ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಅಮೆರಿಕಾ ಇರಾನ್‌ನ ಹಲವು ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.
ಈ ಬೆಳವಣಿಗೆಯಿಂದ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಇತ್ತೀಚೆಗೆ ಎರಡೂ ದೇಶಗಳ ನಡುವೆ ನಡೆದಿದ್ದ ತಿಳುವಳಿಕೆ ಒಪ್ಪಂದದ ಭವಿಷ್ಯದ ಬಗ್ಗೆ ಹೊಸ ಅನುಮಾನಗಳು ಮೂಡಿವೆ.
ಅಮೆರಿಕದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ನಡೆದ ದಾಳಿಗೆ ಪ್ರತಿಯಾಗಿ ಇರಾನ್‌ನ ಮೇಲೆ "ಪ್ರಬಲ ಮತ್ತು ನಿಖರ" ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಜಾಗತಿಕ ವ್ಯಾಪಾರ ಹಾಗೂ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಈ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಸುತ್ತಮುತ್ತ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ. ಕೇಶ್ಮ್ ದ್ವೀಪದಲ್ಲಿ ಆರು ಸ್ಫೋಟಗಳು, ಸಿರಿಕ್ ನಗರದಲ್ಲಿ ಏಳು ಸ್ಫೋಟಗಳು ಹಾಗೂ ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್‌ನಲ್ಲೂ ಹಲವು ಸ್ಫೋಟಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಆದರೆ, ಈ ದಾಳಿಯಿಂದಾದ ಹಾನಿಯ ಬಗ್ಗೆ ಇರಾನ್ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ.
ಅಮೆರಿಕಾ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯ, ಇತ್ತೀಚೆಗೆ ಎರಡೂ ದೇಶಗಳ ನಡುವೆ ಮಾಡಿಕೊಂಡಿದ್ದ ತಿಳುವಳಿಕೆ ಒಪ್ಪಂದವನ್ನು ಅಮೆರಿಕ ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
ಅಮೆರಿಕ ಒಪ್ಪಂದ ಉಲ್ಲಂಘಿಸಿರುವುದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಗಳನ್ನು ಕಾಪಾಡಲು ಇರಾನ್ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ದಾಳಿಗೂ ಕೆಲವೇ ಗಂಟೆಗಳ ಮೊದಲು ಅಮೆರಿಕವು ಇರಾನ್‌ಗೆ ನೀಡಲಾಗಿದ್ದ ತಾತ್ಕಾಲಿಕ ತೈಲ ರಫ್ತು ನಿರ್ಬಂಧ ವಿನಾಯಿತಿಯನ್ನೂ ರದ್ದುಪಡಿಸಿತ್ತು.
ಕಳೆದ ಜೂನ್‌ನಲ್ಲಿ ನೀಡಲಾಗಿದ್ದ ವಿಶೇಷ ಅನುಮತಿಯಡಿ ಇರಾನ್‌ಗೆ ಆಗಸ್ಟ್ 21ರವರೆಗೆ ಕಚ್ಚಾ ತೈಲ ಉತ್ಪಾದನೆ ಹಾಗೂ ರಫ್ತಿಗೆ ಅವಕಾಶ ನೀಡಲಾಗಿತ್ತು. ಆದರೆ, ಅಮೆರಿಕದ ಖಜಾನೆ ಇಲಾಖೆ ಈಗ ಆ ಪರವಾನಗಿಯನ್ನು ರದ್ದುಪಡಿಸಿದ್ದು, ಇರಾನ್ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ಹೆಚ್ಚಿಸಿದೆ.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕೈಗೊಂಡಿರುವ ಕ್ರಮ ಅಮೆರಿಕಕ್ಕೆ ಸಂಪೂರ್ಣವಾಗಿ ಅಸ್ವೀಕಾರಾರ್ಹ. ಇದರ ಪರಿಣಾಮಗಳನ್ನು ಇರಾನ್ ಎದುರಿಸಬೇಕಾಗುತ್ತದೆ. ನಮ್ಮ ನಡುವಿನ ಒಪ್ಪಂದವು ಸಂಪೂರ್ಣವಾಗಿ ವರ್ತನೆಯ ಆಧಾರದ ಮೇಲೆ ರೂಪುಗೊಂಡಿದೆ. ಇರಾನ್ ಉತ್ತಮ ನಡವಳಿಕೆ ತೋರಿದರೆ ಮಾತ್ರ ಒಪ್ಪಂದದ ಲಾಭ ಪಡೆಯಲು ಸಾಧ್ಯ," ಎಂದು ಹೇಳಿದ್ದಾರೆ. ಆದಾಗ್ಯೂ ಅಂತಿಮ ಶಾಂತಿ ಒಪ್ಪಂದಕ್ಕಾಗಿ ಅಮೆರಿಕ ಇನ್ನೂ ಸದುದ್ದೇಶದಿಂದ ಮಾತುಕತೆ ಮುಂದುವರಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಈ ನಡುವೆ ಬ್ರಿಟನ್‌ನ ಸಮುದ್ರ ಭದ್ರತಾ ಸಂಸ್ಥೆ (UKMTO) ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದನ್ನು ದೃಢಪಡಿಸಿದೆ.
ಮೊದಲಿಗೆ ಅಪರಿಚಿತ ಕ್ಷಿಪಣಿಯೊಂದು ತೈಲ ಸಾಗಣೆ ಹಡಗಿಗೆ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇನ್ನೆರಡು ಹಡಗುಗಳು ದಾಳಿಗೆ ಒಳಗಾಗಿವೆ. ಅವುಗಳಲ್ಲಿ ಕನಿಷ್ಠ ಒಂದು ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಮೂರು ಹಡಗುಗಳ ಮೇಲಿನ ದಾಳಿಯೂ ಒಮಾನ್ ಸಮುದ್ರ ಗಡಿಯ ಸಮೀಪವೇ ನಡೆದಿದೆ. ಹಾರ್ಮುಜ್ ಜಲಸಂಧಿಯ ಸುರಕ್ಷಿತ ಸಂಚಾರಕ್ಕಾಗಿ ಒಮಾನ್ ತನ್ನ ಕರಾವಳಿಗೆ ಹೊಂದಿಕೊಂಡ ತಾತ್ಕಾಲಿಕ ಸಾಗಣೆ ಮಾರ್ಗವನ್ನು ಪ್ರಸ್ತಾಪಿಸಿತ್ತು. ಆದರೆ, ಆ ಮಾರ್ಗವನ್ನು ಬಳಸುವ ಹಡಗುಗಳಿಂದ ಶುಲ್ಕ ವಸೂಲಿ ಮಾಡಲು ಬಯಸಿರುವ ಇರಾನ್ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದೆ.
ಕತಾರ್ ಸರ್ಕಾರ ತನ್ನ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಿಸುತ್ತಿದ್ದ ಅಲ್-ರೆಕಯ್ಯಾತ್ ಹಡಗು ದಾಳಿಗೆ ಒಳಗಾಗಿದೆ ಎಂದು ತಿಳಿಸಿ, ಈ ದಾಳಿಗೆ ನೇರವಾಗಿ ಇರಾನ್ ಹೊಣೆ ಎಂದು ಆರೋಪಿಸಿದೆ.
ಅಂತಾರಾಷ್ಟ್ರೀಯ ಸಮುದ್ರ ಸಂಚಾರದ ಮೇಲಿನ ಈ ದಾಳಿಯನ್ನು "ಅಸ್ವೀಕಾರಾರ್ಹ" ಎಂದು ಖಂಡಿಸಿರುವ ಕತಾರ್, ಇರಾನ್‌ನ ಉಪ ರಾಯಭಾರಿಯನ್ನು ಕರೆಸಿ ಅಧಿಕೃತ ಪ್ರತಿಭಟನೆ ದಾಖಲಿಸಿದೆ.
ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಾಜಿದ್ ಅಲ್ ಅನ್ಸಾರಿ ಅವರು ಮಾತನಾಡಿ, ಈ ದಾಳಿಗೆ ಮತ್ತು ಅದರಿಂದ ಉಂಟಾಗುವ ಎಲ್ಲಾ ಹಾನಿ ಹಾಗೂ ಪರಿಣಾಮಗಳಿಗೆ ಇರಾನ್ ಸಂಪೂರ್ಣ ಕಾನೂನುಬದ್ಧ ಹೊಣೆ ಹೊತ್ತುಕೊಳ್ಳಬೇಕು. ಪ್ರಾದೇಶಿಕ ಭದ್ರತೆಗೆ ಧಕ್ಕೆ ಉಂಟುಮಾಡುವ ಎಲ್ಲಾ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು," ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್, ಕತಾರ್ ಮಾಡಿರುವ ಆರೋಪಗಳನ್ನು ತಿರಸ್ಕರಿಸಿದ್ದು, ಅವುಗಳನ್ನು "ಆಧಾರರಹಿತ ಹಾಗೂ ಅಸ್ವೀಕಾರಾರ್ಹ" ಎಂದು ಬಣ್ಣಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ಈ ಹೊಸ ದಾಳಿಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿವೆ. ಪ್ರಮುಖ ತೈಲ ಸಾಗಣೆ ಮಾರ್ಗದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿರುವ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ.2ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಜಾಗತಿಕ ಇಂಧನ ಪೂರೈಕೆಯ ಮೇಲೆ ಹೊಸ ಆತಂಕ ಮೂಡಿದ್ದು, ಅಮೆರಿಕ-ಇರಾನ್ ನಡುವಿನ ಇತ್ತೀಚಿನ ತಿಳುವಳಿಕೆ ಒಪ್ಪಂದದ ಭವಿಷ್ಯದ ಬಗ್ಗೆ ಅನುಮಾನಗಳು ಹೆಚ್ಚಿವೆ.
ಇರಾನ್ ತನ್ನ ಅನುಮತಿ ಅಥವಾ ನಿಯಮಗಳನ್ನು ಪಾಲಿಸದೆ ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ಈ ದಾಳಿಗಳ ಮೂಲಕ ನೀಡುತ್ತಿದೆ. ಇತ್ತೀಚಿನ ಕದನ ವಿರಾಮ ಒಪ್ಪಂದದ ಬಳಿಕ ಹಡಗು ಸಂಚಾರ ನಿಧಾನವಾಗಿ ಪುನರಾರಂಭವಾಗಿದ್ದರೂ, ಯುದ್ಧಕ್ಕೂ ಮೊದಲಿನಂತೆಯೇ ಯಾವುದೇ ನಿರ್ಬಂಧವಿಲ್ಲದ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬ ತನ್ನ ನಿಲುವನ್ನು ಇರಾನ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವೆ ನಡೆದ 14 ಅಂಶಗಳ ತಿಳುವಳಿಕೆ ಒಪ್ಪಂದದ ಪ್ರಕಾರ, ಹಾರ್ಮುಜ್ ಜಲಸಂಧಿಯ ಆಡಳಿತ ಹಾಗೂ ಸಮುದ್ರ ಸೇವೆಗಳ ಭವಿಷ್ಯದ ಕುರಿತು ಇರಾನ್, ಒಮಾನ್ ಹಾಗೂ ಇತರ ಗಲ್ಫ್ ರಾಷ್ಟ್ರಗಳು ಚರ್ಚೆ ನಡೆಸಬೇಕಿದೆ.
ಇದೇ ವೇಳೆ ಕತಾರ್ ಕೂಡ ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪರೋಕ್ಷ ಮಾತುಕತೆಗಳಿಗೆ ಆತಿಥ್ಯ ವಹಿಸಿದ್ದು, ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಹೊಸ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಹೆಚ್ಚಿಸಿದೆ.