ವಾಷಿಂಗ್ಟನ್: ಇರಾನ್ ಮಾತುಕತೆಗೆ ಮುಂದಾಗಿ ಒಪ್ಪಂದ ಮಾಡಿಕೊಳ್ಳದಿದ್ದರೆ ಮುಂದಿನ ವಾರದಿಂದ ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ಪ್ರಮುಖ ಸೇತುವೆಗಳ ಮೇಲೆ ಅಮೆರಿಕ ದಾಳಿ ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಮುಂದಿನ ವಾರ ಇರಾನ್‌ಗೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಹೇಳಿದ್ದಾರೆ.
ನಮ್ಮ ಮುಂದಿನ ಗುರಿ ವಿದ್ಯುತ್ ಸ್ಥಾವರಗಳು, ನಂತರ ಪ್ರಮುಖ ಸೇತುವೆಗಳು. ಇರಾನ್ ಮಾತುಕತೆ ಮೇಜಿನತ್ತ ಬಾರದಿದ್ದರೆ ಅವರ ಎಲ್ಲ ವಿದ್ಯುತ್ ಘಟಕಗಳು ಹಾಗೂ ಸೇತುವೆಗಳನ್ನು ನಾಶಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಅಮೆರಿಕದ ದಾಳಿಗಳು ಇನ್ನೆಷ್ಟು ದಿನ ಮುಂದುವರಿಯಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ಸಾಕು ಎಂದು ನಾನು ಹೇಳುವವರೆಗೂ ದಾಳಿ ಮುಂದುವರಿಯುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆ ನೀಡಿದ ದಿನವೇ ಅಮೆರಿಕ ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಜೊತೆಗೆ ಇರಾನ್ ಬಂದರುಗಳ ಮೇಲೆ ಮತ್ತೆ ನೌಕಾ ನಿರ್ಬಂಧ (ನೇವಲ್ ಬ್ಲಾಕೇಡ್) ಜಾರಿಗೊಳಿಸಿದೆ.
ಜೂನ್ 17ರಂದು ಉಭಯ ದೇಶಗಳ ನಡುವೆ ಜಾರಿಯಾಗಿದ್ದ ಕದನ ವಿರಾಮ ಒಪ್ಪಂದ ಈಗ ಬಹುತೇಕ ಸಂಪೂರ್ಣವಾಗಿ ವಿಫಲವಾಗಿದ್ದು, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ನಿಯಂತ್ರಣ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ.