ತೀರಾ ಹಿಂದಲ್ಲ. 'ಓಂಕಾರದಿಂದ ಹೊರಡುವ ನಾದ ಸೂರ್ಯನ ನಾದ' ಎಂದು ಬ್ರಿಟಿಷ್ ಯೂನಿವರ್ಸಿಟಿ ಕೆಲವರ್ಷಗಳ ಹಿಂದೆ ಹೇಳಿತು. ವೇದಕಾಲದ ಋಷಿಗಳು ಎಂದೋ ಕಂಡುಕೊಂಡಿದ್ದ ಸತ್ಯವನ್ನು ಮತ್ತೊಮ್ಮೆ ಜಗತ್ತಿಗೆ ಹೇಳಿದ್ದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಹೇಳೋಣ.
ವೇದಗಳು ಎಂದರೆ ಅವು ಪ್ರತಿಯೊಂದರ ಮೂಲ. ಸೃಷ್ಟಿಯಲ್ಲಿರುವ ಪ್ರತಿಯೊಂದು ರಹಸ್ಯಕ್ಕೂ ವೇದಗಳಲ್ಲಿ ಉತ್ತರವಿದೆ. ಮಾನವ ದೇಹದ ಅಂಗಾಗಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದರಿಂದ ಹಿಡಿದು ವಿಜ್ಞಾನ, ರೇಖಾಗಣಿತಗಳ ಸಂಕೀರ್ಣ ಸಿದ್ಧಾಂತಗಳವರೆಗೂ ವೇದಗಳಲ್ಲಿ ವಿವರಣೆ ಇದೆ. ಶರೀರಕ್ಕೆ ವಯಸ್ಸಾಗುವುದನ್ನು ತಡೆಯುವ ಮಾರ್ಗಗಳ ಬಗ್ಗೆಯೂ ಉಲ್ಲೇಖವಿದೆ.
ಧ್ಯಾನದ ಆಳ ಸ್ಥಿತಿಗೆ ತಲುಪಿದಾಗ ನನ್ನ ಕಣ್ಣ ಮುಂದೆ ಬರುವ ಉದ್ದವಾದ ಗಡ್ಡವುಳ್ಳ ಋಷಿಗಳು ದಿವ್ಯ ತೇಜಸ್ಸು ಹೊಂದಿರುತ್ತಾರೆ. ಅವರ ತ್ವಚೆ ಫಳಪಳನೆ ಹೊಳೆಯುತ್ತಿರುತ್ತದೆ. ಯೌವ್ವನದ ಕಾಂತಿ ಅವರಲ್ಲಿ ಉಕ್ಕುತ್ತಿರುತ್ತದೆ. ಆಧುನಿಕ ಕಾಲದಲ್ಲಿ 25 ದಾಟುವುದರೊಳಗೆ ವೃದ್ಧಾಪ್ಯದ ಛಾಯೆ ಆವರಿಸುತ್ತಿರುವಾಗ ಋಷಿಮುನಿಗಳು ಅದು ಹೇಗೆ ತಮ್ಮ ಕೊನೆಯ ದಿನಗಳವರೆಗೂ ಯೌವ್ವನವನ್ನು ಹಾಗೆಯೇ ಉಳಿಸಿಕೊಂಡಿದ್ದರು?
'ಕಡಿಮೆ ತಿಂದು ಜಾಸ್ತಿ ಉಪವಾಸ ಮಾಡಿದರೆ ದೀರ್ಘಕಾಲ ಬದುಕಬಹುದು' ಎಂದು ಇತ್ತೀಚೆಗೆ ಬಿಬಿಸಿಯ ಡಾ.ಮೈಖೆಲ್ ಮೋಸ್ಲೆ ಪ್ರಕಟಿಸಿದರು. 'ಸಾಕಷ್ಟು ನಿದ್ದೆ ಮಾಡಿದರೆ ಯೌವ್ವನವನ್ನು ಹೆಚ್ಚುಕಾಲ ಕಾಪಿಟ್ಟುಕೊಳ್ಳಬಹುದು' ಎಂದು ಪ್ರೊ.ಜಾನ್ ಆಕ್ಸೆಲ್ಸನ್ ಎಂಬುವವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಹೇಳಿಕೊಂಡರು. ನನ್ನ ಪ್ರಕಾರ ಇವೆರಡೂ ಸಂಶೋಧನೆಗಳು ಅಪೂರ್ಣ ಮತ್ತು ದೇಹಕ್ಕೆ ವಯಸ್ಸಾಗುವುದನ್ನು ತಡೆಯುವ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿಲ್ಲ. ಆದರೆ ಅವರಿಗೇ ಗೊತ್ತಿಲ್ಲದಂತೆ, ವೇದಕಾಲದಲ್ಲಿ ಹೇಳಲಾದ ಕೆಲವು ಸಂಗತಿಗಳನ್ನು ಮರುಪರಿಚಯಿಸುವ ಪ್ರಯತ್ನಗಳಿವು ಎಂದು ಹೇಳಬಲ್ಲೆ. ವೇದಗಳ ಅರಿವಿಲ್ಲದ ಇಂಥ ಪಾಶ್ಚಾತ್ಯ ಸಂಶೋಧಕರನ್ನು ನಾವು ದೂಷಿಸುವಂತೆಯೂ ಇಲ್ಲ ಬಿಡಿ.
ದೇಹದ ವಿವಿಧ ಸ್ತರಗಳ ಕುರಿತಾದ ಎರಡು ದಶಕಗಳ ಸುದೀರ್ಘ ಅಧ್ಯಯನದಲ್ಲಿ ನಾನು ಕಂಡಿಕೊಂಡಿರುವ ಸಂಗತಿ ಎಂದರೆ ವಯಸ್ಸಾಗುವ ಪ್ರಕ್ರಿಯೆ ಕೋಶಗಳ ಹಂತದಲ್ಲೇ ನಡೆಯುತ್ತದೆ ಮತ್ತು ಅದು ಇಡೀ ಶರೀರವನ್ನು ಅಂದರೆ ಎಲ್ಲ ಅಂಗಾಂಗಳನ್ನೂ ವ್ಯಾಪಿಸಿರುತ್ತದೆ. ಪ್ರತಿ ಉಸಿರಾಟ, ಪ್ರತಿ ಆಲೋಚನೆ ಈ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ. ಹೀಗಾಗಿ ವಯಸ್ಸಾಗುವುದರ ಕುರಿತು ಹೇಳುವಾಗ ಇಡೀ ಶರೀರವನ್ನು ಗಣನೆಗೆ ತೆಗೆದುಕೊಳ್ಳಬೇಕಾದದ್ದು ಅಗತ್ಯ.
ಪಾಶ್ಚಾತ್ಯ ಸಂಶೋಧನೆಗಳು ಪ್ರಕಟವಾಗುವುದಕ್ಕೆ ಮುನ್ನವೇ ನಾನು ಬರೆದಿರುವ 'ಸನಾತನ ಕ್ರಿಯಾ: ದಿ ಏಜ್ಲೆಸ್ ಡೈಮೆನ್ಶನ್' ಕೃತಿಯಲ್ಲಿ ದೇಹ ಮುಪ್ಪಾಗುವುದನ್ನು ಹೇಗೆ ತಡೆಯಬಹುದು ಎನ್ನುವ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ.
(ಮುಂದುವರಿಯುವುದು)
- ಯೋಗಿ ಅಶ್ವಿನಿ