ಜೆರುಸೆಲೆಂ: ಇಸ್ರೇಲ್ ಸಂಸತ್ತಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣವು ಸಂಸತ್ತಿನಲ್ಲಿ ಬಹುಮತ ಪಡೆಯಲು ಅಗತ್ಯವಿರುವ ಸ್ಥಾನಗಳಿಗಿಂತ ಹಿಂದೆಯೇ ಉಳಿದಿದೆ. ಇತ್ತೀಚಿನ ಮತ ಎಣಿಕೆಯ ಪ್ರಕಾರ, ನೆತನ್ಯಾಹು ಅವರ 'ಲಿಕುಡ್' ಪಕ್ಷ 26 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದ್ದು, 'ಯುನೈಟೆಡ್ ತೋರಾ ಜುದಾಯಿಸಂ', 'ಶಸ್' ಮತ್ತು 'ಒಟ್ಜ್ಮಾ ಯೆಹುದಿತ್'ನಂತಹ ಮೈತ್ರಿ ಪಕ್ಷಗಳೊಂದಿಗೆ ಸೇರಿ ಈ ಬಣ ಒಟ್ಟು 53 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಇನ್ನೂ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ನೇತೃತ್ವದ ವಿರೋಧ ಪಕ್ಷದ ಬಣವು 48 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಅರಬ್ ನೇತೃತ್ವದ ಪಕ್ಷಗಳು 19 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಫಲಿತಾಂಶಗಳಿಂದಾಗಿ ಮುಂದಿನ ಸರ್ಕಾರ ರಚನೆಯು ಅನಿಶ್ಚಿತವಾಗಿದೆ.
ಕೇಂದ್ರ ಚುನಾವಣಾ ಸಮಿತಿಯ (CEC) ಮಾಹಿತಿ ಉಲ್ಲೇಖಿಸಿ, ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ, ಸಾಮಾನ್ಯ ಮತಪತ್ರಗಳಲ್ಲಿ ಶೇಕಡಾ 93ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದ್ದು, ಇದು ಒಟ್ಟು ಮತಗಳ ಶೇಕಡಾ 85.6ರಷ್ಟಾಗಿದೆ.
ಇಸ್ರೇಲ್ನ ಸಂಸತ್ತಾದ 'ನೆಸೆಟ್' (Knesset) 120 ಸದಸ್ಯರನ್ನು ಹೊಂದಿದ್ದು, ಇಲ್ಲಿ ಸರ್ಕಾರ ರಚಿಸಲು ಕನಿಷ್ಠ 61 ಸ್ಥಾನಗಳ ಬಹುಮತದ ಅಗತ್ಯವಿದೆ. ಚುನಾವಣಾ ಆಯೋ ಪ್ರಸ್ತುತ 'ಡಬಲ್ ಎನ್ವಲಪ್' (ಎರಡು ಲಕೋಟೆಗಳ ವ್ಯವಸ್ಥೆ) ಮತಗಳನ್ನು ಎಣಿಸುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಇಸ್ರೇಲ್ ರಕ್ಷಣಾ ಪಡೆಗಳ (IDF)ಸೈನಿಕರು, ಕೈದಿಗಳು, ವೈದ್ಯಕೀಯ ಸಿಬ್ಬಂದಿ, ಅನಾರೋಗ್ಯ ಪೀಡಿತರು ಮತ್ತು ವಿದೇಶಗಳಲ್ಲಿರುವ ಇಸ್ರೇಲಿ ಪ್ರತಿನಿಧಿಗಳು ಚಲಾಯಿಸಿದ ಮತಗಳು ಸೇರಿವೆ.
ಗಾಡಿ ಐಸೆನ್ಕೋಟ್ ಅವರ 'ಯಶಾರ್', ನಫ್ತಾಲಿ ಬೆನೆಟ್ ಅವರ 'ಬಿ'ಯಾಚಾದ್', ಅವಿಗ್ದೋರ್ ಲಿಬರ್ಮ್ಯಾನ್ ಅವರ 'ಇಸ್ರೇಲ್ ಬೇಟೆನು' ಮತ್ತು ಯಾಯಿರ್ ಗೋಲಾನ್ ಅವರ 'ದಿ ಡೆಮೋಕ್ರಾಟ್ಸ್' ಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳ ಬಣವು 48 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. 'ಜಾಯಿಂಟ್ ಲಿಸ್ಟ್' ಮತ್ತು 'ರಾಮ್' ಸೇರಿದಂತೆ ಅರಬ್ ಪಕ್ಷಗಳು 19 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಈಗ ಎಲ್ಲರ ಚಿತ್ತ ಮುಂದಿನ ಸರ್ಕಾರ ರಚನೆಯತ್ತ ನೆಟ್ಟಿದೆ.
ನೆತನ್ಯಾಹು ಅವರನ್ನು ಅಧಿಕಾರದಿಂದ ದೂರವಿಡಲು ಅವರ ವಿರೋಧಿ ಬಣವು ಅರಬ್ ಪಕ್ಷಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ಬಹುಮತ ಪಡೆಯಬೇಕು ಎಂಬ ಕೂಗು ಕೇಳಿಬರುತ್ತಿದೆ. ಬುಧವಾರ ರಾತ್ರಿ ಯಾಯಿರ್ ಗೋಲಾನ್ ಅವರ ಪಕ್ಷದ ನೇತೃತ್ವದಲ್ಲಿ ಅನೇಕ ಜನರು ಬೀದಿಗಿಳಿದು, ಯಹೂದಿ-ಅರಬ್ ಮೈತ್ರಿ ಸರ್ಕಾರ ರಚನೆಗೆ ಆಗ್ರಹಿಸಿದರು.
ನಾವು ದೇಶಾದ್ಯಂತ ಬೀದಿಗಿಳಿದಿದ್ದೇವೆ; ಯಹೂದಿ-ಪ್ಯಾಲೆಸ್ಟಿಯನ್ ಜಂಟಿ ಸರ್ಕಾರಕ್ಕೆ ನಮ್ಮ ಬೆಂಬಲವಿದೆ! ವರ್ಣಭೇದ ನೀತಿ, ಮೆಸ್ಸಿಯನಿಸಂ (ಧಾರ್ಮಿಕ ಉನ್ಮಾದ) ಮತ್ತು ಶ್ರೇಷ್ಠತಾ ವಾದಕ್ಕೆ ನಮ್ಮ ವಿರೋಧವಿದೆ. ಇಸ್ರೇಲ್ ಚುನಾವಣೆಯಲ್ಲಿ, ಯಹೂದಿಗಳು ಮತ್ತು ಪ್ಯಾಲೆಸ್ಟೀನಿಯನ್ನರು ಭಿನ್ನವಾದ ಭವಿಷ್ಯಕ್ಕಾಗಿ ಐತಿಹಾಸಿಕ ಬಹುಮತ ನೀಡಿದ್ದಾರೆ. ಬದಲಾವಣೆ ಬಯಸುವವರಿಗೆ 67 ಸ್ಥಾನಗಳು ಸಿಕ್ಕರೆ, ನೆತನ್ಯಾಹು ಬಣಕ್ಕೆ 53 ಸ್ಥಾನಗಳು ಲಭಿಸಿವೆ. ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ನಾವು ಅಂದರೆ ಯಹೂದಿಗಳು ಮತ್ತು ಪ್ಯಾಲೆಸ್ಟೀನಿಯನ್ನರು ಬಹುಮತ ಹೊಂದಿದ್ದೇವೆ ನಮಗೆ ಈಗ ಜಂಟಿ ಸರ್ಕಾರ ಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಂತಿ, ಸಮಾನತೆ ಮತ್ತು ನ್ಯಾಯದ ಭವಿಷ್ಯದತ್ತ ಮೊದಲ ಹೆಜ್ಜೆಯಾಗಿ, ಯಹೂದಿ ವಿರೋಧ ಪಕ್ಷಗಳು ಅರಬ್ ಪಕ್ಷಗಳೊಂದಿಗೆ ಕೈಜೋಡಿಸಿ ಎಲ್ಲರಿಗೂ ಬದಲಾವಣೆಯನ್ನು ತಂದುಕೊಡಬೇಕು. "ನಾವು ಕಳೆದ 11 ವರ್ಷಗಳಿಂದ ತಿಳಿದುಕೊಂಡಿರುವ ಮತ್ತು ಅದಕ್ಕಾಗಿ ಹೋರಾಡುತ್ತಿರುವ ವಿಷಯವನ್ನೇ ಈ ಚುನಾವಣೆಗಳು ಸಾಬೀತುಪಡಿಸಿವೆ - ಯಹೂದಿ-ಪ್ಯಾಲೆಸ್ಟಿಯನ್ ಪಾಲುದಾರಿಕೆಯಿಂದ ಮಾತ್ರ ನಾವೆಲ್ಲರೂ ಅರ್ಹ ಬದಲಾವಣೆಯನ್ನು ತರಲು ಸಾಧ್ಯ ಎಂದು ಗೋಲಾನ್ ಪಕ್ಷ ಹೇಳಿದೆ.
ಇಸ್ರೇಲ್ನ ಬಹುಪಾಲು ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಮತ್ತು ಇಸ್ರೇಲ್ಗೆ ಒಂದು ಮುಕ್ತಿ ಸಿಗಬೇಕೆಂದು ಆಶಿಸುತ್ತಿದ್ದಾರೆ. ಅದಕ್ಕಾಗಿ ನಮಗೆ ಬಹುಮತವಿದೆ. ನಮಗೆ ಬೇಕಿರುವುದು ಕೇವಲ ಧೈರ್ಯಶಾಲಿ ನಾಯಕತ್ವ," ಎಂದು ಗೋಲಾನ್ ಇಸ್ರೇಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅರಬ್ ಪಕ್ಷಗಳು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದು, ನೆಸೆಟ್ನಲ್ಲಿ (ಇಸ್ರೇಲ್ ಸಂಸತ್ತು) 19 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. 'ಡಬಲ್ ಎನ್ವಲಪ್' (ವಿಶೇಷ ಮತಪತ್ರಗಳ) ಎಣಿಕೆಯ ನಂತರ ಈ ಸಂಖ್ಯೆಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು, ಆದರೆ ಅರಬ್ ಪಕ್ಷಗಳು ಐಸೆನ್ಕೋಟ್ ನೇತೃತ್ವದ ಮೈತ್ರಿಕೂಟದೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ ಸುಳಿವು ನೀಡಿವೆ.
"ನೆತನ್ಯಾಹು ಅವರ ರಕ್ತಸಿಕ್ತ ಆಳ್ವಿಕೆಯನ್ನು ಕೊನೆಗೊಳಿಸಲು ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ. ರಾಜಕೀಯ ಸಹಕಾರಕ್ಕೆ ಸಿದ್ಧರಿದ್ದೇವೆ. ಪ್ರಸ್ತುತ ಸರ್ಕಾರದ ವರ್ಣಭೇದ ನೀತಿಗಳನ್ನು ಬದಲಾಯಿಸಲು, ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು, ನಮ್ಮನ್ನು ಹೊರಗಿಡುವ ಪ್ರವೃತ್ತಿಯನ್ನು ಕೊನೆಗೊಳಿಸಲು ಮತ್ತು ನಮ್ಮ ಪ್ರತಿನಿಧಿಗಳನ್ನು ರಾಜಕೀಯ ವ್ಯವಸ್ಥೆಯಿಂದ ಹೊರಗಿಡುವ ಪ್ರಯತ್ನಗಳನ್ನು ತಡೆಯಲು ನಾವು ಬದ್ಧರಾಗಿದ್ದೇವೆ. ಇವೆಲ್ಲವನ್ನೂ ಒಳಗೊಂಡ ಒಂದು ಪರ್ಯಾಯ ಸರ್ಕಾರವನ್ನು ಸ್ಥಾಪಿಸಲು ನಾವು ಸಿದ್ಧರಿದ್ದೇವೆ ಎಂದು 'ಜಾಯಿಂಟ್ ಲಿಸ್ಟ್' (ಅರಬ್ ಪಕ್ಷಗಳ ಒಕ್ಕೂಟ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.