ಮತ್ತೆ ವಕ್ಕರಿಸಿದ 'ಮಹಾಮಾರಿ': 12 ಸಾವಿರ ಮಂದಿಗೆ ಸೋಂಕು, ಸಮರೋಪಾದಿ ಕಾರ್ಯಾಚರಣೆ! ಅತ್ಯಂತ ಮಾರಕ ಎಂದ ತಜ್ಞರು

ಬುನಿಯಾ (ಕಾಂಗೋ): ಈ ಹಿಂದೆ ಆಫ್ರಿಕಾದಲ್ಲಿ ತನ್ನ ಭೀಕರ ಅಟ್ಟಹಾಸದಿಂದ ಲಕ್ಷಾಂತರ ಜನರಿಗೆ ಹಬ್ಬಿ, ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿದ್ದ 'ಮಹಾಮಾರಿ' ಎಬೋಲಾ ಇದೀಗ ಮತ್ತೆ ವಕ್ಕರಿಸಿದೆ.
ಆಫ್ರಿಕಾದ ಕಾಂಗೋ ದೇಶದಲ್ಲಿ ಎಬೋಲಾ ವೈರಸ್ ಸೋಂಕು ಭೀಕರವಾಗಿ ಹರಡುತ್ತಿದ್ದು, ದೃಢಪಟ್ಟ ಪ್ರಕರಣಗಳ ಸಂಖ್ಯೆ 12 ಸಾವಿರದ ಗಡಿ ದಾಟಿದೆ. ಈಗಾಗಲೇ ಸೋಂಕಿಗೆ ಒಳಗಾದವರಲ್ಲಿ ಅರ್ಧದಷ್ಟು ಮಂದಿ ಮೃತಪಟ್ಟಿದ್ದಾರೆ.
ಇದರ ನಡುವೆ ದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿರುವುದು ಸೋಂಕು ನಿಯಂತ್ರಣ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಂಗೋ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ 12,021 ಮಂದಿಗೆ ಎಬೋಲಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಸುಮಾರು ಅರ್ಧದಷ್ಟು ಜನರು ಮೃತಪಟ್ಟಿದ್ದಾರೆ.
ಅತ್ಯಂತ ಮಾರಕ ಎಂದ ತಜ್ಞರು
ಇದು ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಹರಡುತ್ತಿರುವ ಎಬೋಲಾ ಸೋಂಕು ಎಂದು ಹೇಳಲಾಗಿದೆ. ಕಾಂಗೋದಲ್ಲಿ ಈವರೆಗೆ ಕಾಣಿಸಿಕೊಂಡಿರುವ 17 ಎಬೋಲಾ ಸೋಂಕು ಪ್ರಕರಣಗಳ ಪೈಕಿ ಇದು ಅತ್ಯಂತ ಮಾರಕವಾಗಿದೆ.
2014ರಿಂದ 2016ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾ ಸೋಂಕಿನಿಂದ 11 ಸಾವಿರ ಮಂದಿ ಮೃತಪಟ್ಟಿದ್ದರು. ಇದೀಗ ಕಾಂಗೋದಲ್ಲಿನ ಸೋಂಕು ಸಾವಿನ ಸಂಖ್ಯೆಯಲ್ಲೂ ಆ ದಾಖಲೆಯನ್ನು ಮೀರಿಸುವ ಆತಂಕ ಎದುರಾಗಿದೆ.
ಲಸಿಕೆ, ಔಷಧ ಇಲ್ಲದ ಅಪರೂಪದ ವೈರಸ್
ಮೇ ತಿಂಗಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿಗೆ ಅಪರೂಪದ 'ಬುಂಡಿಬುಗ್ಯೊ' (Bundibugyo) ತಳಿಯ ಎಬೋಲಾ ವೈರಸ್ ಕಾರಣವಾಗಿದೆ. ಈ ವೈರಸ್‌ಗೆ ಇದುವರೆಗೆ ಅಧಿಕೃತವಾಗಿ ಅನುಮೋದನೆ ಪಡೆದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ.
ಸೋಂಕು ನಿಯಂತ್ರಣಕ್ಕೆ ಆರೋಗ್ಯ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ. ಆದರೆ, ಸೇನೆ ಮತ್ತು ಬಂಡುಕೋರರ ನಡುವಿನ ಸಂಘರ್ಷ, ಹದಗೆಟ್ಟ ರಸ್ತೆ ಸಂಪರ್ಕ, ಸ್ಥಳೀಯರಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಆರೋಗ್ಯ ವ್ಯವಸ್ಥೆಯ ಮೇಲಿನ ಅಪನಂಬಿಕೆ ಕಾರ್ಯಾಚರಣೆಗೆ ಅಡ್ಡಿಯಾಗಿವೆ.
ಎಬೋಲಾ ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ಇತರ ದ್ರವಗಳ ನೇರ ಸಂಪರ್ಕದಿಂದ ವೈರಸ್ ಹರಡುತ್ತದೆ. ಸೋಂಕು ನಿಯಂತ್ರಿಸಲು ರೋಗಿಗಳನ್ನು ತ್ವರಿತವಾಗಿ ಗುರುತಿಸಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡುವುದು ಮತ್ತು ಮೃತದೇಹಗಳನ್ನು ಸುರಕ್ಷಿತವಾಗಿ ಅಂತ್ಯಸಂಸ್ಕಾರ ಮಾಡುವುದು ಅಗತ್ಯವಾಗಿದೆ.
ಸೇನೆ-ಬಂಡುಕೋರರ ನಡುವೆ ಮತ್ತೆ ಗುಂಡಿನ ಚಕಮಕಿ
ಪೂರ್ವ ಕಾಂಗೋದ ಇಟುರಿ ಪ್ರಾಂತ್ಯದ ಬುನಿಯಾ ನಗರದ ಉತ್ತರಕ್ಕೆ ಸುಮಾರು 25 ಕಿ.ಮೀ ದೂರದಲ್ಲಿರುವ ಇಗಾ-ಬರಿಯರ್ ಎಂಬ ಗಣಿಗಾರಿಕೆ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಸೇನೆ ಮತ್ತು 'ಕನ್ವೆನ್ಷನ್ ಪೌರ್ ಲಾ ರೆವಲ್ಯೂಷನ್ ಪಾಪ್ಯುಲೇರ್' (CRP) ಬಂಡುಕೋರರ ನಡುವೆ ಮತ್ತೆ ಸಂಘರ್ಷ ಆರಂಭವಾಗಿದೆ.
ಇದರಿಂದ ಸ್ಥಳೀಯರು ಜೀವಭಯದಿಂದ ಮನೆಗಳನ್ನು ತೊರೆದು ಬುನಿಯಾ ನಗರದತ್ತ ವಲಸೆ ಹೋಗುತ್ತಿದ್ದಾರೆ. ಬುನಿಯಾ ಈಶಾನ್ಯ ಇಟುರಿ ಪ್ರಾಂತ್ಯದ ರಾಜಧಾನಿಯಾಗಿದ್ದು, ಎಬೋಲಾ ಸೋಂಕು ನಿಯಂತ್ರಣ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿದೆ. ಪೂರ್ವ ಕಾಂಗೋದಲ್ಲಿ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳು ಸಕ್ರಿಯವಾಗಿದ್ದು, ಅವುಗಳ ನಡುವಿನ ಸಂಘರ್ಷದಿಂದ ಈ ಪ್ರದೇಶದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.
CRP ಸಂಘಟನೆಯನ್ನು ಮಾಜಿ ಸೇನಾಧಿಕಾರಿ ಥಾಮಸ್ ಲುಬಂಗಾ ಕಳೆದ ವರ್ಷ ಸ್ಥಾಪಿಸಿದ್ದರು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಶಸ್ತ್ರ ಸಂಘರ್ಷದಲ್ಲಿ ಬಳಸಿಕೊಂಡ ಆರೋಪದಡಿ 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಅವರನ್ನು ಅಪರಾಧಿ ಎಂದು ಘೋಷಿಸಿತ್ತು.
ಆಸ್ಪತ್ರೆಯಲ್ಲೇ ಸಿಲುಕಿದ್ದ ಡಬ್ಲ್ಯುಎಚ್‌ಒ ಸಿಬ್ಬಂದಿ
ಸೇನೆ ಮತ್ತು ಬಂಡುಕೋರರ ನಡುವಿನ ಸಂಘರ್ಷದಿಂದ ಎಬೋಲಾ ನಿಯಂತ್ರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಈ ವಾರದ ಆರಂಭದಲ್ಲಿ ನಡೆದ ಸಂಘರ್ಷದಿಂದ ಕೆಲವು ಗ್ರಾಮಗಳಿಗೆ ಆರೋಗ್ಯ ಕಾರ್ಯಕರ್ತರು ತೆರಳಲು ಸಾಧ್ಯವಾಗಿಲ್ಲ.
ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡುವ ಕಾರ್ಯ ಸ್ಥಗಿತಗೊಂಡಿದ್ದು, ಕೆಲವು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯೂ ಎದುರಾಗಿದೆ ಎಂದು ಡಬ್ಲ್ಯುಎಚ್‌ಒ ಎಬೋಲಾ ಕಾರ್ಯಾಚರಣೆ ಮುಖ್ಯಸ್ಥೆ ಡಾ. ಕ್ಯಾಥರಿನ್ ಸ್ಮಾಲ್‌ವುಡ್ ತಿಳಿಸಿದ್ದಾರೆ.
ಮಂಗಳವಾರ ಅಕ್ವೆ ಎಂಬ ಪ್ರದೇಶದ ಆಸ್ಪತ್ರೆಯಲ್ಲಿ ಸುಮಾರು ಮೂರು ದಿನಗಳ ಕಾಲ ಗುಂಡಿನ ದಾಳಿಯ ನಡುವೆ ಸಿಲುಕಿದ್ದ ಸುಮಾರು 12 ಮಂದಿಯನ್ನು ಸುರಕ್ಷಿತವಾಗಿ ಬುನಿಯಾಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಡಬ್ಲ್ಯುಎಚ್‌ಒನ ಇಬ್ಬರು ಸಿಬ್ಬಂದಿ ಹಾಗೂ ಕಾಂಗೋ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



