ಡೊನಾಲ್ಡ್ ಟ್ರಂಪ್ 
ವಿದೇಶ

ಅಸ್ತಿತ್ವದಲ್ಲೇ ಇಲ್ಲದ ಭಾರತದ ಅಧ್ಯಕ್ಷೀಯ ಚುನಾವಣೆ ಉಲ್ಲೇಖಿಸಿ ಟ್ರಂಪ್ ಎಡವಟ್ಟು: ಬ್ರೆಜಿಲ್ ಚುನಾವಣೆಯನ್ನು ಭಾರತದೆಂದು ತಪ್ಪಾಗಿ ಗ್ರಹಿಸಿದರೇ?

ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಬರೋಬ್ಬರಿ 12.5 ಕೋಟಿ (125 ಮಿಲಿಯನ್) ಜನರು ಮತ ಚಲಾಯಿಸಿದ್ದಾರೆ. ಇಷ್ಟು ದೊಡ್ಡ ದೇಶದಲ್ಲೂ ಮತದಾನ ನಡೆದ ಅದೇ ದಿನವೇ ಫಲಿತಾಂಶಗಳು ಕೈಸೇರಿವೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಿಂದಾಗಿ ಭಾರಿ ಟ್ರೋಲ್'ಗೊಳಗಾಗಿದ್ದಾರೆ.

ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಬ್ರೆಜಿಲ್ ದೇಶದ ಅಧ್ಯಕ್ಷೀಯ ಚುನಾವಣೆಯ ವಿಚಾರವನ್ನು ಬರೆಯುವ ಗಡಿಬಿಡಿಯಲ್ಲಿ, ಭಾರತದ ಹೆಸರನ್ನು ಉಲ್ಲೇಖಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ಭಾರತದಲ್ಲಿ 12.5 ಕೋಟಿ ಜನರು ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಮತ ಚಲಾಯಿಸಿದ್ದು, ಮತದಾನ ಮುಗಿದ ಕೆಲವೇ ಸಮಯದಲ್ಲಿ ಅದೇ ದಿನ ಫಲಿತಾಂಶ ಪ್ರಕಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಟೀಕಿಸುವ ಸಂದರ್ಭದಲ್ಲಿ ಟ್ರಂಪ್ ಈ ಉಲ್ಲೇಖ ಮಾಡಿದ್ದಾರೆ.

ಇಂದು ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ 125 ಮಿಲಿಯನ್ ಜನರು ಮತ ಚಲಾಯಿಸಿದ್ದಾರೆ. ಮತದಾನ ಮುಕ್ತಾಯವಾದ ಕೆಲವೇ ಸಮಯದಲ್ಲಿ, ಅದೇ ದಿನ ಫಲಿತಾಂಶ ಹೊರಬಂದಿದೆ.

ಡಿಟ್ರಾಯ್ಟ್, ಫಿಲಡೆಲ್ಫಿಯಾ, ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ ಹಲವು ನಗರಗಳು ಮತ್ತು ರಾಜ್ಯಗಳಲ್ಲಿ ಇದಕ್ಕಿಂತ ಕಡಿಮೆ ಸಂಖ್ಯೆಯ ಮತಗಳ ಫಲಿತಾಂಶಗಳನ್ನು ಲೆಕ್ಕ ಹಾಕಲು ವಾರಗಳೇ ಬೇಕಾಗುತ್ತದೆ. ಮತದಾನವನ್ನು ರಿಗ್ ಮಾಡಲು, ಅಂದರೆ ಲೆಕ್ಕ ಹಾಕಲು ಇಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅಮೆರಿಕದ ಮತದಾನ ವ್ಯವಸ್ಥೆ ಭ್ರಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ಟ್ರಂಪ್ ಉಲ್ಲೇಖಿಸಿರುವುದು ಭಾರತವಲ್ಲ, ಬ್ರೆಜಿಲ್ ಆಗಿರುವ ಸಾಧ್ಯತೆ ಇದೆ. ಬ್ರೆಜಿಲ್‌ನಲ್ಲಿ ಭಾನುವಾರ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನ ಮತದಾನ ನಡೆದಿತ್ತು.

ದೇಶದ ಸುಪೀರಿಯರ್ ಎಲೆಕ್ಟೋರಲ್ ಕೋರ್ಟ್ (TSE) ಪ್ರಕಾರ, ಅಲ್ಲಿ 12.5 ಕೋಟಿಗೂ ಹೆಚ್ಚು ಮಾನ್ಯ ಮತಗಳು ದಾಖಲಾಗಿದ್ದವು. ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡ ಬಳಿಕ ಫಲಿತಾಂಶಗಳು ಹಂತ ಹಂತವಾಗಿ ಪ್ರಕಟವಾಗಿದ್ದವು.

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಶೇ.50ಕ್ಕಿಂತ ಹೆಚ್ಚು ಮಾನ್ಯ ಮತಗಳನ್ನು ಪಡೆಯದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲೂಲಾ ದ ಸಿಲ್ವಾ ಮತ್ತು ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಸೆನೆಟರ್ ಫ್ಲಾವಿಯೊ ಬೊಲ್ಸೊನಾರೊ ನಡುವೆ ಎರಡನೇ ಸುತ್ತಿನ ಸ್ಪರ್ಧೆ ನಿಗದಿಯಾಗಿದೆ. ಅಕ್ಟೋಬರ್ 25ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ.

ಪೋಸ್ಟ್ ಸರಿ ಮಾಡಿದ ಟ್ರಂಪ್ ಟೀಮ್

ಈ ನಡುವೆ ಇತರೆ ಜಾಲತಾಣಗಳಲ್ಲಿ ಟ್ರಂಪ್ ಅವರ ಸಾಮಾನ್ಯ ಜ್ಞಾನದ ಕುರಿತು ತೀವ್ರ ಟೀಕೆ ಮತ್ತು ಟ್ರೋಲ್‌ಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಟ್ರಂಪ್ ಅವರ ತಾಂತ್ರಿಕ ತಂಡ, ಟ್ರೂತ್ ಸೋಷಿಯಲ್‌ನಲ್ಲಿದ್ದ ಪೋಸ್ಟ್ ಅನ್ನು ತಕ್ಷಣವೇ ತಿದ್ದುಪಡಿ ಮಾಡಿದೆ.ಟ

ಭಾನುವಾರ ಭಾರತದಲ್ಲಿ ಯಾವುದೇ ಅಧ್ಯಕ್ಷೀಯ ಚುನಾವಣೆ ನಡೆದಿಲ್ಲ. 2022ರ ಜುಲೈನಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿರುವ ದ್ರೌಪದಿ ಮುರ್ಮು ಅವರೇ ಪ್ರಸ್ತುತ ಭಾರತದ ರಾಷ್ಟ್ರಪತಿಯಾಗಿದ್ದಾರೆ.

ಬ್ರೆಜಿಲ್ ಮತ್ತು ಅಮೆರಿಕದಂತೆ ಭಾರತದಲ್ಲಿ ರಾಷ್ಟ್ರಪತಿಯನ್ನು ದೇಶಾದ್ಯಂತ ಜನರು ನೇರವಾಗಿ ಮತ ಚಲಾಯಿಸಿ ಆಯ್ಕೆ ಮಾಡುವುದಿಲ್ಲ. ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡ ಚುನಾವಣಾ ಮಂಡಳಿ ಆಯ್ಕೆ ಮಾಡುತ್ತದೆ. ಅನುಪಾತಾತ್ಮಕ ಪ್ರಾತಿನಿಧ್ಯ ಪದ್ಧತಿಯಡಿ ಏಕ ವರ್ಗಾವಣೆ ಮತದಾನದ ಮೂಲಕ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ.

ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಸದಸ್ಯರನ್ನು ನೇರವಾಗಿ ಆಯ್ಕೆ ಮಾಡುತ್ತಾರೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಪಕ್ಷ ಅಥವಾ ಮೈತ್ರಿಕೂಟದ ನಾಯಕನನ್ನು ಸಾಮಾನ್ಯವಾಗಿ ರಾಷ್ಟ್ರಪತಿ ಪ್ರಧಾನಮಂತ್ರಿಯಾಗಿ ನೇಮಿಸುತ್ತಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಭಾರತದಲ್ಲಿ ಸುಮಾರು 98 ಕೋಟಿ ನೋಂದಾಯಿತ ಮತದಾರರಿದ್ದರು.

ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸುವ ಸಂದರ್ಭದಲ್ಲಿ ಟ್ರಂಪ್ ಈ ಹಿಂದೆ ಕೂಡ ಭಾರತದ ಚುನಾವಣೆಗಳನ್ನು ಉಲ್ಲೇಖಿಸಿದ್ದರು.

ಆಗಸ್ಟ್ 17ರಂದು ಟ್ರಂಪ್, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆ ಹೇಗೆ ನಡೆಸಬಹುದು ಎಂದು ತಮ್ಮ ಆಡಳಿತವನ್ನು ಪ್ರಶ್ನಿಸಿದ್ದರು.

ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನಮ್ಮ ಆಡಳಿತವನ್ನು ಸಂಪರ್ಕಿಸಿ, ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆ ಹೇಗೆ ನಡೆಸಬಹುದು ಎಂದು ಕೇಳಿದ್ದಾರೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದರು.

ಭಾರತದ ಕಳೆದ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಮತ ಚಲಾಯಿಸಿದ್ದರು, ಶೇ.1ಕ್ಕಿಂತಲೂ ಕಡಿಮೆ ಮಂದಿ ಅಂಚೆ ಮತದಾನದ ಮೂಲಕ ಮತ ಚಲಾಯಿಸಿದ್ದರು ಮತ್ತು ಪ್ರತಿಯೊಬ್ಬ ಮತದಾರನ ಬಳಿಯೂ ಮಾನ್ಯ ಫೋಟೋ ಗುರುತಿನ ಚೀಟಿ ಇತ್ತು ಎಂದೂ ಟ್ರಂಪ್ ಹೇಳಿದ್ದರು.

ಅಮೆರಿಕದಲ್ಲಿ ಮತದಾರರ ನೋಂದಣಿಗೆ ಪೌರತ್ವದ ಪುರಾವೆ ಕಡ್ಡಾಯಗೊಳಿಸುವುದು, ದೇಶಾದ್ಯಂತ ಮತದಾರರ ಗುರುತಿನ ಚೀಟಿ ನಿಯಮ ಜಾರಿಗೆ ತರುವುದು ಮತ್ತು ಅಂಚೆ ಮತದಾನಕ್ಕೆ ನಿರ್ಬಂಧ ವಿಧಿಸುವ ಉದ್ದೇಶ ಹೊಂದಿರುವ ‘ಸೇವ್ ಅಮೆರಿಕಾ ಆಕ್ಟ್‌’ ಅನ್ನು ಕಾಂಗ್ರೆಸ್ ಅಂಗೀಕರಿಸಬೇಕು ಎಂದು ಒತ್ತಾಯಿಸುವ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pneumonic Plague: ಮತ್ತೆ ವಕ್ಕರಿಸಿದ 'ಪ್ರಾಚೀನ ಮಹಾಮಾರಿ', 5 ಆಸ್ಪತ್ರೆಗಳೇ ಬಂದ್, ನೂರಾರು ಜನರಿಗೆ ಕ್ವಾರಂಟೈನ್!

ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನೆ ಮುಂದುವರಿಕೆ, ಹಲವರು ವಶಕ್ಕೆ!

'ಏಕ್ ಕಚೋರಿ- ದೋ ಸಮೋಸಾ, ಇನ್ ಮರ್ದೋಂಕಾ ಕ್ಯಾ ಭರೋಸಾ': ನನ್ನ ಹೆಣ್ಣುಮಕ್ಕಳು ಇಂತಹ ಘೋಷಣೆ ಬರೆಯುವ ಪರಿಸ್ಥಿತಿ ಏಕೆ ಬಂದಿದೆ?

ಕೆಲಸದ ಆಮಿಷವೊಡ್ಡಿ ಮಹಿಳೆ ಕರೆಸಿಕೊಂಡು ಮತ್ತಿನ ಔಷಧ ನೀಡಿ ಗ್ಯಾಂಗ್ ರೇಪ್, Video ರೆಕಾರ್ಡ್: ಇಬ್ಬರ ಬಂಧನ

ಬಳ್ಳಾರಿಯಲ್ಲಿ ತೀವ್ರಗೊಂಡ SIR ಸಂಘರ್ಷ: ಬೂತ್ ಮಟ್ಟದ ಬಿಜೆಪಿ ಏಜೆಂಟ್ ವಿರುದ್ಧ Search warrant!