ಪಾಕ್ ಸಚಿವ ಖ್ವಾಜಾ ಆಸಿಫ್ 
ವಿದೇಶ

Video: 'POK ಪ್ರತಿಭಟನಾಕಾರರೂ ಭಾರತದಷ್ಟೇ ಶತ್ರುಗಳು'; 32 ಮಂದಿ ಹತ್ಯೆ ಸಮರ್ಥಿಸಿಕೊಂಡ ಪಾಕ್ ರಕ್ಷಣಾ ಸಚಿವ Khawaja Asif

ಕಳೆದ ಎರಡು ದಿನಗಳಲ್ಲಿ ಪಿಒಕೆಯ ರಾವಲಕೋಟ್ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಕನಿಷ್ಠ 32 ಕಾಶ್ಮೀರಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪ್ರತಿಭಟನಾಕಾರರ ವಿರುದ್ಧ ನಡೆದ ಹಿಂಸಾತ್ಮಕ ಕಾರ್ಯಾಚರಣೆಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.

ಕಳೆದ ಎರಡು ದಿನಗಳಲ್ಲಿ ಪಿಒಕೆಯ ರಾವಲಕೋಟ್ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಕನಿಷ್ಠ 32 ಕಾಶ್ಮೀರಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಖ್ವಾಜಾ ಆಸಿಫ್, ಪ್ರತಿಭಟನಾಕಾರರನ್ನು ತಾನು "ಆಜಾದ್ ಕಾಶ್ಮೀರದ ಪ್ರತಿಭಟನಾಕಾರರನ್ನು ನಾನು ಭಾರತದಂತೆಯೇ ಶತ್ರುಗಳು" ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದು, ಅವರ ಈ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

24 ದಿನಗಳಲ್ಲಿ 90ಕ್ಕೂ ಹೆಚ್ಚು ಸಾವು

ಇನ್ನು ಕಳೆದ 24 ದಿನಗಳ ಅಂತರದಲ್ಲಿ ಅಂದರೆ ಜೂನ್ 5ರಿಂದ ಪಿಒಕೆಯಲ್ಲಿ ನಡೆಯುತ್ತಿರುವ ಅಶಾಂತಿಯಲ್ಲಿ ಇದುವರೆಗೆ 90ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ಮಿರ್ಪುರ್ ನಗರದಲ್ಲಿ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾರ್ವಜನಿಕರ ಮೇಲೆ ನೇರವಾಗಿ ಗುಂಡು ಹಾರಿಸುತ್ತಿರುವ ಹಾಗೂ ಮೃತದೇಹಗಳನ್ನು ತಮ್ಮ ವಾಹನಗಳಲ್ಲಿ ಸಾಗಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೆಎಎಸಿ ಕಾರ್ಯಕರ್ತರೇ ಗುರಿ?

ಮೃತರಾದವರಲ್ಲಿ ಹೆಚ್ಚಿನವರು ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ಸಂಘಟನೆಯ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ. ಪಿಒಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ್ದ ಕಾರಣಕ್ಕೆ ಇಸ್ಲಾಮಾಬಾದ್ ಈ ಸಂಘಟನೆಯನ್ನು ನಿಷೇಧಿಸಿತ್ತು. ಮೃತರಲ್ಲಿ ಜೆಎಎಸಿ ಸಂಸ್ಥಾಪಕ ಸದಸ್ಯ ಉಮರ್ ನಜೀರ್ ಅವರ ಸಹೋದರ ಉಸ್ಮಾನ್ ನಜೀರ್ ಕೂಡ ಸೇರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊಗಳು

ಜೆಎಎಸಿ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೊಗಳಲ್ಲಿ ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿ, ಜೀವ ಉಳಿಸಿಕೊಳ್ಳಲು ಓಡುತ್ತಿರುವ ಸ್ಥಳೀಯರು, ರಸ್ತೆಗಳಲ್ಲಿ ಬಿದ್ದಿರುವ ಮೃತದೇಹಗಳು ಹಾಗೂ ಉರುಳಿಬಿದ್ದ ಬೈಕ್‌ಗಳು ಕಾಣಿಸುತ್ತಿವೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ತಮ್ಮ ಬೆಂಬಲ ವ್ಯಕ್ತಪಡಿಸಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

'ಶಾಂತಿಯುತ ನಾಗರಿಕರ ಮೇಲೆ ಗುಂಡಿನ ದಾಳಿ'

ಜೆಎಎಸಿ ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, "ಮಿರ್ಪುರ್‌ನಲ್ಲಿ ಮತ್ತೆ ಐವರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಚುರ್ಹೋಯಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ತಮ್ಮ ಸಹೋದರರ ನೋವಿನೊಂದಿಗೆ ಬೀದಿಗಿಳಿದಿದ್ದಾರೆ" ಎಂದು ಆರೋಪಿಸಿದೆ. ಇನ್ನೊಂದು ಪೋಸ್ಟ್‌ನಲ್ಲಿ, "ರಾವಲಕೋಟ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ. ಶಾಂತಿಯುತ ಜನರ ಮೇಲೆ ಭದ್ರತಾ ಪಡೆಗಳು ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿವೆ" ಎಂದು ಜೆಎಎಸಿ ಆರೋಪಿಸಿದೆ.

'ನಮ್ಮ ನೆಲವನ್ನು ನೀವು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದೀರಿ'

ಪಾಕಿಸ್ತಾನದ ಮಾಧ್ಯಮಗಳು ಜೆಎಎಸಿ ಕಾರ್ಯಕರ್ತರು ರಾವಲಕೋಟ್‌ಗೆ ಬಲವಂತವಾಗಿ ನುಗ್ಗಲು ಯತ್ನಿಸಿದ್ದಾರೆ ಎಂದು ವರದಿ ಮಾಡಿರುವುದನ್ನು ಖಂಡಿಸಿದ ಸಂಘಟನೆ, "ನಾವು ಯಾರ ಮನೆಗೂ ಬಲವಂತವಾಗಿ ನುಗ್ಗಿಲ್ಲ. ರಾವಲಕೋಟ್ ನಮ್ಮ ನಗರ. ನೀವು ಅದನ್ನು ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿದ್ದೀರಿ. ಅಲ್ಲಿನ ಶಾಂತಿಯುತ, ನಿರಾಯುಧ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಹಲವರನ್ನು ಕೊಂದಿದ್ದೀರಿ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು, ಸಾಮಾಜಿಕ ಜಾಲತಾಣ Xಗೆ ನೋಟಿಸ್ ಜಾರಿ..!

ಐಫೋನ್‌ಗಳ ಅಬ್ಬರ: ಭಾರತದ ಸ್ಮಾರ್ಟ್‌ಫೋನ್ ರಫ್ತು 10 ಬಿಲಿಯನ್ ಗೇರಿಕೆ, 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?

ಪಾದಚಾರಿ ಮಾರ್ಗದಲ್ಲಿ Bescom ಅಟಾಟೋಪಕ್ಕೆ ಬ್ರೇಕ್; ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!