ಶಿವಮಸ್ತು

ಶಿವ ಭಾರತೀಯರ ಜನಪ್ರಿಯ ದೇವರು. ಯೋಗಿಗಳಿಗೆ ಪರಬ್ರಹ್ಮ, ನಟ- ನರ್ತಕರಿಗೆ ನಟರಾಜ, ಶಬ್ದ ಬ್ರಹ್ಮ ನಿಷ್ಣಾತರಿಗೆ ಪ್ರವರ್ತಕ.
ಶಿವಮಸ್ತು
Updated on: 

ಶಿವ ಭಾರತೀಯರ ಜನಪ್ರಿಯ ದೇವರು. ಯೋಗಿಗಳಿಗೆ ಪರಬ್ರಹ್ಮ, ನಟ- ನರ್ತಕರಿಗೆ ನಟರಾಜ, ಶಬ್ದ ಬ್ರಹ್ಮ ನಿಷ್ಣಾತರಿಗೆ ಪ್ರವರ್ತಕ. ಈ ನೆಲದ ಸಂಗೀತ, ಸಾಹಿತ್ಯ, ಶಿಲ್ಪ, ಶಾಸನ, ನಾಟ್ಯ, ಕಲೆ, ಜಾನಪದ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿ ನಿಂತ ಮಹಾದೇವನೀತ.

'ಶಿವ' ಎಂಬ ಹೆಸರು ಅವನ ಮಂಗಲಕರವಾದ ಶೀಲಕ್ಕೆ, ಮಂಗಳಮಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. 'ಭವ' ಎಂಬ ಅವನ ನಾಮ ಸಂಪತ್ತಿನ ಉದ್ಭವಕ್ಕೆ ನಾಂದಿ ಹಾಡಿದರೆ, 'ಮೃಡ' ಎನ್ನುವ ನಾಮ ಸುಖ, ಸಂಭ್ರಮಗಳ ಡಮರುಗ, ಮೃದಂಗಗಳ ದನಿಯನ್ನೇ ಹೋಲುತ್ತದೆ. ಇಷ್ಟೆಲ್ಲಾ ಇರುವವನ ಜೀವನ ಉತ್ಸಾಹ ಉಲ್ಲಾಸಗಳ ನರ್ತನಕ್ಕೆ ಪೀಠಿಕೆಯಾಗಿರುವುದಿಲ್ಲವೇ? ಹೀಗಾಗಿ ಅವನು ನಟರಾಜ. ಇಂಥ ಮಹಾದೇವ ಉತ್ಸಾಹ ಉಲ್ಲಾಸಗಳ, ಸಂಭ್ರಮ, ಸಡಗರಗಳ ತವರೂರಾಗಿರುವುದರಿಂದ ಅವನನ್ನು ನಂಬಿದವರಿಗೆ ಭಯವಿಲ್ಲ.

ನೀತಿ ನಿಯಮಗಳ ಮಾತು ಬಂದಾಗ ಆದರ್ಶ- ಅನುಷ್ಠಾನ ಇವುಗಳು ಕಠಿಣ ಹಾದಿ ಎಂಬುದು ಶತಃಸ್ಸಿದ್ಧ. ಅದಕ್ಕಾಗಿ ಗಟ್ಟಿ ಹೆಜ್ಜೆ- ದಿಟ್ಟ ಮಾತು ಇವುಗಳಿಗೆ ಭದ್ರ ಮನಸ್ಸು ಇರಬೇಕು. ಸ್ಮಶಾನದಲ್ಲಿದ್ದರೂ ಸಾಧನೆ ಮಾಡುವ ಅವನ ಛಲ- ಅವನ ಬಲ ಮನದ ಹಂಬಲಕ್ಕೆ ಸಾಕ್ಷಿಯಾಗಿದೆ. ಹೀಗಾಗಿ 'ಮನಸ್ಸಿನಂತೆ ಮಹಾದೇವ' ಎಂಬ ನುಡಿ. ಮನಸ್ಸಿದ್ದವನು ಸ್ಮಶಾನದಲ್ಲೂ ಸಾಧಿಸಬಲ್ಲ ಎಂದು ಸೂಚಿಸುತ್ತದೆ. ಕೈಲಾಸಕ್ಕೆ ಹೋದರೂ ಕೈಲಾಗದು ಎಂಬ ನಾವೆಲ್ಲಿ? ಸಾವಿನ ತಾಣದಲ್ಲೂ ಸಾಧಿಸಬಲ್ಲೆ ಎಂಬ ಅವನೆಲ್ಲಿ?
'ಸ್ಪಿರಿಚಿಯಾಲಿಟಿ ಇನ್ ನಾಟ್ ಎ ಪಾರ್ಟ್ ಟೈಂ ಲೆಸ್ಯುರಲೀ ಜಾಬ್‌' ಎನ್ನುತ್ತಾನೆ ಶಿವ. ಅಂದರೆ ಅಧ್ಯಾತ್ಮ ವಿಚಾರಗಳು ಸಮಯ ಕಳೆಯಲು ಮಾಡುವ ಅರೆಕಾಲಿಕ ಕೆಲಸವಲ್ಲ. ಅದು ಜೀವನದ ಸಂವಿಧಾನವಾಗಬೇಕು. ಹೀಗಾಗಿ ಅವನ ಕೈಲಾಸದ ಸಿಂಹಾಸನದಲ್ಲೇ ಇರಲಿ. ಸ್ಮಶಾನದ ಮೌನದಲ್ಲೇ ಇರಲಿ ಅಥವಾ ಸರಸ ಸಲ್ಲಾಪ ದಲ್ಲಿರಲಿ 'ರಾಮ ನಾಮ' ಮಾತ್ರ ಎಂದೂ ಬಿಟ್ಟವನಲ್ಲ, ಸರಸದಲ್ಲೂ ರಾಮನಾಮ ರಸಾಯನವನ್ನೇ ಸವಿಯುವ ಇವನ ಅಪ್ಪಟ ರಾಮಭಕ್ತಿಗೆ, ಪಾರ್ವತಿಗೆ ಪರ್ವತದಷ್ಟು ಸಂತೋಷವಾಗಿದೆಯಂತೆ. ಅದಕ್ಕೆ ಅವಳು ಉದ್ಗಾರ ತೆಗೆದಿದ್ದಾಳೆ. 'ಸದಾ ಶಿವನಿಗೆ ಅದೇ ಧ್ಯಾನ' ಎಂಬ ಗಾದೆ ರಾಮನಾಮ ಧ್ಯಾನ ಸದಾ ಕಾಲ ಅವನಿಗಿದೆ ಎಂದೂ ಸೂಚಿಸುತ್ತದೆ.

ರುದ್ರ ಇಂದ್ರನಿಗೂ ಒಡೆಯ. ಇಂದ್ರ ಕರ್ಮೇಂದ್ರಿಯದ ಸಂಕೇತ. ಎಲ್ಲಾ ಇಂದ್ರಿಯಗಳೂ ಮನಸ್ಸಿನಂತೆ ನಡೆಯುತ್ತದೆ. ಆ ಮನಸ್ಸು ರುದ್ರ ದೇವರ ಅಧೀನ, ಮನಸ್ಸಿಗೆ ಇರುವ ಮನಸ್ಸು - ಬುದ್ಧಿ - ಅಹಂಕಾರ - ಚಿತ್ತ - ಚೇತನ ಎಂಬ ಐದು ಮುಖಗಳೇ ತತ್ಪುರುಷ, ಸದ್ಯೋಜಾತ - ವಾಮದೇವ - ಈಶಾನ ಎಂಬ ಐದು ಮುಖಗಳನ್ನು ಪ್ರತಿನಿಧಿಸುತ್ತದೆ. ಇಂಥ ಪಂಚಮುಖದ ಅಜ್ಞಾನ- ವಿಪರೀತ ಜ್ಞಾನಗಳಿಂದ ದೂರವಿರಲು ಸತತ ಪ್ರಯತ್ನ ಪಡಬೇಕು.
ರುದ್ರ ದೇವರು ದುರುಳರಿಗೆ ದುಡುಕಿ ಫಲ ನೀಡಿ ಅವರನ್ನು ದುರಂತ ಕೂಪಕ್ಕೆ ತಳ್ಳುವವರಾದರೂ, ಸಜ್ಜನರಾದರೆ ಅವರಿಗೆ ಸುಜ್ಞಾನ - ವಿವೇಕ - ತಾಳ್ಮೆ ನೀಡಿ, ಅವರನ್ನು ಎತ್ತರಕ್ಕೊಯ್ಯಬೇಕು. ಹೀಗಾಗಿ 'ಮುಕುತಿ ಪಥಕೆ ಮನವೀವ ಮಹಾರುದ್ರ ದೇವ' ಎಂಬುದು ಅವರ ಇನ್ನೊಂದು ಬಗೆ. ಮೂರು ಕಣ್ಣಿನವನಾಗಿ ಮುಕ್ಕಣ್ಣನೆನಿಸಿಹ ಇವನು ಸಜ್ಜನರ ಜ್ಞಾನಚಕ್ಷುವನ್ನೇ ನೀಡುತ್ತಾನೆ.

ಅರ್ಧನಾರೀಶ್ವರ
ಈ ರೂಪದಲ್ಲಿ ಬಲಭಾಗ ತಲೆಯಿಂದ ಪಾದದವರೆಗೂ ಪುರುಷ ಲಕ್ಷಣವನ್ನು ಹಾಗೂ ಎಡಭಾಗ ಸ್ತ್ರೀಲಕ್ಷಣವನ್ನೂ ತೋರಿಸುವುವು. ಈ ಸಂಪೂರ್ಣ ಸೃಷ್ಟಿಯೇ ಪುರುಷ- ಸ್ತ್ರೀ ತತ್ವದ ಸ್ವರೂಪವಾಗಿದೆ.

ಗಿರಿಜಾ ಕಲ್ಯಾಣ
ಪಾರ್ವತಿಯು ಮೂಲ ಪ್ರಕೃತಿ, ಮೂಲಶಕ್ತಿ, ಅವಳು ತನ್ನ ಮೂಲಸ್ಥಿತಿಯಲ್ಲಿ ಅವಳ ನಿಷ್ಕಳಂಕ ಮತ್ತು ಪರಿಶುದ್ಧತೆಯಿಂದಾಗಿ ಅವಳನ್ನು ಕುಮಾರಿ, ಕನ್ಯಾಕುಮಾರಿ ಎಂದು ಕರೆಯುತ್ತಾರೆ. ಅವಳು ಶಿವನಿಗೆ ತಕ್ಕ ಅರ್ಧಾಂಗಿಯಾಗಿರಲು ಪ್ರತಿಜ್ಞೆ ಮಾಡುತ್ತಾಳೆ.
ಶಕ್ತಿಯು ಶಿವನ ಸ್ಥಿತಿಯನ್ನು ಹೊಂದಲು ಪಟ್ಟುಹಿಡಿದ್ದಾಳೆ. ಇದು ಹೇಗೆಂದರೆ ಕಬ್ಬಿಣದ ಅದಿರು ತನ್ನ ಕಲ್ಮಶವನ್ನೆಲ್ಲಾ ಕಳೆದು, ಆಯಸ್ಕಾಂತಕ್ಕೆ ಸೆಳೆಯಲ್ಪಡುವಂತೆ ಪ್ರಕೃತಿ ಸದಾ ಶುದ್ಧವಾಗುತ್ತಿರುವುದನ್ನು ಕಾಣಬಹುದು. ಅಂತಿಮವಾಗಿ ವಿಶ್ವದ ಅರಿವು ಆದ ಶಿವನಲ್ಲಿ ಒಂದಾಗುವುದೇ ಅವಳ ಗುರಿ.

ಸಾಂಕೇಂತಿಕವಾಗಿ ಶಿವನು ತನ್ನ ತಪಸ್ಸಿನ ತುತ್ತ ತುದಿಯ ಸ್ಥಿತಿಯಲ್ಲಿದ್ದಾಗ ಕಾಮದೇವ ಬಂದು ಕೆಡಿಸಲು ಪ್ರಯತ್ನಿಸಿದ. ಕಾಮದೇವನು ಶಿವನ ದೈವತ್ವದ ಅಗ್ನಿಯಿಂದ ಗುರುತಿಸಲಾಗದಷ್ಟು ಸುಟ್ಟು ಬೂದಿಯಾದ.

ಮುಕ್ಕಣ್ಣ
ಶಿವನಿಗೆ ಮೂರು ಕಣ್ಣುಗಳು ಮೂರನೆಯದೇ ಹಣೆಯ ಮಧ್ಯೆ ಇರುವುದು. ಈ ಒಂದು ಚಿತ್ರಣವು ಕಾಲ್ಪನಿಕ. ಅದು ಭೌತಿಕವಾಗಿಯಾಗಲೀ ಅಥವಾ ಕಾಣುವುದಾಗಲೀ ಅಲ್ಲ. ಅದು ಅಧ್ಯಾತ್ಮ ಮತ್ತು ಆಗೋಚರ. ಅಂತದರ್ಶಿಯು ದೇವತ್ವದ ಲಕ್ಷಣ. ಜ್ಞಾನೇಂದ್ರಿಯಗಳು ಪವಿತ್ರಗೊಂಡಷ್ಟು ಮನುಷ್ಯನು ದೈವತ್ವದಲ್ಲಿ ಉತ್ತಮನಾಗುತ್ತಾನೆ. ಇಂದ್ರಿಯಗಳನ್ನು ವಿಷಯ ಸುಖಗಳಿಂದ ದೂರ ಮಾಡಿದಷ್ಟು, ಅವುಗಳು ದೈವತ್ವದ ಸಾಧನೆಯಾಗಿ ಬದಲಾಗುವುವು. ಅಂತದೃಷ್ಟಿಯಲ್ಲಿ ಸತ್ಯವು ಸ್ವಯಂ ವಿವರಣಾತ್ಮಕವಾಗುವುದು.

ರುದ್ರ
ಬದುಕೆಂಬ ಪ್ರಯೋಗಶಾಲೆಯಲ್ಲಿ ಆತ್ಮಗಳ ಪಾಪ ತೊಳೆಯುವ ಕೆಲಸ ನಿರಂತರ. ಎಲ್ಲಾ ದೇಹಧಾರಿಗಳಿಗೂ ಅನಿವಾರ್ಯವಾಗಿರುವ ಸಾವಿನ ಸ್ವರೂಪವೇ ರುದ್ರ. ಸಾವು ಅಪ್ಪಿಕೊಳ್ಳುವವರು ನಿಜವಾಗಿಯೂ ರುದ್ರನ ಆರಾಧಕರು. ಜಡದೇಹದ ಅಶಾಶ್ವತೆಯನ್ನು ನೆನಪಿಸುವುದಕ್ಕಾಗಿ ರುದ್ರನು ಸ್ಮಶಾನದ ಆದಿ ದೇವ. ಅದು ನಿಜವಾಗಿಯೂ ಅವನ ದೇಗುಲ, ಬದುಕು ಮತ್ತು ಸಾವು ಒಂದು ಮತ್ತೊಂದನ್ನು ಬಿಟ್ಟಿರುವುದಿಲ್ಲ.

ಬದುಕಿನಷ್ಟೇ ಸಾವಿನ ಬಗ್ಗೆ ಚಿಂತಿಸುವವನು ದೇವತ್ವಕ್ಕೆ ಯೋಗ್ಯನಾಗುವನು! ಸರ್ವಾಂತರ್ಯಾಮಿಯಾದ ಈಶ್ವರನು ಮಿಕ್ಕೆಲ್ಲಾ ಸ್ಥಳಗಳಿಗಿಂತಲೂ ಕಾಶಿಯಲ್ಲಿ ಪ್ರಖರ ಪ್ರದೇಶಗಳಿಗಿಂತ ಹೆಚ್ಚು ಶುಭಶಕುನವೆಂದು ಗೌರವಿಸಲ್ಪಡುವುದು. ಕಾಶಿಯನ್ನು ಮಹಾಸ್ಮಶಾನ ಎಂದು ಕರೆಯುವರು. ಬದುಕು ಮತ್ತು ಸಾವು ಸಮವಾಗೆನಿಸಿದಾಗ, ಸಾಕ್ಷಾತ್ಕಾರ ಸಾಕ್ಷಿಯಾಗುವುದು.

ಗಂಗಾಧರ
ಶಿವನು ಯೋಗಿಗಳ ಒಡೆಯ. ಅವನ ತಲೆಯ ಮೇಲೆ ಗಂಗೆ ಇರುವಳು. ಈ ಪವಿತ್ರ ನದಿಯು ಮೂರು ಲೋಕಗಳಲ್ಲೂ ಪಾತ್ರವನ್ನು ಹೊಂದಿರುವಳು. ಭೌತಿಕ ಹಂತದಲ್ಲಿ ಹಿಮಾಲಯ ಪರ್ವತ ಶಿವನನ್ನು ಪ್ರತಿನಿಧಿಸುತ್ತದೆ. ದೇವೀ ಶಕ್ತಿಯ ಅವತರಣವನ್ನು ಮಹೇಶ್ವರನು ಪ್ರಪಂಚದ ಒಳಿತಿಗಾಗಿ ನಿಯಂತ್ರಿಸಿ ಸರಿಯಾದ ಮಾರ್ಗದಲ್ಲಿ ಬಿಡುವನು.
ಧಾರಾಕಾರ ಸುರಿಯುವ ಮಳೆ ಮತ್ತು ಹಿಮದ ಚಂಡಮಾರುತವನ್ನು ಹಿಮಾಲಯ ತಡೆಯುವುದು. ಅವುಗಳನ್ನು ಮತ್ತೆ ಗಂಗೆಯ ಉಗಮಸ್ಥಾನವಾಗಿ ಬದಲಿಸಿ ತಗ್ಗಿನ ಮೈದಾನ ಪ್ರದೇಶಗಳಲ್ಲಿ ಹರಿಸಲಾಗುವುದು.

ಹಿಮಾಲಯದ ಭೌತಿಕ ಘಟನೆಗಳು ಹಾಗೂ ಶಿವನ ಪೌರಾಣಿಕ ಪಾತ್ರಗಳು ಎರಡೂ, ಒಬ್ಬ ಯೋಗಿಯ ಅನುಭವಕ್ಕೆ ಅನ್ವಯಿಸುತ್ತವೆ. ಅವನ ಶಿರಸ್ಸಿನ ಮೇಲ್ಭಾಗದಲ್ಲಿ ಸುಪ್ತರೂಪದಲ್ಲಿ ಅಮೃತ ಇರುತ್ತದೆ. ಶಿಸ್ತು ಮತ್ತು ಆತ್ಮಸಂಯಮದ ಮೂಲಕ ಈ ಆಮೃತವು ಚೇತನಗೊಳ್ಳುವುದು. ಈ ಅಮೃತವು ಶಿರದಿಂದ ಹೃದಯಕ್ಕೆ ಇಳಿದಾಗ ಯೋಗಿಯು ಅತೀಂದ್ರಿಯ ಆನಂದವನ್ನು ಅನುಸರಿಸುವನು.

- ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com