ಡಾಬಾದಲ್ಲಿ ಶೂಟೌಟ್: ಊಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ನವದೆಹಲಿ: ಹರಿಯಾಣದ ರೋಹ್ಟಕ್ ಜಿಲ್ಲೆಯ ಮಿಲನ್ ಡಾಬಾದಲ್ಲಿ ಊಟ ಮಾಡುತ್ತಿದ್ದ ನಾಲ್ವರು ಯುವಕರ ಮೇಲೆ ಬುಧವಾರ ತಡರಾತ್ರಿ ಐವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಖರವಾರ್ ಪೊಲೀಸ್ ಠಾಣೆಯಿಂದ ಕೇವಲ 50 ಅಡಿ ದೂರದಲ್ಲಿ ಈ ಶೂಟೌಟ್ ನಡೆದಿದ್ದು, ಈ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿನ್ನೆ ತಡ ರಾತ್ರಿ 12.30 ರ ಸುಮಾರಿಗೆ ಸ್ವಿಫ್ಟ್ ಕಾರಿನಲ್ಲಿ ಡಾಬಾಗೆ ಬಂದ ಐದು ಶಸ್ತ್ರಸಜ್ಜಿತ ವ್ಯಕ್ತಿಗಳು, ಊಟ ಮಾಡುತ್ತಿದ್ದ ಯುವಕರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಹಠಾತ್ ಗುಂಡಿನ ದಾಳಿಯಿಂದ ಗ್ರಾಹಕರು ಮತ್ತು ಸಿಬ್ಬಂದಿಗಳು ಭಯಭೀತರಾಗಿದ್ದು, ಜನ ರಕ್ಷಣೆಗಾಗಿ ಹರಸಾಹಸ ಪಡುತ್ತಾ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮೇಜುಗಳು ಮತ್ತು ಕುರ್ಚಿಗಳ ಹಿಂದೆ ಅಡಗಿಕೊಂಡರು.
ಗುಂಡಿನ ದಾಳಿಯಲ್ಲಿ ಮೂವರು ಯುವಕರು ಊಟದ ಮೇಜಿನ ಬಳಿ ಕುಳಿತಿದ್ದಾಗಲೇ ಮೃತಪಟ್ಟಿದ್ದು, ನಾಲ್ಕನೇ ಯುವಕ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಹೊರಗೆ ಓಡಿ ಹೋಗಿದ್ದಾನೆ. ಓಡಿಹೋದರು ಬಿಡದ ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾರೆ.
ಗುಂಡಿನ ದಾಳಿಯ ಬಳಿಕ ದುಷ್ಕರ್ಮಿಗಳು, ಕೆಲಕಾಲ ಸ್ಥಳದಲ್ಲೇ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾ ಓಡಾಡಿದ್ದಾರೆ. ಬಳಿಕ ಬಂದಿದ್ದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ವರದಿಯಾಗಿದೆ.
ಬಲಿಯಾದವರು ಝಜ್ಜರ್ ಜಿಲ್ಲೆಯವರು ಎಂದು ವರದಿಯಾಗಿದೆ, ಅದರಲ್ಲಿ ಮೂವರು ದೀಘಲ್ ಗ್ರಾಮಕ್ಕೆ ಸೇರಿದವರು ಮತ್ತು ನಾಲ್ಕನೆಯವರು ಬೆರಿ ಪ್ರದೇಶಕ್ಕೆ ಸೇರಿದವರು.
ಘಟನಾ ಸ್ಥಳಕ್ಕೆ ರೋಹ್ಟಕ್ ವಲಯದ ಐಜಿ ಹಮೀದ್ ಅಖ್ತರ್, ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಜ್‌ಪುರೋಹಿತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಐಎ, ವಿಶೇಷ ಘಟಕ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಈ ಹತ್ಯೆಯ ಹೊಣೆ ಹೊತ್ತುಕೊಂಡಿರುವುದಾಗಿ rohitbajrang07 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಪ್ರಕಟವಾಗಿದೆ ಎನ್ನಲಾಗಿದೆ. ಭೌ ರಿಟೋಲಿಯಾ ಗ್ಯಾಂಗ್ ಹೆಸರಿನಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ ಇದೊಂದು ಪ್ರತೀಕಾರದ ಕೃತ್ಯ ಎಂದು ಹೇಳಿಕೊಂಡಿದ್ದು, ಮುಂದಿನ ದಾಳಿಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



