ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಪ್ರಸ್ತುತ ಸಂಘರ್ಷಗಳು 'ಯುದ್ಧವಲ್ಲ' ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಇರಾನ್‌ನಲ್ಲಿ ಮದುವೆ ಸಮಾರಂಭವೊಂದರ ಮೇಲೆ ನಡೆದಿದೆ ಎನ್ನಲಾದ ವೈಮಾನಿಕ ದಾಳಿಯ ಬಗ್ಗೆ ಅಮೆರಿಕ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಕಾಡುತ್ತಿರುವ ಈ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿರುವ ಸೂಚನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ವಾನ್ಸ್ ಈ ಹೇಳಿಕೆ ನೀಡಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆ ವೇಳೆಗೆ ಸಂಘರ್ಷ ಅಂತ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಾನ್ಸ್, “ನಾನು ಇದನ್ನು ಯುದ್ಧ ಎಂದು ಕರೆಯುವುದಿಲ್ಲ. ಸದ್ಯ ಯಾವುದೇ ಸಕ್ರಿಯ ಗುಂಡಿನ ಚಕಮಕಿ ನಡೆಯುತ್ತಿಲ್ಲ” ಎಂದು ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಲವು ಪ್ರದೇಶಗಳಲ್ಲಿ ಸಂಘರ್ಷ ಮತ್ತೆ ಭುಗಿಲೆದ್ದಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಪ್ರಮುಖ ಯುದ್ಧ ಕಾರ್ಯಾಚರಣೆಗಳು ಕೇವಲ ಆರು ವಾರಗಳ ಕಾಲ ನಡೆದವು ಎಂದು ಹೇಳಿದರು.
ಇದು ಯಾವಾಗ ಅಂತ್ಯವಾಗುತ್ತದೆ ಎಂದು ನೀವು ಕೇಳುತ್ತೀರಿ, ಇರಾನ್ ಹಡಗುಗಳ ಮೇಲೆ ದಾಳಿ ಮಾಡುವುದನ್ನು ಯಾವಾಗ ನಿಲ್ಲಿಸುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಉತ್ತರ ನನಗೆ ಗೊತ್ತಿಲ್ಲ. ನೀವು ಇರಾನ್‌ನವರನ್ನೇ ಕೇಳಬೇಕು” ಎಂದು ತಿಳಿಸಿದರು.
ಕೆಲವು ವಾರಗಳ ಕಾಲ ಶಾಂತ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಭಾನುವಾರ ಅಮೆರಿಕ ನಡೆಸಿದ ದಾಳಿಗಳ ಬಳಿಕ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಇದೇ ವೇಳೆ, ಇರಾನ್ ತಂತ್ರಗಾರಿಕವಾಗಿ ಮಹತ್ವದ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಮುಂದುವರಿಸಿದೆ.
ಇದೇ ವೇಳೆ ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ಇರಾನ್ ನಿಲ್ಲಿಸುವವರೆಗೆ ಅಮೆರಿಕ ಮತ್ತೆ ಮಾತುಕತೆ ಆರಂಭಿಸುವುದಿಲ್ಲ ಎಂದು ವಾನ್ಸ್ ಸ್ಪಷ್ಟಪಡಿಸಿದರು. ಆದರೆ, ಇಂಧನ ಬೆಲೆ ಏರಿಕೆ ಮುಂಬರುವ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕದ ನಡುವೆ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಯುದ್ಧಕ್ಕೂ ಮುನ್ನ ಇದ್ದ ಮಟ್ಟಕ್ಕೆ ಮರಳುತ್ತಿದೆ ಎಂಬ ಸಂದೇಶವನ್ನು ಅಮೆರಿಕ ಆಡಳಿತ ನೀಡುತ್ತಿದೆ.
ಏತನ್ಮಧ್ಯೆ “ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿಯಂತ್ರಣ ವಾಸ್ತವವಾಗಿ ಕೊನೆಗೊಂಡಿದೆ” ಎಂದು ವಾನ್ಸ್ ಹೇಳಿದ್ದಾರೆ.
“ಮೂರು ತಿಂಗಳ ಹಿಂದೆ ಇರಾನ್‌ನ ಬೆದರಿಕೆಗಳ ನಡುವೆ ಜಲಸಂಧಿಯ ಮೂಲಕ ಎಷ್ಟು ತೈಲ ಮತ್ತು ಅನಿಲ ಸಾಗುತ್ತಿತ್ತು ಎಂಬುದನ್ನು ನೋಡಿದರೆ, ಅದು ಬಹುತೇಕ ಶೂನ್ಯವಾಗಿತ್ತು. ಈಗ ಮೊದಲಿನಂತೆಯೇ ಸಾಗಣೆ ಬಹುತೇಕ ಮರಳಿದೆ” ಎಂದು ತಿಳಿಸಿದ್ದಾರೆ.
ಫೆಬ್ರವರಿಯಿಂದ ಆರಂಭವಾದ ಸಂಘರ್ಷದಲ್ಲಿ 18 ಅಮೆರಿಕ ಸೈನಿಕರು ಹಾಗೂ ಇರಾನ್ ಮತ್ತು ಲೆಬನಾನ್‌ನಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ.
ಈ ನಡುವೆ ಟ್ರಂಪ್ ಇದೀಗ ಇರಾನ್ ಯುದ್ಧವನ್ನು ಅಧಿಕೃತವಾಗಿ ಅಂತ್ಯಗೊಳಿಸುವ ಕುರಿತು ಹಿರಿಯ ಸಹಾಯಕರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಕಳೆದ ವಾರ ಅವರು “ಮಿಷನ್ ಸಂಪೂರ್ಣ” ಎಂಬ ಬರಹವಿದ್ದ ಬ್ಯಾನರ್‌ನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ನಡುವೆ, ಗುರುವಾರ ಇರಾನ್ ಹೊಸ ದಾಳಿಗಳನ್ನು ನಡೆಸಿದೆ. ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ. ಇರಾನ್‌ನಲ್ಲಿ ಮದುವೆ ಸಮಾರಂಭದ ಮೇಲೆ ನಡೆದ ಕ್ಷಿಪಣಿ ದಾಳಿಗೆ ಅಮೆರಿಕವೇ ಕಾರಣ ಎಂದು ಅದು ಆರೋಪಿಸಿದೆ.
ಮದುವೆ ಸಮಾರಂಭದ ಮೇಲಿನ ದಾಳಿಯ ಕುರಿತು ಅಮೆರಿಕ ತನಿಖೆ ನಡೆಸುತ್ತಿದೆ ಎಂದು ವಾನ್ಸ್ ತಿಳಿಸಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದ ಇರಾನ್‌ನ ವರದಿಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾವು ತನಿಖೆ ನಡೆಸುತ್ತಿದ್ದೇವೆ. ಆದರೆ, ಈ ಸಂಘರ್ಷದಲ್ಲಿ ನಡೆದ ಘಟನೆಗಳ ಕುರಿತು ಇರಾನ್‌ನ ಸರ್ಕಾರಿ ಮಾಧ್ಯಮಗಳು ಈವರೆಗೆ ಉತ್ತಮವಾಗಿ ವರದಿ ಮಾಡಿಲ್ಲ. ಹೀಗಾಗಿ ಈ ಬಗ್ಗೆ ನನಗೆ ತೀವ್ರ ಅನುಮಾನವಿದೆ” ಎಂದು ಹೇಳಿದ್ದಾರೆ.
ಇರಾನ್‌ನ ಕರಾವಳಿ ಪಟ್ಟಣ ಕುಹೆಸ್ತಕ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಮದುವೆ ಸಮಾರಂಭದ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಘಟನೆಯಲ್ಲಿ ಮಗುವೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ರೆಡ್ ಕ್ರೆಸೆಂಟ್ ತಿಳಿಸಿದೆ.