

ನಮ್ಮ ಧರ್ಮ, ಸಂಸ್ಕೃತಿಗಳಲ್ಲಿ ಗುರುವಿಗೆ ಮಹತ್ವದ ಸ್ಥಾನ. ಎಷ್ಟು ಎಂದರೆ ದೇವರಿಗಿಂತ ಮಿಗಿಲಾದ ಸ್ಥಾನ. 'ಹರ ಕೊಲ್ಲಲ್ ಗುರು ಕಾಯ್ವನು' ಎಂಬ ಕವಿವಾಣಿಯೇ ಇಲ್ಲವೆ? ಮಂತ್ರ ಪಠನೆ ಆರಂಭದಲ್ಲೂ ಗುರುವನ್ನು ಸ್ಮರಿಸಿದ ಬಳಿಕವೇ ಭಗವಂತನನ್ನು ನೆನೆಯುತ್ತಾರಲ್ಲವೆ?
ಒಂದು ಪುಟ್ಟ ವಿದ್ಯೆಯನ್ನು ಹೇಳಿಕೊಟ್ಟವರೂ ಗುರುವಾಗುವರು. ಗುರುವಿನಲ್ಲಿ ಭಕ್ತಿಯನ್ನಿಡಬೇಕು. ಎಂದೂ ತಿರಸ್ಕಾರ ಭಾವನೆ ಹೊಂದಬಾರದು. ಗುರುಭಕ್ತಿಯ ವಿಚಾರದಲ್ಲಿ ಏಕಲವ್ಯನನ್ನು ಸ್ಮರಿಸಿಕೊಳ್ಳಬೇಕು. ಭಕ್ತಿಯು ಎಲ್ಲಾ ಶಕ್ತಿಗಿಂತಲೂ ದೊಡ್ಡದು. ಭಕ್ತಿಯೆಂದರೆ ಪೂಜ್ಯ ಭಾವನೆ ಹೊಂದುವುದು. ಹನುಮಂತನು ರಾಮನ ಮೇಲೆ ಇಟ್ಟಿದ್ದ ಭಕ್ತಿ ಎಂಥಹುದೆಂದು ಎಂಬುದನ್ನು ಎಲ್ಲರೂ ತಿಳಿದಿರುವರು. ರಾಮಾಂಜನೇಯ ಯುದ್ಧದಲ್ಲಿ ಹನುಮಂತನಿಗೆ ಜಯವಾಗಿದ್ದು ರಾಮದೇವರ ಮೇಲಿದ್ದ ಭಕ್ತಿ ಮತ್ತು ಸೇವೆಯಿಂದ. ಶ್ರೀರಾಮ ಮತ್ತು ಕೃಷ್ಣ ಪರಮಾತ್ಮ ಸಹ ಗುರುಗಳನ್ನು ಹೊಂದಿದ್ದವರೇ.
ಯಾವುದೇ ಕ್ಷೇತ್ರದಲ್ಲಿ ಗುರುಕೃಪೆ ಪ್ರಾಪ್ತಿಯಾಗಲು ದೇವರ ಸಹಾಯ ದೊರೆಯಲು ಈ ಕೆಳಗಿನ ಸುಲಭದ ಕ್ರಮಗಳನ್ನು ಪಾಲಿಸಬೇಕು.
-ಬೆಳಗ್ಗೆ ಏಳುವಾಗ ಮೊದಲು ಗುರು ಸ್ಮರಣೆ ಮಾಡಿಕೊಂಡು ನಂತರ ಮಾತಾಪಿತೃ, ಇಷ್ಟ ದೇವತೆಗಳನ್ನು ಸ್ಮರಿಸಿಕೊಳ್ಳಬೇಕು. ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಗುರುಸ್ಮರಣೆ ಮಾಡಿಕೊಳ್ಳಬೇಕು.
- ವಿದ್ಯಾರ್ಥಿಗಳು ಕೂಡ ತಮ್ಮ ಗುರುಗಳನ್ನು ನೆನಪಿಸಿಕೊಂಡು ಓದಲು ಪ್ರಾರಂಭಿಸಬೇಕು. ವ್ಯಾಪಾರಿಗಳು ತಮ್ಮ ತಮ್ಮ ಕಚೇರಿ ಬಾಗಿಲು ತೆರೆಯುವ ಸಮಯದಲ್ಲಿ ಗುರು ಸ್ಮರಣೆ ಮಾಡಿಕೊಳ್ಳಬೇಕು.
- ಪ್ರಯಾಣದ ಪ್ರಾರಂಭದಲ್ಲಿ ಗುರು ಸ್ಮರಣೆ ಅವಶ್ಯ. ಇದು ಆಪತ್ತುಗಳನ್ನು ನಿವಾರಿಸುವುದು, ನ್ಯಾಯಾಲಯ ವ್ಯವಹಾರಗಳಲ್ಲಿ ಗುರು ಸ್ಮರಣೆ ಅನುಕೂಲವುಂಟು ಮಾಡುವುದು.
- ಕಟ್ಟಡ ಪ್ರಾರಂಭದ ಸಮಯದಲ್ಲಿ ಹಾಗೂ ಮಂತ್ರಪಠನೆ ಮೊದಲು ಗುರು ಸ್ಮರಣೆ ವಿಶೇಷ ಫಲ ನೀಡುವುದು.
-ಡಾ. ಎಸ್. ರಾಮಮೂರ್ತಿ