ಟೈರ್: ಇಸ್ರೇಲ್ ಶುಕ್ರವಾರ ದಕ್ಷಿಣ ಲೆಬನಾನ್ ಮೇಲೆ ಹಲವು ಬಾರಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ನಾಲ್ವರನ್ನು ಹತ್ಯೆ ಮಾಡಿದೆ. ಆದರೆ ಹಿಜ್ಬೂಲ್ಲಾ ಬಂಡುಕೋರರು ನಡೆಸಿದ ಡ್ರೋನ್ ಹಾಗೂ ರಾಕೆಟ್ ದಾಳಿಯಲ್ಲಿ ಉತ್ತರ ಇಸ್ರೇಲ್‌ನಲ್ಲಿಇಬ್ಬರು ಸೈನಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಏಪ್ರಿಲ್ 17 ರಿಂದ ಜಾರಿಯಲ್ಲಿರುವ ಕದನ ವಿರಾಮದ ಹೊರತಾಗಿಯೂ ಇಸ್ರೇಲ್ ಮಿಲಿಟರಿ ಮತ್ತು ಹಿಜ್ಬೊಲ್ಲಾ ತಮ್ಮ ದಾಳಿಯನ್ನು ಮುಂದುವರೆಸಿವೆ. ದಕ್ಷಿಣ ಲೆಬನಾನ್ ನ ಮೂರು ಹಳ್ಳಿಗಳ ಮೇಲಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಜ್ಬೊಲ್ಲಾ ಉಗ್ರರರು ತಮ್ಮ ಸಮೀಪದಲ್ಲಿರುವ ನಾಗರಿಕರಿಗೆ ತೊಂದರೆ ನೀಡುವ ಸಾಧ್ಯತೆಯಿದ್ದು, ಬೇರೆಡೆಗೆ ಸ್ಥಳಾಂತರವಾಗುವಂತೆ ನಬಾತಿಹ್ ನಗರದ ಬಳಿಯ ಹಬ್ಬೌಶ್ ಗ್ರಾಮದ ನಿವಾಸಿಗಳಿಗೆ ಇಸ್ರೇಲ್ ಮಿಲಿಟರಿ ಇಂದು ಮಧ್ಯಾಹ್ನ ಸೂಚನೆ ನೀಡಿತ್ತು.
ನಬಾತಿಹ್ ನಬತಿಯೆಹ್ ಬಳಿಯ ಕ್ಫರ್ ರುಮ್ಮನ್ ಗ್ರಾಮದಲ್ಲಿ ಅವಶೇಷಗಳಡಿಯಿಂದ ಒಬ್ಬ ವ್ಯಕ್ತಿ ಮತ್ತು ಅವನ ಮೂವರು ಪುತ್ರರು ಸೇರಿದಂತೆ ಐದು ಜನರ ಶವಗಳನ್ನು ಹೊರತೆಗೆದ ನಂತರ ಈ ದಾಳಿ ನಡೆದಿದೆ.
ಗುರುವಾರ ತಡರಾತ್ರಿ ಕ್ಫರ್ ರುಮ್ಮನ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ದಾಳಿಯಲ್ಲಿ ಒಬ್ಬ ಲೆಬನಾನಿನ ಸೈನಿಕನೂ ಸಾವನ್ನಪ್ಪಿರುವುದಾಗಿ ಹೇಳಿದೆ.
ದಾಳಿಯಲ್ಲಿ ಅಲಿ ಜಾಬರ್ ಎಂಬ ಸೈನಿಕ ಸಾವನ್ನಪ್ಪಿದ್ದಾನೆ ಎಂದು ಲೆಬನಾನಿನ ಸೇನೆ ದೃಢಪಡಿಸಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ, ಇಸ್ರೇಲಿ ಮಿಲಿಟರಿ ನೆಲೆಗಳ ಮೇಲೆ ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹಿಜ್ಬೊಲ್ಲಾ ಬಂಡುಕೋರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.