ಸ್ಯಾನ್ ಫ್ರಾನ್ಸಿಸ್ಕೋ: ಹ್ಯೂಮನಾಯ್ಡ್ ರೊಬೋಟ್ ಗಳ ಕುರಿತ ಹಾಲಿವುಡ್`ನ ಟರ್ಮಿನೇಟರ್ ಚಿತ್ರವನ್ನೇ ಹೋಲುವ ಘಟನೆಯೊಂದು ನಡೆದಿದ್ದು, 6 ಅಡಿ ರೋಬೋಟ್ ಜೊತೆ ಇನ್‌ಫ್ಲುಯೆನ್ಸರ್ ಫೈಟ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಸಿನಿಮಾ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ 6 ಅಡಿ ಎತ್ತರದ ಹ್ಯೂಮನಾಯ್ಡ್ ರೋಬೋಟ್‌ವೊಂದು ಮಾನವನ ವಿರುದ್ಧ ರಿಂಗ್ ನಲ್ಲಿ ಫೈಟಿಂಗ್`ಗೆ ಇಳಿದಿರುವ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.
ಅಮೆರಿಕ ಮೂಲದ ರೋಬೋಟಿಕ್ಸ್ ಕಂಪನಿ REK ಈ ವಿಶೇಷ ಪಂದ್ಯವನ್ನು ಆಯೋಜಿಸಿದ್ದು, ಮಾನವರು ಹ್ಯೂಮನಾಯ್ಡ್ ರೋಬೋಟ್‌ಗಳನ್ನು ದೂರದಿಂದ ನಿಯಂತ್ರಿಸಿ ಪರಸ್ಪರ ಸ್ಪರ್ಧಿಸುವ ವರ್ಚುವಲ್ ರಿಯಾಲಿಟಿ ಕಾಂಬ್ಯಾಟ್ ಗೇಮ್‌ಗಾಗಿ ಕಂಪನಿ ನಡೆಸುತ್ತಿರುವ ಪ್ರಯೋಗದ ಭಾಗವಾಗಿ ಈ ಪಂದ್ಯ ನಡೆದಿದೆ.
ವೈರಲ್ ವಿಡಿಯೋದಲ್ಲಿ ಇನ್‌ಫ್ಲುಯೆನ್ಸರ್ ಹಾಗೂ ಕಂಟೆಂಟ್ ಕ್ರಿಯೇಟರ್ ಫ್ರಾಂಕಿ ಲಾಪೆನ್ನಾ (Frankie LaPenna) ಅವರು ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ ರೋಬೋಟ್ ವಿರುದ್ಧ ಫೈಟಿಂಗ್ ಕೇಜ್‌ನಲ್ಲಿ ಕಣಕ್ಕಿಳಿದಿರುವುದು ಕಂಡುಬರುತ್ತದೆ.
ರಿಂಗ್ ನಲ್ಲಿ ರೊಬೊಟ್ ವಾರ್ಮಪ್
ಅಚ್ಚರಿ ಎಂದರೆ ಭವಿಷ್ಯದ ಯುದ್ಧ ಯಂತ್ರದಂತೆ ವಿನ್ಯಾಸಗೊಳಿಸಲಾಗಿರುವ ರೋಬೋಟ್, ಪಂದ್ಯ ಆರಂಭಕ್ಕೂ ಮುನ್ನ ರಿಂಗ್‌ನಲ್ಲಿ ಓಡಾಡುತ್ತಾ ವಾರ್ಮ್‌ಅಪ್ ಮಾಡಿದೆ. ಫೈಟ್ ಆರಂಭವಾದ ಬಳಿಕ ಲಾಪೆನ್ನಾ ರೋಬೋಟ್‌ಗೆ ಹಲವು ಪಂಚ್‌ಗಳನ್ನು ಹೊಡೆದಿದ್ದಾರೆ.
ಇದಕ್ಕೆ ಪ್ರತಿಯಾಗಿ ರೋಬೋಟ್ ಕೂಡ ಪಂಚ್ ಹಾಗೂ ಬಲಿಷ್ಠ ಕಿಕ್‌ಗಳನ್ನು ನೀಡಿದೆ. ಕೆಲವು ಸಂದರ್ಭಗಳಲ್ಲಿ ರೋಬೋಟ್ ಹೊಡೆದ ಕಿಕ್‌ಗಳ ರಭಸಕ್ಕೆ ಲಾಪೆನ್ನಾ ಕೇಜ್‌ನೊಳಗೆ ಹಾರಿ ದೂರಕ್ಕೆ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
‘ಮೊದಲ ಹ್ಯೂಮನ್ vs ಹ್ಯೂಮನಾಯ್ಡ್ ರೋಬೋಟ್ ಫೈಟ್’
ಇದನ್ನು ತಮ್ಮ ಮೊದಲ ಮಾನವ-ವಿರುದ್ಧ-ಹ್ಯೂಮನಾಯ್ಡ್ ರೋಬೋಟ್ ಫೈಟ್ ಎಂದು REK ಬಣ್ಣಿಸಿದ್ದು, ಪಂದ್ಯಕ್ಕೆ ಸಂಬಂಧಿಸಿದ ಮತ್ತಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಸ್ಥೆ, 'ಮೊದಲ ಹ್ಯೂಮನ್ VS ಟರ್ಮಿನೇಟರ್ ರೋಬೋಟ್ ಫೈಟ್ ಮೂಲಕ ನಾವು ಇತಿಹಾಸ ನಿರ್ಮಿಸಿದ್ದೇವೆ. ಫ್ರಾಂಕಿ ಲಾಪೆನ್ನಾ ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿಸಿದ್ದಾರೆ' ಎಂದು ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುವಾಗ REK ಬರೆದುಕೊಂಡಿದೆ.