ಬದುಕು ಬಂಗಾರದ ಅಂಗಡಿ

ಕೆಲವೊಮ್ಮೆ ನಾವು ನಾವಾಗಿರೋಲ್ಲ. ಏನ್ಮಾಡಬಾರದು, ಏನು ಯೋಚಿಸಬಾರದು ಅಂದ್ಕೋತೀವೋ ಅದನ್ನೇ ಮಾಡ್ವೀವಿ. ಛೇ ಇದಾ ನನ್ನ ವ್ಯಕ್ತಿತ್ವ ಅಂತ ಆಮೇಲೆ ಪಶ್ಚಾತ್ತಾಪ ಪಡ್ತೇವೆ. ಅಷ್ಟರಲ್ಲಾಗಲೇ ಅದ್ಭುತವಾದ ಸಂಬಂಧದಲ್ಲಿ ಬಿರುಕು ಮೂಡಿರುತ್ತೆ. ಆವಾಗಲೇ ಎಚ್ಚೆತ್ತೊಕೊಳ್ಲುವುದೂ ಇಲ್ಲ. ಅದೂ ಗೊತ್ತಿದ್ದೂ ನಾವು ಮಾಡಿದ್ದೇ ಸರಿ ಎಂದು ಮಾಡಿದ ತಪ್ಪಿಗೇ ಶರಣಾಗ್ತೀವಿ. ತಪ್ಪುಗಳನ್ನು ಮಾಡುವ ಮೊದಲೇ ಎಚ್ಚರವಾಗಿದ್ದರೇ ಬದುಕು ಬಂಗಾರ ಗ್ಯಾರಂಟಿ.
ಇನ್ನೊಬ್ಬರ ಸುದ್ದಿ ಯಾಕೆ?
ಬೇರೆಯವರ ಯಶಸ್ಸಿನ ಪಯಣದ ಕಥೆ ಕೇಳಿ ನಾವು ಹಿಗ್ಗಿ ಹೀರೆಕಾಯಿ ಆಗ್ತೀವಿ. ಬೇರೆಯವರ ಜೀವನದಲ್ಲಾದ ಜಾದೂ ನಮ್ಮ ಜೀವನದಲ್ಲೂ ಆಗ್ಬೇಕು ಎಂದೇನೂ ಇಲ್ಲ. ಅವರವರ ಬದುಕಿಗೆ ಅವರವರೇ ಟ್ಯೂನ್ ಆದ್ಬೇಕು. ಏನು ಆಗ್ಬೇಕೆಂದು ಕೊಳ್ತೀವೋ ಅದಕ್ಕಾಗಿಯೇ ವರ್ಕ್ಔಟ್ ಮಾಡಿದ್ರೆ ಮಿರಾಕಲ್, ಮಾತನಾಡಬೇಕು, ಯೋಚಿಸಬೇಕು.... ಎಂಬುದನ್ನು ಬೇರೆಯವರು ಡಿಸೈಡ್ ಮಾಡ್ಬಾರದು.
ಗಾಳಿ ಬಂದಾಗ ತೂರಿಕೋ...
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳೋದು ಸುಲಭ. ಅವನ್ನು ಇಂಪ್ಲಿಮೆಂಟ್ ಮಾಡುವಾಗ ಮಾತ್ರ ಒಳ್ಳೆ ಮೂಹೂರ್ತಕ್ಕಾಗಿ ಕಾದು, ಸದವಕಾಶವನ್ನೇ ಬಿಟ್ಟು ಬಿಡುತ್ತಾರೆ. ಬಂದ ಅವಕಾಶವನ್ನು ಯಾವಾಗಲೂ ಬಳಸಿಕೊಳ್ಳಬೇಕು.
ಸುಮ್ನೆ ಏನೂ ಮಾಡ್ಬೇಡಿ
ಅಯ್ಯೋ ಮಾಡ್ಬೇಕಲ್ಲ ಎಂದು ರಗಳೆ ಮಾಡಿಕೊಂಡು ಕೆಲಸ ಮಾಡೋದ್ಯಾಕೆ? ಮಾಡುವುದು ಅನಿವಾರ್ಯವಾದರೇ ಅದನ್ನೇ ಎಂಜಾಯ್ ಮಾಡೋದೂ ಅನಿವಾರ್ಯ. ಕೆಲಸ ನಮ್ಮನ್ನು ಕಂಟ್ರೋಲ್ ಮಾಡ್ಬಾರದು. ಬದಲಾಗಿ ನಾವು ಕೆಲಸವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಪ್ರೀತಿ ನೀ ಇಲ್ಲದೆ...
ಕತ್ತಲನ್ನು ಕತ್ತಲಿನಿಂದಲೇ ಓಡಿಸೋದು ಅಸಾಧ್ಯ. ಬೆಳಕು ಮಾಡುತ್ತೆ. ಹಾಗೆ ದ್ವೇಷವನ್ನು ಪ್ರೀತಿಯಿಂದಲೇ ಗೆಲಬೇಕು ಅಂತಾರೆ ಜೂ. ಮಾರ್ಟಿನ್ ಲೂಥರ್ ಕಿಂಗ್. ಕೆಲವೊಮ್ಮೆ ಕೆಲವರನ್ನು ಯಾಕೆ ಎಂಬುದನ್ನೇ ಮರೆತು ದ್ವೇಷಿಸುತ್ತೇವೆ. ಈ ದ್ವೇಷ ಹೃದಯ, ಮೆದುಳಿನ ಸಾಕಷ್ಟು ಜಾಗವನ್ನು ಅತಿಕ್ರಮಿಸುವುದರಿಂದ ನಮ್ಮನ್ನೇ ನಾವು ದ್ವೇಷಿಸಲಾರಂಭಿಸುತ್ತೇವೆ. ಯಾರಿಗೆ ಬೇಕು ಈ ದ್ವೇಷ?
ಚಿಂತ್ಯಾಕೆ? ಚಿನ್ಮಯನಿರುವಾಗ
ಸಣ್ಣ ಪುಟ್ಟ ಭಯ, ಆತಂಕಗಳು ಜೀವನದ ಪುಟಗಳನ್ನು ತಿರುವಿದಾಗ ಛೇ ಬೇಡದ ವಿಷಯಗಳಿಗ್ಯಾಕೆ ಅಷ್ಟು ಹೆದರ್ತಾ ಇದ್ವಿ ಎಂದೆನಿಸುತ್ತದೆ. ಹೆಚ್ಚು ಆತಂಕ ಹಾಗೂ ಭಯ ಹುಟ್ಟಿಸುವ ಕೆಲ ವಿಷಯಗಳನ್ನು ಬಿಟ್ಟು ಬಿಟ್ಟರೆ ಜೀವನದ ಹಾದಿ ಸುಗಮ. ಸಿಟ್ಟು, ಕೋಪ, ಹೊಟ್ಟೆಕಿಚ್ಚು, ಭಯ ಎಲ್ಲವನ್ನೂ ಇಗ್ನೋರ್ ಮಾಡಬೇಕು. ಇವು ನೆಮ್ಮದಿಯನ್ನು ಕಸಿದುಕೊಳ್ಳುವಂಥವು.
ಆಚ್ಚೆ ದಿನ್ ಆಯೇಗಾ
ಕಾಲಿಗೊಂದು ಗಾಯವಾದರೆ ಇನ್ನು ಜೀವಮಾನ ಪೂರ್ತಿ ಹೀಗೆ ಎಂದು ಆ ಕ್ಷಣದಲ್ಲಿ ಎನಿಸುತ್ತೆ. ಗಾಯ ವಾಸಿಯಾದರೆ ಎಲ್ಲವೂ ನಾರ್ಮಲ್. ಅದೆ ಬ್ಯಾಡ್ ಟೈಂ. ಸಮಯಕ್ಕೆ ಎಲ್ಲವನ್ನೂ ಮರೆಸುವ, ಗುಣಪಡಿಸುವ ಶಕ್ತಿ ಇದೆ. ಹಿನ್ನಡೆಗಳು ನಮ್ಮನ್ನೇ ಆಡಿಸಬಾರದು. ಹೊಸತನವನ್ನು ಹೊತ್ತು ತರುವ ಪ್ರತಿದಿನವೂ ಹೊಸತೇ. ನಮ್ಮಿಚ್ಛೆಗೆ ವಿರುದ್ಧವಾಗಿ ನಡೆಯುವ ಘಟನೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮದಾಗಬೇಕು.
ನೆಮ್ಮದಿ ದುಡ್ಡಿನಪ್ಪ
ಕೈಯಲ್ಲಿ ಸಾಕಷ್ಟು ದುಡ್ಡಿಲ್ಲದವರು ದುಡ್ಡೊಂದೇ ನೆಮ್ಮದಿ ತರಬಲ್ಲದು ಎಂದುಕೊಲ್ಳುತ್ತಾರೆ. ಆದರೆ ಕೋಟಿಗಟ್ಟಲೇ ದುಡ್ಡಿರೋರು ನೆಮ್ಮದಿ ಆಗಿರಲ್ಲ. ದುಡ್ಡು ಕೆಲವು ವಸ್ತುಗಳು ನೆಮ್ಮದಿಯನ್ನು ತಂದು ಕೊಡಲಾರದು. ಆರ್ಥಿಕವಾಗಿ ಬೆಳೆಯೋದು ಸುಲಭ. ಮಾನಸಿಕವಾಗಿ ಪ್ರಬುದ್ಧರಾಗೋಕೆ ಶ್ರಮ ಹಾಕ್ಬೇಕು.
ಮೆಚ್ಚಿಸುವ ತವಕವೇಕೆ?
ನಮ್ಮನ್ನು ಕಡೆಗಣಿಸೋ ಕೆಲವರನ್ನು ಮೆಚ್ಚಿಸುವ ಉಸಾಬರಿ ನಮಗ್ಯಾಕೆ? ಯಾರಿಗೆ ಯಾರೂ ಅನಿವಾರ್ಯವಲ್ಲ. ಬದುಕಿರೋಷ್ಟು ದಿನ ಖುಷ್ ಕುಷಿಯಾಗಿರ್ಬೇಕು. ಅಂಥದ್ರಲ್ಲಿ ಮುಖ ತಿರುಗಿಸಿಕೊಂಡು ಓಡಾಡುವವರ ಸಹವಾಸವೇಕೆ?
-ಪೂರ್ವಿ ಕಲ್ಯಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


