ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸ್ಟೈಲ್ನಲ್ಲೇ ದೀಪಾವಳಿ ಶುಭಾಶಯ ಕೋರಿದ್ದು, ಅವರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೌದು, ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ರಜನಿ ಸ್ಟೈಲ್ನಲ್ಲಿ ಸನ್-ಗ್ಲಾಸ್ (ಕನ್ನಡಕ) ಅನ್ನು ಗಾಳಿಯಲ್ಲಿ ಹಾರಿಸಿ ಧರಿಸುವ ಮೂಲಕ ಮತ್ತು ಅವರ ವಿಶಿಷ್ಟ ಹಾವಭಾವಗಳನ್ನು ಅನುಕರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ವಿಡಿಯೋದಲ್ಲಿ ಇಬ್ರಾಹಿಂ ಅವರು ಕಂಟೆಂಟ್ ಕ್ರಿಯೇಟರ್ ದೇವರಾಜ್ ಡೇವಿಡ್ ಅವರೊಂದಿಗೆ ಕಾಣಿಸಿಕೊಂಡಿದ್ದು, ರಜನಿಕಾಂತ್ ಅವರ ಸಿನಿಮಾದ ಸಂಭಾಷಣೆ ಸಹ ಕೇಳಿಸುತ್ತದೆ. ಹಿಂದಿ ಚಲನಚಿತ್ರಗಳು ಮತ್ತು ಸಂಗೀತದ ದೊಡ್ಡ ಅಭಿಮಾನಿಯಾಗಿರುವ ಇಬ್ರಾಹಿಂ, ನಾಗರಿಕರು ದೀಪಾವಳಿಯನ್ನು ತಮ್ಮ ಕುಟುಂಬದೊಂದಿಗೆ ಆಚರಿಸುವಂತೆ ಕರೆ ನೀಡಿದ್ದಾರೆ.
"ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಒಳಗೊಂಡಿರುವ ಬಹುತ್ವದ ಸಮಾಜದಲ್ಲಿ, ಪರಸ್ಪರ ಗೌರವ, ತಿಳುವಳಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಮೌಲ್ಯಗಳನ್ನು ನಿರಂತರವಾಗಿ ಬಲಪಡಿಸಬೇಕು. ಈ ಹಬ್ಬವು ಐಕ್ಯತೆಯನ್ನು ಬಲಪಡಿಸಲು, ಜನಾಂಗಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಹಾಗೂ ದಾನಶೀಲತೆ ಮತ್ತು ಕಾಳಜಿ ವಹಿಸುವ ಮೌಲ್ಯಗಳನ್ನು ಬೆಳೆಸಲು ಒಂದು ಮಾಧ್ಯಮವಾಗಲಿ" ಎಂದು ಇಬ್ರಾಹಿಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಬ್ರಾಹಿಂ ಅವರು 2023ರಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 2026ರಲ್ಲಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ಔತಣಕೂಟದ ವೇಳೆ, ಅವರು ಕಿಶೋರ್ ಕುಮಾರ್ ಅವರ 'ಖ್ವಾಬ್ ಹೋ ತುಮ್...' (Khwab Ho Tum...) ಹಾಡನ್ನು ಹಾಡಿದ್ದರು.