ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದ ಚೀನಾ ಪ್ರವಾಸ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗ್ತಿದೆ.
ಚೀನಾ ಅಧ್ಯಕ್ಷರ ಜೊತೆ ಸಂಬಂಧ ಸುಧಾರಣೆ ಯತ್ನ ಅಂತಲೇ ಡೊನಾಲ್ಡ್ ಟ್ರಂಪ್ ಅವರ ಈ ಭೇಟಿಯನ್ನ ವಿಶ್ಲೇಷಿಸಲಾಗಿತ್ತು. ಅದಕ್ಕೆ ತಕ್ಕಂತೆ ಟ್ರಂಪ್ ಚೀನಾ ಅಧ್ಯಕ್ಷರನ್ನು ಹಾಡಿ ಹೊಗಳಿದ್ದರು. ಈಗ ಟ್ರಂಪ್ ಹಾಗೂ ಅವರ ತಂಡದವರ ಚೀನಾ ಭೇಟಿ ಸುದ್ದಿಯಾಗುತ್ತಿರೋದೇ ಬೇರೆ ಕಾರಣಕ್ಕೆ.
ಅಲ್ಲಿ ಆಗಿದ್ದೇನು ಅಂದರೆ, ಚೀನಾ ಪ್ರವಾಸದಲ್ಲಿದ್ದ ಟ್ರಂಪ್ ಹಾಗೂ ಅವರ ತಂಡಕ್ಕೆ ಚೀನಾದಿಂದ ಕೊಡಲಾಗಿದ್ದ ಬ್ಯಾಡ್ಜ್, ಲ್ಯಾಪಲ್ ಪಿನ್, ಬರ್ನರ್ ಫೋನ್ (use and throw mobile) ಹಾಗೂ ಇನ್ನಿತರ ಒಂದಷ್ಟು ಉಡುಗೊರೆಗಳನ್ನು ಟ್ರಂಪ್ ತಂಡದವರು ಚೀನಾದಲ್ಲೇ ಬಿಟ್ಟು ಹೋಗಿದ್ದಾರೆ.
ಪ್ರವಾಸ ಮುಕ್ತಾಯಗೊಳಿಸಿ ಅಮೆರಿಕಾಗೆ ವಾಪಸ್ ತೆರಳುವಾಗ ಟ್ರಂಪ್ ಹಾಗೂ ಅವರ ತಂಡ ತಮಗೆ ನೀಡಲಾಗಿದ್ದ ವಸ್ತುಗಳು, ಉಡುಗೊರೆಗಳನ್ನು ವಿಮಾನದ ಬದಿಯಲ್ಲೇ ಇರಿಸಿದ ಕಸದ ಬುಟ್ಟಿಯೊಂದರಲ್ಲಿ ಎಸೆದು ವಿಲೇವಾರಿ ಮಾಡಿದ್ದಾರೆ. "ಚೀನಾದಲ್ಲಿ ಕೊಟ್ಟ ಯಾವುದೇ ವಸ್ತುಗಳಿಗೂ ಅಮೆರಿಕಾದ ವಿಮಾನದ ಒಳಗೆ ಪ್ರವೇಶವಿಲ್ಲ" ಎಂದು ಎಕ್ಸ್ ನಲ್ಲಿ ಶ್ವೇತ ಭವನದ ಪ್ರತಿನಿಧಿ ಎಮಿಲಿ ಗುಡಿನ್ (Emily goodin) ಪೋಸ್ಟ್ ಮಾಡಿದ್ದಾರೆ. ವಾಪಸ್ ತೆರಳುವುದಕ್ಕೂ ಮೊದಲೇ ಇಂಥಹದ್ದೊಂದು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಟ್ರಂಪ್ ತಂಡಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಚೀನಾದಿಂದ ವಾಪಸ್ ತೆರಳುವಾಗ ಅಷ್ಟೇ ಅಲ್ಲದೇ ಚೀನಾಗೆ ಪ್ರವೇಶಿಸುವುದಕ್ಕೂ ಮೊದಲೇ ಎಲೆಕ್ಟ್ರಾನಿಕ್ ವಸ್ತುಗಳ ವಿಷಯದಲ್ಲಿ ಟ್ರಂಪ್ ತಂಡ ಭಾರಿ ಮುನ್ನೆಚ್ಚರಿಕೆ ವಹಿಸಿತ್ತು. ಅದರ ಭಾಗವಾಗಿ ತಂಡದ ಎಲ್ಲಾ ಸದಸ್ಯರೂ ತಮ್ಮ ಬಳಿ ಇದ್ದ ತಮ್ಮ ವೈಯಕ್ತಿಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಚೀನಾಗೆ ತೆರಳುವುದಕ್ಕೂ ಮೊದಲೇ ಅಮೆರಿಕಾದಲ್ಲಿನ ತಮ್ಮ ಮನೆಗಳಲ್ಲಿ ಬಿಟ್ಟು ತೆರಳಿದ್ದರು, ಚೀನಾದ ಪ್ರವಾಸದ ಉದ್ದಕ್ಕೂ ಟ್ರಂಪ್ ತಂಡ ಬಳಸಿ ಎಸೆಯಬಹುದಾದ ಬರ್ನರ್ ಫೋನ್ ಗಳನ್ನ ಬಳಸಿತ್ತು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ಬೆಳವಣಿಗೆಯನ್ನ ಚೀನಾದ ಬಗ್ಗೆ ಅಮೆರಿಕಾಗೆ ಇರುವ ವಿಶ್ವಾಸಾರ್ಹತೆಯ ಕೊರತೆ ಹಾಗೂ ಆತಂಕವನ್ನ ತೋರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜತಾಂತ್ರಿಕರು ಅಥವಾ ದೇಶದ ಉನ್ನತ ಸ್ಥಾನದಲ್ಲಿರುವವರು ಗೂಢಚಾರಿಕೆಯಿಂದ ಎಚ್ಚರ ವಹಿಸಲು ಅಥವಾ ಡೇಟಾ ಕಳ್ಳತನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ತಾತ್ಕಾಲಿಕವಾಗಿ ಬಳಕೆ ಮಾಡಿ ನಾಶ ಮಾಡಬಹುದಾದ ಫೋನ್ ಗಳನ್ನು ಬಳಸುತ್ತಾರೆ, ಇದನ್ನೇ ಬರ್ನರ್ ಫೋನ್ ಗಳೆನ್ನಲಾಗುತ್ತೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭೇಟಿ ವೇಳೆ ಚೀನಾ ಅಧ್ಯಕ್ಷರೊಂದಿಗೆ ಅದೆಷ್ಟೇ ನಿಕಟ ಸಂಬಂಧ ಇರುವಂತೆ ತೋರಿಸಿಕೊಂಡರೂ, ತೈವಾನ್ ವಿಷಯದಲ್ಲಿ ಚೀನಾ ಅಮೆರಿಕಾಗೆ ನೇರ ಎಚ್ಚರಿಕೆ ಕೊಟ್ಟಿದ್ದೂ, ಭದ್ರತೆಯ ವ್ಯವಸ್ಥೆಗಳು, ಮಾಧ್ಯಮಗಳಿಗೆ ಪ್ರವೇಶ ಸೇರಿ ಹಲವು ಸಂದರ್ಭಗಳಲ್ಲಿ, ಹಲವು ಅಂಶಗಳಲ್ಲಿ ಅಮೆರಿಕ- ಚೀನಾ ನಡುವೆ ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು.
ಅಮೆರಿಕ ಅಧ್ಯಕ್ಷರ ಚೀನಾ ಭೇಟಿ ಸಂದರ್ಭದಲ್ಲಿ ಟ್ರಂಪ್ ಕ್ಸೀ ಜೊತೆ ಬೀಜಿಂಗ್ ನ ಟೆಂಪಲ್ ಆಫ್ ಹೆವನ್ ಗೆ ಭೇಟಿ ನೀಡಿದ್ದಾಗ ಅಮೆರಿಕಾದ ಮಾಧ್ಯಮಗಳಿಗೆ ಚೀನಾ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದರು. ಅಮೆರಿಕದ ಮಾಧ್ಯಮ ಏಜೆಂಟ್ ಫೈರ್ ಆರ್ಮ್ ನ್ನು ತಮ್ಮೊಂದಿಗೆ ಹೊಂದಿದ್ದಕ್ಕಾಗಿ ಪ್ರವೇಶ ನಿರ್ಬಂಧಿಸಲಾಯಿತು ಎಂದು ಚೀನಾ ಆ ಬಳಿಕ ಸ್ಪಷ್ಟನೆಯನ್ನೂ ಕೊಟ್ಟಿತ್ತು. ಬಳಿಕ ಈ ವಿಷಯವಾಗಿ ಚೀನಾ- ಅಮೆರಿಕ ಅಧಿಕಾರಿಗಳ ನಡುವೆ ತೀವ್ರ ಚರ್ಚೆ ನಡೆದು, 90 ನಿಮಿಷಗಳ ವಿಳಂಬದ ನಂತರ ಪ್ರವೇಶವನ್ನು ಕೊಡಲಾಗಿತ್ತು.
ಟ್ರಂಪ್ ಚೀನಾ ಭೇಟಿಯನ್ನು, ಉಭಯ ದೇಶಗಳ ನಡುವೆ ಸೌಹಾರ್ದ ಸಂಬಂಧ ಇದೆ ಎಂದು ಸಾರ್ವಜನಿಕವಾಗಿ ಬಿಂಬಿಸೋದಕ್ಕೆ ಎಷ್ಟೇ ಪ್ರಯತ್ನ ನಡೆದರೂ, ಅಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಅಸಮತೋಲನ, ಟೆಕ್ನಾಲಜಿ ಪೈಪೋಟಿ, ತೈವಾನ್, ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಬಗೆಹರಿಯದೇ ಹಾಗೇ ಉಳಿದಿದೆ.