ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಅಲ್ಲಿನ ಸರ್ಕಾರ ಶಾಶ್ವತವಾಗಿ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.
ಹೌದು.. ಉದ್ಯಮಿ ಗೌತಮ್ ಅದಾನಿವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದ್ದ ಉನ್ನತ ಮಟ್ಟದ ಸೆಕ್ಯುರಿಟೀಸ್ ಮತ್ತು ವೈರ್ ಫ್ರಾಡ್ ಪ್ರಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಅಲ್ಲದೆ Adani Group ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿದ್ದ ಅನೇಕ ನಿಯಂತ್ರಣಾತ್ಮಕ ಮತ್ತು ಕಾನೂನು ತನಿಖೆಗಳು ಕಳೆದ ಕೆಲ ದಿನಗಳಲ್ಲಿ ಸಂಪೂರ್ಣವಾಗಿ ಮುಕ್ತಾಯಗೊಂಡಂತಾಗಿದೆ.
ಕಳೆದ ವಾರ US Securities and Exchange Commission (SEC), ಭಾರತದಲ್ಲಿನ ಸೌರಶಕ್ತಿ ಯೋಜನೆಗಳಿಗೆ ಸಂಬಂಧಿಸಿದ ಹೂಡಿಕೆದಾರರ ಮಾಹಿತಿ ಬಹಿರಂಗಪಡಿಸುವಿಕೆ ಕುರಿತ ನಾಗರಿಕ ಆರೋಪಗಳನ್ನು ಗೌತಮ್ ಅದಾನಿ ಮತ್ತು ಅವರ ಅಳಿಯ ಸಾಗರ್ ಅದಾನಿ ವಿರುದ್ಧ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿತ್ತು.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಯಾವುದೇ ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ತಳ್ಳಿಹಾಕದೇ ಗೌತಮ್ ಅದಾನಿ 6 ಮಿಲಿಯನ್ ಅಮೆರಿಕನ್ ಡಾಲರ್ ಹಾಗೂ ಸಾಗರ್ ಅದಾನಿ 12 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಅದರ ಬಳಿಕ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (Office of Foreign Assets Control) (OFAC), ಇರಾನ್‌ನಿಂದ ಎಲ್‌ಪಿಜಿ ಆಮದು ಮಾಡುವ ಸಂದರ್ಭದಲ್ಲಿ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪಗಳ ಕುರಿತು ಅದಾನಿ ಸಮೂಹದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ತನಿಖೆಗೆ “ವ್ಯಾಪಕ ಸಹಕಾರ” ನೀಡಿದ ಹಾಗೂ “ಸ್ವಯಂಪ್ರೇರಿತ” ಮಾಹಿತಿಬಹಿರಂಗಪಡಿಸಿದ ಹಿನ್ನೆಲೆಯಲ್ಲಿ 275 ಮಿಲಿಯನ್ ಡಾಲರ್ ಪಾವತಿಸಲು ಸಮೂಹ ಒಪ್ಪಿಕೊಂಡಿತ್ತು. ಈಗ ಯುನೈಟೆಡ್ ಸ್ಟೇಟ್ಸ್ ನ್ಯಾಯಾಂಗ ಇಲಾಖೆ (United States Department of Justice) (DOJ), ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಟ್ಟಿದೆ.
ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಅಮೆರಿಕದ ನ್ಯಾಯಾಂಗ ಇಲಾಖೆ ಅದಾನಿಗಳ ವಿರುದ್ಧದ ಆರೋಪಪಟ್ಟಿಯನ್ನು “with prejudice” ಅಂದರೆ ಶಾಶ್ವತವಾಗಿ ವಜಾಗೊಳಿಸುವಂತೆ ಮನವಿ ಮಾಡಿದೆ. “ನ್ಯಾಯಾಂಗ ಇಲಾಖೆ ಈ ಪ್ರಕರಣವನ್ನು ಪರಿಶೀಲಿಸಿದ್ದು, ವೈಯಕ್ತಿಕ ಆರೋಪಿಗಳ ವಿರುದ್ಧದ ಈ ಕ್ರಿಮಿನಲ್ ಆರೋಪಗಳಿಗೆ ಮತ್ತಷ್ಟು ಸಂಪನ್ಮೂಲಗಳನ್ನು ಬಳಸಬಾರದೆಂದು ತನ್ನ ಅಭಿಯೋಜನಾ ವಿವೇಚನೆಯಡಿ ತೀರ್ಮಾನಿಸಿದೆ” ಎಂದು ಅದು ಹೇಳಿದೆ.
ನಂತರ ನ್ಯಾಯಾಲಯ, ಅದಾನಿ ಹಾಗೂ ಇತರರ ವಿರುದ್ಧದ ಆರೋಪಪಟ್ಟಿಯನ್ನು “with prejudice” ಅಂದರೆ ಮರುತೆರೆಯಲಾಗದಂತೆ ವಜಾಗೊಳಿಸಲು ಆದೇಶಿಸಿದೆ. ಈ ಬೆಳವಣಿಗೆ, Adani Groupನ ಜಾಗತಿಕ ವಿಸ್ತರಣಾ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ಭಾವಿಸಲಾಗಿದ್ದ ಪ್ರಕರಣದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿದೆ.
ಲಂಚ ನೀಡಿಕೆ ಆರೋಪ
2024ರ ಕೊನೆಯಲ್ಲಿ ದಾಖಲಾದ SEC ಮತ್ತು DOJ ಪ್ರಕರಣಗಳಲ್ಲಿ, ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು 265 ಮಿಲಿಯನ್ ಡಾಲರ್ ಮೌಲ್ಯದ ಯೋಜನೆ ರೂಪಿಸಲಾಗಿದೆ ಮತ್ತು ಅಮೆರಿಕದ ಹೂಡಿಕೆದಾರರು ಹಾಗೂ ಸಾಲದಾತರಿಂದ ಈ ಮಾಹಿತಿಯನ್ನು ಮರೆಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
“With prejudice” ಮೂಲಕ ಪ್ರಕರಣ ವಜಾಗೊಂಡಿರುವುದರಿಂದ, ಅದನ್ನು ಮತ್ತೆ ತೆರೆಯಲು ಸಾಧ್ಯವಿಲ್ಲ. ಅಮೆರಿಕದ ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ಇಂತಹ ವಜಾಗೊಳಿಸುವಿಕೆ ಅಪರೂಪವಾಗಿದ್ದು, ಸಾಮಾನ್ಯವಾಗಿ ಸವಿಸ್ತಾರ ಪರಿಶೀಲನೆಯ ಬಳಿಕ ಪ್ರಕರಣ ಮುಂದುವರಿಸುವ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ.
ಈ ಪ್ರಕರಣದಲ್ಲಿ ಅಮೆರಿಕದೊಂದಿಗೆ ಸ್ಪಷ್ಟ ಸಂಪರ್ಕಗಳಿಲ್ಲ ಹಾಗೂ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂಬ ನಿರ್ಣಯಕ್ಕೆ ಅಭಿಯೋಜಕರು ಬಂದ ಬಳಿಕ ಅದಾನಿಗಳ ಪರ ಪರಿಸ್ಥಿತಿ ತಿರುಗಿತು ಎಂದು ವಿಷಯಕ್ಕೆ ಪರಿಚಿತರಾದವರು ತಿಳಿಸಿದ್ದಾರೆ.
ಈ ನಿರೀಕ್ಷಿತ ತೀರ್ಮಾನಕ್ಕೂ ಮುನ್ನ, ಅಮೆರಿಕದ ಅಭಿಯೋಜಕರು ಹಾಗೂ ಅದಾನಿಗಳ ಪರ ಬಲಿಷ್ಠ ಕಾನೂನು ತಂಡದ ನಡುವೆ ಹಲವು ತಿಂಗಳುಗಳ ಕಾಲ ತೀವ್ರ ವಾದಪ್ರತಿವಾದಗಳು ನಡೆದಿದ್ದವು.