ಟ್ರಂಪ್, ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸಿದ್ದಕ್ಕಾಗಿ ಟರ್ಕಿ ಮೇಲೆ ವಿಧಿಸಲಾಗಿದ್ದ ಅಮೆರಿಕದ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಘೋಷಿಸಿದರು.

2019ರಲ್ಲಿ ಟರ್ಕಿ ರಷ್ಯಾದಿಂದ ಎಸ್-400 ವ್ಯವಸ್ಥೆ ಖರೀದಿಸಿದ ನಂತರ ಅಮೆರಿಕವು 'ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್' (CAATSA) ಅಡಿಯಲ್ಲಿ ನಿರ್ಬಂಧ ವಿಧಿಸಿತ್ತು. ಇದರ ಪರಿಣಾಮವಾಗಿ ಟರ್ಕಿಯನ್ನು ಅಮೆರಿಕದ ಅತ್ಯಾಧುನಿಕ F-35 ಯುದ್ಧವಿಮಾನ ಯೋಜನೆಯಿಂದ ಹೊರಗಿಡಲಾಗಿತ್ತು.

"ನಾವು ಟರ್ಕಿ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತೇವೆ. ಈ ಕುರಿತು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ, ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಹಾಗೂ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಕೆಲಸ ಮಾಡುತ್ತಿದ್ದಾರೆ," ಎಂದು ಟ್ರಂಪ್ ತಿಳಿಸಿದರು.

ಟರ್ಕಿಗೆ F-35 ಯುದ್ಧವಿಮಾನಗಳನ್ನು ಮಾರಾಟ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಖಂಡಿತವಾಗಿಯೂ ಅದನ್ನು ಪರಿಗಣಿಸುತ್ತೇವೆ. ಟರ್ಕಿ ಅನೇಕ ಸಂದರ್ಭಗಳಲ್ಲಿ ನಮ್ಮ ನಿಷ್ಠಾವಂತ ಮಿತ್ರ ರಾಷ್ಟ್ರವಾಗಿ ವರ್ತಿಸಿದೆ ಎಂದು ಹೇಳಿದರು.

ಟರ್ಕಿ ಅಧ್ಯಕ್ಷ ಎರ್ಡೊಗಾನ್ ಕೂಡ ಅಮೆರಿಕ ಮತ್ತೆ F-35 ಯೋಜನೆಗೆ ತಮ್ಮ ದೇಶವನ್ನು ಸೇರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಟ್ರಂಪ್ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುವ ನಾಯಕ. ಅಮೆರಿಕ ಮತ್ತು ಟರ್ಕಿ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ಬಲವಾಗಲಿದೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ಅಂಕಾರಾದಲ್ಲಿ ಟ್ರಂಪ್ ಅವರಿಗೆ ಎರ್ಡೊಗಾನ್ ಅದ್ಧೂರಿ ಸ್ವಾಗತ ಕೋರಿದರು. ಅಶ್ವದಳ, ಮಿಲಿಟರಿ ಗೌರವ ಹಾಗೂ ಯುದ್ಧವಿಮಾನಗಳ ಪ್ರದರ್ಶನದ ಮೂಲಕ ಟ್ರಂಪ್ ಅವರನ್ನು ಬರಮಾಡಿಕೊಳ್ಳಲಾಯಿತು. ಇಬ್ಬರು ನಾಯಕರು ಪರಸ್ಪರ ಸ್ನೇಹವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.

ನಮ್ಮಿಬ್ಬರ ನಡುವೆ ವಿಶೇಷ ಹೊಂದಾಣಿಕೆ ಇದೆ. ಕೆಲವೊಮ್ಮೆ ಅತ್ಯಂತ ಕಠಿಣ ವ್ಯಕ್ತಿಗಳೊಂದಿಗೂ ಉತ್ತಮ ಸಂಬಂಧ ನಿರ್ಮಾಣವಾಗುತ್ತದೆ ಎಂದು ಟ್ರಂಪ್ ಹೇಳಿದರು. ಆದರೆ, ಟರ್ಕಿಗೆ F-35 ಯುದ್ಧವಿಮಾನ ಮಾರಾಟದ ಪ್ರಸ್ತಾಪಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಈ ಬಗ್ಗೆ ಈಗಾಗಲೇ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.

ಟರ್ಕಿಗೆ F-35 ನೀಡುವುದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗುವುದಿಲ್ಲ. ಅಂತಹ ಸಾಮರ್ಥ್ಯ ದೊರೆತರೆ ಅದು ಆಕ್ರಮಣಕಾರಿ ನೀತಿಗೆ ಉತ್ತೇಜನ ನೀಡಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಕಾಂಗ್ರೆಸ್‌ನ ಹಲವು ಸದಸ್ಯರೂ ಟರ್ಕಿ ಇನ್ನೂ ಎಸ್-400 ವ್ಯವಸ್ಥೆಯನ್ನು ಹೊಂದಿರುವವರೆಗೆ F-35 ಮಾರಾಟಕ್ಕೆ ಕಾನೂನು ಅಡೆತಡೆಗಳಿವೆ ಎಂದು ಹೇಳಿದ್ದಾರೆ. ಹೀಗಾಗಿ ನಿರ್ಬಂಧ ತೆರವಾದರೂ ಟರ್ಕಿ ತಕ್ಷಣವೇ F-35 ಖರೀದಿಸುವುದು ಸುಲಭವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದೇ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ತಮ್ಮ ದೇಶಕ್ಕೆ ನಾಟೋ ಸದಸ್ಯತ್ವ ನೀಡುವಂತೆ ಮನವಿ ಮಾಡಿದರು.

ಉಕ್ರೇನ್ ಸೇನೆ ನಾಲ್ಕು ವರ್ಷಗಳಿಂದ ರಷ್ಯಾದ ವಿರುದ್ಧ ನಿರಂತರ ಯುದ್ಧ ನಡೆಸುತ್ತಿದ್ದು, ಅಪಾರ ಯುದ್ಧ ಅನುಭವವನ್ನು ಪಡೆದುಕೊಂಡಿದೆ. ಈ ಅನುಭವ ನಾಟೋದ ಒಟ್ಟಾರೆ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದರು.

ರಷ್ಯಾದ ಒಳಭಾಗದಲ್ಲಿರುವ ತೈಲ ಶುದ್ಧೀಕರಣ ಘಟಕಗಳು ಸೇರಿದಂತೆ ಹಲವು ಕಾರ್ಯತಂತ್ರದ ಗುರಿಗಳ ಮೇಲೆ ಉಕ್ರೇನ್ ಯಶಸ್ವಿಯಾಗಿ ದಾಳಿ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, ಉಕ್ರೇನ್ ಸೇನೆ ಪ್ರತಿ ತಿಂಗಳು ಸರಾಸರಿ 30 ಸಾವಿರ ರಷ್ಯಾ ಸೈನಿಕರನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ತಿಳಿಸಿದರು.

ಈ ಯುದ್ಧವನ್ನು ನಾವು ಬಯಸಿರಲಿಲ್ಲ. ಆದರೆ, ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಹೋರಾಡುತ್ತಿದ್ದೇವೆ ಎಂದು ಅವರು ಹೇಳಿದರು. ಶೃಂಗಸಭೆಯ ವೇಳೆ ಝೆಲೆನ್ಸ್ಕಿ ಟ್ರಂಪ್ ಅವರನ್ನು ಭೇಟಿಯಾಗುವ ನಿರೀಕ್ಷೆಯೂ ಇದೆ.

ರಷ್ಯಾ ಸಾಂಪ್ರದಾಯಿಕ ಯುದ್ಧದ ಜೊತೆಗೆ ಸೈಬರ್ ದಾಳಿ, ವಾಯುಪ್ರದೇಶ ಉಲ್ಲಂಘನೆ ಹಾಗೂ ಇತರ ಹೈಬ್ರಿಡ್ ದಾಳಿಗಳ ಮೂಲಕ ಯುರೋಪಿನ ರಾಷ್ಟ್ರಗಳಿಗೆ ಸವಾಲು ಒಡ್ಡಬಹುದು ಎಂಬ ಆತಂಕವೂ ಶೃಂಗಸಭೆಯಲ್ಲಿ ವ್ಯಕ್ತವಾಯಿತು.

ಆದರೆ, ನಾಟೋದ ಹಿರಿಯ ಅಧಿಕಾರಿಯೊಬ್ಬರು, ರಷ್ಯಾ ಕೆಲವು ಪ್ರಚೋದನಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಸದಸ್ಯ ರಾಷ್ಟ್ರಗಳ ಮೇಲೆ ಯಾವುದೇ ನೇರ ದಾಳಿ ನಡೆಸದಂತೆ ತಡೆಯುವಲ್ಲಿ ನಾಟೋ ಯಶಸ್ವಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋನೇಷ್ಯಾ ಸಂಸತ್ತಿನಲ್ಲಿ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಪರಾಕ್ರಮ ಬಣ್ಣಿಸಿದ ಪ್ರಧಾನಿ ಮೋದಿ!

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

E20 ಪೆಟ್ರೋಲ್‌ನಿಂದಾಗಿ ಎಂಜಿನ್‌ ಹಾಳಾದ ಒಂದೇ ಒಂದು ಕಾರನ್ನು ತೋರಿಸಿ: ಗಡ್ಕರಿ ಬಹಿರಂಗ ಸವಾಲು

ಭಯಾನಕ ಅಪಘಾತ: ಫುಟ್​ಪಾತ್​ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದ ಟಿಪ್ಪರ್; ತಂದೆ, ಮೂವರು ಮಕ್ಕಳು ಸ್ಥಳದಲ್ಲೇ ಸಾವು - Video

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!