ದೇಶ

'400 ಪಾರ್ ಘೋಷಣೆ ಈಗಿಲ್ಲ, UP ಜನರು ಬಿಜೆಪಿಗೆ ಪಾಠ ಕಲಿಸಿದ್ದು, ಮೋದಿ ಮೌನವಾಗಿದ್ದಾರೆ': ಖರ್ಗೆ ಟೀಕೆ

'400 ಪಾರ್ ಘೋಷಣೆ ಈಗಿಲ್ಲ, UP ಜನರು ಬಿಜೆಪಿಗೆ ಪಾಠ ಕಲಿಸಿದ್ದು, ಮೋದಿ ಮೌನವಾಗಿದ್ದಾರೆ': ಖರ್ಗೆ ಟೀಕೆ
ಮಲ್ಲಿಕಾರ್ಜುನ ಖರ್ಗೆ
Published On :

ಲಖನೌ: 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದು, ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಪದೇಪದೆ ಹೇಳುತ್ತಿದ್ದ 'ಅಬ್ಕಿ ಬಾರ್, 400 ಪಾರ್' (ಈ ಬಾರಿ 400ಕ್ಕೂ ಹೆಚ್ಚು ಸ್ಥಾನ) ಘೋಷಣೆಯನ್ನು ಈಗ ಮಾಡುತ್ತಿಲ್ಲ. ಸುಮ್ಮನೆ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಲಖನೌನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ 'ಸಂವಿಧಾನ ರಕ್ಷಾ ಸಮ್ಮೇಳನ'ದಲ್ಲಿ ಮಾತನಾಡಿದ ಖರ್ಗೆ, ಉತ್ತರ ಪ್ರದೇಶದ ಮತದಾರರಿಗೆ ಧನ್ಯವಾದ ಅರ್ಪಿಸಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಗೆ ಹೋದರೂ ತಮ್ಮ ಭಾಷಣಗಳಲ್ಲಿ 'ಅಬ್ಕಿ ಬಾರ್, 400 ಪಾರ್' ಎಂದು ಹೇಳುತ್ತಿದ್ದರು. ಆದರೆ, ಬಿಜೆಪಿಗೆ 400 ಸ್ಥಾನಗಳನ್ನು ದಾಟಲು ಸಾಧ್ಯವಾಯಿತೇ? ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ" ಎಂದು ಖರ್ಗೆ ಹೇಳಿದರು.

"ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದ್ದಾರೆ. ಇಂದು ಮೋದಿ ಅವರು ಸುಮ್ಮನೆ ಕುಳಿತಿರುವುದಕ್ಕೆ ಉತ್ತರ ಪ್ರದೇಶದ ಜನರೇ ಕಾರಣ" ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾರ್ವಜನಿಕ ಹೇಳಿಕೆಗಳೂ ಇತ್ತೀಚೆಗೆ ಕಡಿಮೆಯಾಗಿವೆ ಎಂದು ಖರ್ಗೆ ಹೇಳಿದರು. "ಮೋದಿ ಮತ್ತು ಅಮಿತ್ ಶಾ ನಡುವೆ ಎಲ್ಲವೂ ಸರಿಯಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದರು.

ಅಂದಹಾಗೆ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 36 ಸ್ಥಾನಗಳನ್ನು ಗೆದ್ದಿತ್ತು.

ಯೋಗಿ ಆದಿತ್ಯನಾಥ್‌ಗೂ ಟಾಂಗ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಖರ್ಗೆ ಪರೋಕ್ಷವಾಗಿ ಟೀಕಿಸಿದರು. "ಲಖನೌನಲ್ಲಿರುವ ಮತ್ತೊಬ್ಬ ನಾಯಕನಿಗೂ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿದೆ" ಎಂದು ಹೇಳುವ ಮೂಲಕ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಕುರಿತು ಪರೋಕ್ಷವಾಗಿ ವ್ಯಂಗ್ಯವಾಡಿದರು.

ಬಿಜೆಪಿ ಬಳಿ 10 ಸಾವಿರ ಕೋಟಿ ರೂ. ಎಲ್ಲಿಂದ ಬಂತು?

ದೇಶದಲ್ಲಿ ದಿನದಿಂದ ದಿನಕ್ಕೆ ಹಣದುಬ್ಬರ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೆ, ಬಿಜೆಪಿ ಪಕ್ಷದ ಖಜಾನೆ ಮಾತ್ರ ತುಂಬುತ್ತಿದೆ ಎಂದು ಖರ್ಗೆ ಆರೋಪಿಸಿದರು.

"ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಆದರೆ ಬಿಜೆಪಿಯ ಖಜಾನೆ ತುಂಬುತ್ತಿದೆ. ಬಿಜೆಪಿಯ ಪಕ್ಷದ ನಿಧಿಯಲ್ಲಿ 10 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು? ನಮ್ಮನ್ನು ಪ್ರಶ್ನಿಸುತ್ತೀರಿ, ಆದರೆ ಈ ಹಣ ಎಲ್ಲಿಂದ ಬಂತು ಎಂಬುದನ್ನು ನಾವು ನಿಮ್ಮನ್ನು ಕೇಳುತ್ತಿದ್ದೇವೆ" ಎಂದು ಖರ್ಗೆ ಪ್ರಶ್ನಿಸಿದರು.

ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಪ್ರಕಾರ, ಪಕ್ಷದ ಬಳಿ ಸುಮಾರು 10 ಸಾವಿರ ಕೋಟಿ ರೂಪಾಯಿ ನಗದು ಮತ್ತು ಠೇವಣಿ ರೂಪದಲ್ಲಿ ಇದೆ ಎಂದು ಅವರು ಉಲ್ಲೇಖಿಸಿದರು.

ಇದಲ್ಲದೆ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐನಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಮೂಲಕ ಬಿಜೆಪಿ ತನ್ನ ಪಕ್ಷದ ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದರು.

"ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಮೂಲಕ ಜನರನ್ನು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಇದು ಬೇರೆ ಯಾವುದೂ ಅಲ್ಲ, ಹಗಲು ದರೋಡೆ" ಎಂದು ಖರ್ಗೆ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.