ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥರೊಂದಿಗೆ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) online desk
ವಿದೇಶ

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, Hormuz ಜಲಸಂಧಿ ಓಪನ್‌!

ಈ ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮೊದಲ ಹಂತವಾಗಿ ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಿದೆ. ಅದೇ ವೇಳೆ ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ಕೂಡಲೇ ಹಿಂತೆಗೆದುಕೊಳ್ಳಲಿದೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮಹತ್ವದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕಾ ಮತ್ತು ಇರಾನ್ ನಡುವಿನ ಐತಿಹಾಸಿಕ ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ (MoU)ಗೆ ಅಧಿಕೃತವಾಗಿ ಸಹಿ ಹಾಕಲಾಗಿದೆ ಎಂದು ಘೋಷಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಮಧ್ಯಸ್ಥಗಾರರಾಗಿ ತಾವೂ ಇದನ್ನು ಅನುಮೋದಿಸಿದ್ದಾಗಿ ಅವರು ತಿಳಿಸಿದ್ದಾರೆ.

ಈ ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮೊದಲ ಹಂತವಾಗಿ ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಿದೆ. ಅದೇ ವೇಳೆ ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ಕೂಡಲೇ ಹಿಂತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಒಪ್ಪಂದವು ಉಭಯ ದೇಶಗಳು ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಹುದಾಗಿದ್ದ ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ಮುಂದಾಗಿದ್ದಕ್ಕಾಗಿ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ.

ಅಮೆರಿಕಾದ ಮಾತುಕತೆ ತಂಡದಲ್ಲಿದ್ದ ಜೆಡಿ ವ್ಯಾನ್ಸ್, ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರ ಪ್ರಯತ್ನಗಳನ್ನೂ ಅವರು ಶ್ಲಾಘಿಸಿದ್ದಾರೆ.

ಇದೇ ವೇಳೆ ಇರಾನ್‌ನ ಪರವಾಗಿ ಮಾತುಕತೆ ನಡೆಸಿದ ಮೊಹಮ್ಮದ್ ಬಗರ್ ಗಲಿಬಾಫ್, ಅಬ್ಬಾಸ್ ಅರಾಘ್ಚಿ ಮತ್ತು ಎಸ್ಕಂದರ್ ಮೊಮೆನಿ ಅವರ ಪಾತ್ರವನ್ನೂ ಮೆಚ್ಚಿದ್ದಾರೆ.

ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾಹ್ ಸೆಯ್ಯದ್ ಮೊಜ್ತಾಬಾ ಹೊಸೆನಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ದೂರದೃಷ್ಟಿ ಮತ್ತು ಶಾಂತಿ ಪರ ನಿಲುವು ಈ ಒಪ್ಪಂದ ಸಾಧ್ಯವಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

ಅಲ್ಲದೆ, ಈ ಒಪ್ಪಂದಕ್ಕೆ ದಾರಿ ಮಾಡಿಕೊಡುವಲ್ಲಿ ಕತಾರ್, ಸೌದಿ ಅರೇಬಿಯಾ, ತುರ್ಕಿಯೆ ಮತ್ತು ಈಜಿಪ್ಟ್ ನಾಯಕರ ಪಾತ್ರವನ್ನು ವಿಶೇಷವಾಗಿ ಪ್ರಶಂಸಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಅವರ ದಣಿವರಿಯದ ಪ್ರಯತ್ನಗಳು ಮತ್ತು ಪ್ರಾದೇಶಿಕ ಸ್ಥಿರತೆಗೆ ನೀಡಿದ ಕೊಡುಗೆ ಈ ಐತಿಹಾಸಿಕ ಒಪ್ಪಂದದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಹೇಳಿದ್ದಾರೆ.

"ಈ ಒಪ್ಪಂದವು ಪರಸ್ಪರ ಗೌರವ, ಉತ್ತಮ ತಿಳುವಳಿಕೆ ಮತ್ತು ಪ್ರಾದೇಶಿಕ ಸಮೃದ್ಧಿಗೆ ಶಾಶ್ವತ ಅಡಿಪಾಯವಾಗಲಿ" ಎಂದು ಶೆಹಬಾಜ್ ಷರೀಫ್ ಆಶಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ಮುಂದುವರಿದಿದ್ದ ಉದ್ವಿಗ್ನತೆ, ಯುದ್ಧ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದ ಈ ಒಪ್ಪಂದದ ಮೂಲಕ ಅಮೆರಿಕಾ ಮತ್ತು ಇರಾನ್ ನಡುವಿನ ನೇರ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಸಿಗುವ ನಿರೀಕ್ಷೆಯಿದೆ. ಒಪ್ಪಂದದ ಭಾಗವಾಗಿ ಇರಾನ್ ತನ್ನ ಸಂಗ್ರಹದಲ್ಲಿರುವ ಹೆಚ್ಚಿನ ಪ್ರಮಾಣದ ಸಮೃದ್ಧೀಕೃತ ಯುರೇನಿಯಂ ಅನ್ನು ದುರ್ಬಲಗೊಳಿಸಲು ಒಪ್ಪಿಕೊಂಡಿದ್ದು, ಪ್ರತಿಯಾಗಿ ಅಮೆರಿಕಾ ಇರಾನ್ ಮೇಲಿನ ಕೆಲವು ಪ್ರಮುಖ ನಿರ್ಬಂಧಗಳಿಗೆ ವಿನಾಯಿತಿ ನೀಡಲಿದೆ. ಇದರ ಪರಿಣಾಮವಾಗಿ ಇರಾನ್ ಮತ್ತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ತೈಲವನ್ನು ಮುಕ್ತವಾಗಿ ಮಾರಾಟ ಮಾಡುವ ಅವಕಾಶ ಪಡೆಯಲಿದೆ.

ಈ ಒಪ್ಪಂದವು ಕೇವಲ ಕದನ ವಿರಾಮಕ್ಕೆ ಸೀಮಿತವಾಗಿಲ್ಲ. ಮುಂದಿನ 60 ದಿನಗಳಲ್ಲಿ ಇರಾನ್‌ನ ಅಣು ಕಾರ್ಯಕ್ರಮದ ಭವಿಷ್ಯದ ಕುರಿತು ಅಂತಿಮ ಮತ್ತು ಸಮಗ್ರ ಒಪ್ಪಂದಕ್ಕೆ ತಲುಪಲು ಎರಡೂ ದೇಶಗಳು ಮಾತುಕತೆ ನಡೆಸಲಿವೆ.

ಇದೇ ಅವಧಿಯಲ್ಲಿ ಅಣು ಚಟುವಟಿಕೆಗಳ ಮೇಲಿನ ನಿಯಂತ್ರಣ, ಅಂತರರಾಷ್ಟ್ರೀಯ ಪರಿಶೀಲನೆ, ನಿರ್ಬಂಧಗಳ ತೆರವು ಮತ್ತು ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಒಪ್ಪಂದದ ಇನ್ನೊಂದು ಪ್ರಮುಖ ಅಂಶವೆಂದರೆ ಜಾಗತಿಕ ತೈಲ ಸರಬರಾಜಿನ ಜೀವನಾಡಿಯೆಂದೇ ಕರೆಯಲ್ಪಡುವ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು. ಯುದ್ಧದ ಕಾರಣದಿಂದ ಈ ಜಲಸಂಧಿಯಲ್ಲಿ ಸಾಗಣೆ ಅಸ್ತವ್ಯಸ್ತಗೊಂಡಿದ್ದರಿಂದ ವಿಶ್ವದ ಹಲವು ರಾಷ್ಟ್ರಗಳು ಇಂಧನ ಕೊರತೆ ಮತ್ತು ಬೆಲೆ ಏರಿಕೆಯ ಸಂಕಷ್ಟವನ್ನು ಎದುರಿಸುತ್ತಿದ್ದವು.

ಈಗ ಒಪ್ಪಂದದ ಪ್ರಕಾರ ಮುಂದಿನ ಎರಡು ತಿಂಗಳು ಯಾವುದೇ ಸುಂಕವಿಲ್ಲದೆ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇದರಿಂದ ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆ ಮೂಡಿದೆ.

ಏತನ್ಮಧ್ಯೆ ಒಪ್ಪಂದದಲ್ಲಿ ಅಮೆರಿಕಾದಿಂದ ಇರಾನ್‌ಗೆ ನೀಡಲಾಗಿರುವ ರಿಯಾಯಿತಿಗಳು ಸಾಕಷ್ಟು ಗಮನ ಸೆಳೆದಿವೆ. ತಕ್ಷಣದಿಂದಲೇ ತೈಲ ರಫ್ತಿಗೆ ಅವಕಾಶ ನೀಡುವ ನಿರ್ಧಾರವು ಇರಾನ್‌ಗೆ ದೊಡ್ಡ ಆರ್ಥಿಕ ಲಾಭ ತಂದುಕೊಡಲಿದೆ. ಇದಲ್ಲದೆ, ಕೆಲವು ಆರ್ಥಿಕ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಪ್ರಕ್ರಿಯೆಯೂ ಆರಂಭವಾಗಲಿದೆ. ಮುಂದಿನ ಮಾತುಕತೆಗಳು ಯಶಸ್ವಿಯಾದರೆ ಅಮೆರಿಕಾ ಮತ್ತು ವಿಶ್ವಸಂಸ್ಥೆಯ ವಿವಿಧ ನಿರ್ಬಂಧಗಳನ್ನು ಕೂಡ ತೆರವುಗೊಳಿಸುವ ಸಾಧ್ಯತೆ ಇದೆ.

ಒಪ್ಪಂದದ ಮತ್ತೊಂದು ಅಂಶವಾಗಿ ಇರಾನ್‌ನ ಪುನರ್‌ನಿರ್ಮಾಣ ಮತ್ತು ಆರ್ಥಿಕ ಚೇತರಿಕೆಗೆ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ನೆರವು ಒದಗಿಸುವ ಸಾಧ್ಯತೆಯನ್ನೂ ಉಲ್ಲೇಖಿಸಲಾಗಿದೆ.

ಈ ಮೊತ್ತವನ್ನು ಮುಖ್ಯವಾಗಿ ಗಲ್ಫ್ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಂದ ಸಂಗ್ರಹಿಸುವ ಕುರಿತು ಚರ್ಚೆಗಳು ನಡೆಯಲಿವೆ. ಆದರೆ, ಯುದ್ಧದ ಸಮಯದಲ್ಲಿ ಇರಾನ್ ದಾಳಿಗಳಿಂದ ಹಾನಿಗೊಳಗಾದ ಕೆಲವು ಗಲ್ಫ್ ರಾಷ್ಟ್ರಗಳು ಈ ಯೋಜನೆಗೆ ಎಷ್ಟು ಮಟ್ಟಿಗೆ ಬೆಂಬಲ ನೀಡುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಒಪ್ಪಂದವು ಇಸ್ರೇಲ್‌ಗೆ ರಾಜತಾಂತ್ರಿಕ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರವು ಇರಾನ್ ವಿರುದ್ಧ ಕಠಿಣ ನಿಲುವು ತಾಳಿತ್ತು. ಆದರೆ, ಒಪ್ಪಂದದ ಕೆಲವು ಅಂಶಗಳು ಇಸ್ರೇಲ್‌ನ ಭದ್ರತಾ ಕಾಳಜಿಗಳಿಗೆ ವಿರುದ್ಧವಾಗಿವೆ ಎಂಬ ಅಭಿಪ್ರಾಯ ಇಸ್ರೇಲ್‌ನಲ್ಲಿ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಲೆಬನಾನ್ ಪ್ರದೇಶದ ಕುರಿತ ವಿವಾದಾತ್ಮಕ ಅಂಶಗಳು ಮುಂದಿನ ದಿನಗಳಲ್ಲಿ ಹೊಸ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಇದೆ.

ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಟ್ರಂಪ್, ಇದು ಬಲಿಷ್ಠ ಮತ್ತು ಮಹತ್ವದ ಒಪ್ಪಂದ ಎಂದು ಹೇಳಿದ್ದಾರೆ. ಆದರೆ, ಷರತ್ತುಗಳನ್ನು ಪಾಲಿಸದಿದ್ದರೆ ಮತ್ತೆ ಸೈನಿಕ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ ಇರಾನ್ ತನ್ನ ಅಣು ಕಾರ್ಯಕ್ರಮ ಸಂಪೂರ್ಣವಾಗಿ ಶಾಂತಿಯುತ ಉದ್ದೇಶಗಳಿಗಾಗಿಯೇ ಎಂದು ಪುನರುಚ್ಚರಿಸಿದೆ.

ಈ ಬೆಳವಣಿಗೆಯಿಂದ ಜಾಗತಿಕ ಆರ್ಥಿಕತೆಗೆ ದೊಡ್ಡ ಮಟ್ಟದ ನಿರಾಳತೆ ಸಿಗುವ ನಿರೀಕ್ಷೆಯಿದೆ. ತೈಲ ಬೆಲೆಗಳಲ್ಲಿನ ಏರಿಳಿತ ಕಡಿಮೆಯಾಗಬಹುದು, ಸಾಗಣೆ ವ್ಯವಸ್ಥೆ ಸುಧಾರಿಸಬಹುದು ಹಾಗೂ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗುವ ಸಾಧ್ಯತೆ ಇದೆ. ಆದಾಗ್ಯೂ ಈ ಮಧ್ಯಂತರ ಒಪ್ಪಂದವು ಅಂತಿಮ ಪರಿಹಾರವಲ್ಲ. ಮುಂದಿನ 60 ದಿನಗಳ ಅಣು ಮಾತುಕತೆಗಳ ಫಲಿತಾಂಶವೇ ಅಮೆರಿಕಾ-ಇರಾನ್ ಸಂಬಂಧಗಳ ಭವಿಷ್ಯವನ್ನು ಮತ್ತು ಮಧ್ಯಪ್ರಾಚ್ಯದ ಸ್ಥಿರತೆಯನ್ನು ನಿರ್ಧರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ನೀರು ಹಂಚಿಕೆ: ತಮಿಳುನಾಡು ಅರ್ಜಿಯನ್ನು ಸುಪ್ರೀಂನಲ್ಲಿ ಪ್ರಶ್ನಿಸಲು ಅಧಿಕಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನ

ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ತಡೆ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹತೆ ರದ್ದು!

ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!

ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆ ನೀಡಬೇಡಿ: ಪಕ್ಷ ನಿಮ್ಮ ಸೇವೆ ಮರೆಯಲ್ಲ; ಅಸಮಾಧಾನಿತ ಶಾಸಕರಿಗೆ ಬಿ.ಕೆ ಹರಿಪ್ರಸಾದ್ ಮನವಿ

ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌ ಹೆಸರು; ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಸುರೇಶ್‌ ಕುಮಾರ್‌ ಕಿಡಿ