ಸವಿತಾ ಪ್ರಣಾಮ

ರಥಸಪ್ತಮಿ ದಿನದಂದು ಅರುಣೋದಯ ಸಮಯದಲ್ಲಿ 7 ಎಕ್ಕದ ಎಲೆಗಳನ್ನು ದೇಹದ ಅಂಗಗಳ ಮೇಲೆ ಇಟ್ಟುಕೊಂಡು ಸೂರ್ಯನನ್ನು ಧ್ಯಾನ ಮಾಡುತ್ತಾ ಸ್ನಾನ ಮಾಡಬೇಕು. ನಂತರ ಪ್ರತ್ಯಕ್ಷ ದೇವನಾದ ಸೂರ್ಯನನ್ನು ಪೂಜಿಸಬೇಕು. ಇದರಿಂದ ಕೀರ್ತಿ, ವೀರ್ಯ, ತೇಜಸ್ಸು, ಆರೋಗ್ಯ ಅನುಗ್ರಹಿಸುತ್ತಾನೆ ಎಂದು ಶಾಸ್ತ್ರದಲ್ಲಿ ಹೇಳಿದೆ.
ಪ್ರತಿವರ್ಷ ರಥಸಪ್ತಮಿ ಬರುವುದು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ (ಏಳನೆ) ದಿನದಂದು. ಆ ದಿನ ಸೂರ್ಯಾರಾಧನೆಗೆ ವಿಶೇಷ ಪರ್ವ ದಿನ. ಸೂರ್ಯ ಸಮಭಾಜಕ ರೇಖೆಯನ್ನು ಉತ್ತರಾಭಿಮುಖವಾಗಿ ಹಾದೂ ಹೋಗುವ ಸಮಯ. ಇಲ್ಲಿಂದ ಹಗಲು ಮತ್ತು ರಾತ್ರಿ ಸಮ ಪ್ರಮಾಣದಲ್ಲಿರುತ್ತವೆ.
ಈ ರಸಪ್ತಮಿಯ ಋತುಮಾನದ ಹಬ್ಬವಾಗಿದೆ. ಇಲ್ಲಿಂದ ಸೂರ್ಯನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ. ಅರುಣ ಸಾರಥಿಯಾಗಿ ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ರಥದಲ್ಲಿ ಸೂರ್ಯ ವಿಜಯ ಉಲ್ಲಾಸದಿಂದ ವೀರಾಜಿಸಿದ್ದಾನೆಂದು ಪುರಾಣ ತಿಳಿಸುತ್ತದೆ.
ಏಳು ಕುದುರೆ
ಈ ಏಳು ಕುದುರೆಗಳು 7 ಬಣ್ಣದ ಸ್ವರೂಪ ಎಂದು ಹೇಳುತ್ತಾರೆ. ಈ ಸೂರ್ಯನಾರಾಯಣನನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ವೇದಗಳು ವರ್ಣಿಸುತ್ತವೆ. ಸೂರ್ಯಮಂಡಲವನ್ನು ಋಗ್ವೇದ ಎಂದೂ, ಅದರಲ್ಲಿರುವ ಜ್ವಾಲೆಯನ್ನು ಸಾಮವೇದ ಎಂದೂ ಛಾಂದೋಗ್ಯ ಉಪನಿಷತ್ ವಿವರಿಸುತ್ತವೆ. ಅಲ್ಲದೆ ಸೂರ್ಯನ ಆತ್ಮ ಮತ್ತು ಮನುಷ್ಯನ ಆತ್ಮ ಎರಡೂ ಒಂದೇ ಎಂದು ತೈತ್ತರೀಯ ಉಪನಿಷತ್ ತಿಳಿಸುತ್ತದೆ.
ಆತ್ಮವು ದೇವಲೋಕಕ್ಕೆ ಸೇರಿಕೊಳ್ಳಬೇಕೆಂದರೆ ಈ ಅರುಣನೇ ಸಿಂಹ ದ್ವಾರ ಎಂದು ಮಹಾಭಾರತದಲ್ಲಿ ಹೇಳಿದೆ. ಈ ಸೂರ್ಯ ಸಾಕ್ಷಾತ್ ಶ್ರಿಮನ್ನಾರಾಯಣನ ಪ್ರತಿರೂಪ. ಸಂಧ್ಯಾವಂದನೆಯ ಸಮಯದಲ್ಲಿ ಆತನಿಗೆ ಅರ್ಘ್ಯ ನೀಡಬೇಕು. ಆತನಿಂದ ನಮಗೆ ತೇಜಸ್ಸು, ಬಲ, ಆಯಸ್ಸು ಹಾಗೂ ನೇತ್ರಕಾಂತಿ ಲಭಿಸುತ್ತದೆ ಮತ್ತು ಆವತ್ತಿನಿಂದ ಸಾತ್ವಿಕದ ಕಡೆಗೆ, ತಮಸ್ಸಿನಿಂದ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ ಹೋಗುವಂತೆ ಮಾಡುತ್ತಾನೆ.
ಸೂರ್ಯನಿಗೆ ಇನ್ನೊಂದು ವಿಶೇಷವಾದ ಹೆಸರು 'ಸವಿತಾ' ಎಂದು. ಸವಿತಾ ಎಂದರೆ ಬುದ್ಧಿಗೆ ಪ್ರೇರಣೆ ಕೊಡುವವನು ಎಂದು. ಅದಕ್ಕಾಗಿಯೇ ಗಾಯತ್ರಿ ಮಂತ್ರದಲ್ಲಿ ಧಿಯೋ ಯೋನಃ ಪ್ರಚೋದಯಾತ್ ಎಂದು ಹೇಳಿರುವುದು. ಬ್ರಹ್ಮ ವಿದ್ಯೆ, ಮಹಾವಿದ್ಯೆ ಮತ್ತು ವರಹಾವಿದ್ಯೆಗಳು ಸೂರ್ಯಾಪಾಸನೆಯಿಂದ ಬಂದದ್ದು.
ಸೂರ್ಯನ ಕುಟುಂಬ
ಸೂರ್ಯನ ಪತ್ನಿಯರು ಸಂಜ್ಞಾ, ರಾಜ್ಞೆ ಮತ್ತು ಪ್ರಭೆ. ಸಂಜ್ಞಾ ಸೂರ್ಯನ ಪ್ರಖರತೆಯನ್ನು ತಾಳಲಾರದೆ ರೂಪಾಂತರ ಹೊಂದಿ ಛಾಯಾದೇವಿ ಆದಳು. ಸಾಂಜ್ಞಾದೇವಿಗೆ ಮನು, ಯಮ, ಯಮುನೆಯರು ಮಕ್ಕಳು, ಛಾಯಾದೇವಿಗೆ ನಾರ್ವಿ, ಶನೈಶ್ಚರ, ತಪತಿ ಮತ್ತು ವಿಷ್ಟಿಯರು ಮಕ್ಕಳು. ಸೂರ್ಯನಿಗೆ ಆದಿತ್ಯ, ದಿವಾಕರ, ಸವಿತಾ, ಬಾನು, ಆರ್ತ, ಭಾಸ್ಕರ ಸೇರಿದಂತೆ ಹಲವು ಹೆಸರುಗಳಿವೆ. ಶ್ರೀರಾಮನು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದ್ದರಿಂದ ರಾವಣನ ವಿರುದ್ಧ ವಿಜಯ ಸಾಧಿಸಿದ. ಮಹಾಯೋಗಿ ಯಾಜ್ಞವಲ್ಕ್ಯ ಮಹರ್ಷಿಗೆ ಬ್ರಹ್ಮವಿದ್ಯೆ ಈ ಸೂರ್ಯನಿಂದಲೇ ಅನುಗ್ರಹವಾಗಿದ್ದು. ಹನುಮಂತನೂ ಸಹ ಸೂರ್ಯನಿಂದಲೇ ವೇದ ವಿದ್ಯೆಗಳನ್ನು ಕಲಿತದ್ದು. ಶ್ರೀಕೃಷ್ಣನ ಮಗನಾದ ಸಾಂಬ ಮಾಡಿದ ಸೂರ್ಯೋಪಾಸನೆ ಜಗತ್ತಿಗೆ ಪ್ರಸಿದ್ಧ.
ರಾಮಾಯಣದಲ್ಲಿ ಸೂರ್ಯನನ್ನು ಸುಗ್ರೀವನ ತಂದೆ ಎನ್ನಲಾಗಿದೆ. ಮಹಾಭಾರತದಲ್ಲಿ ದೂರ್ವಾಸ ಮುನಿಗಳು ಕುಂತಿಗೆ ಬೋಧಿಸಿದ ಮಂತ್ರದ ಪ್ರಭಾವದಿಂದ ಸೂರ್ಯ ಆಕೆಗೆ ನೀಡಿದ ಪುತ್ರನೇ ಕರ್ಣ.
ಸೂರ್ಯ ನಮಸ್ಕಾರದಿಂದ ಆರೋಗ್ಯವೃದ್ಧಿ
ನಾವು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ನರ ಮಂಡಲ ಚೇತನಗೊಳ್ಳುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ದೇಹದ ರಕ್ತ ಪರಿಚಲನೆ ಕ್ರಮಬದ್ಧವಾಗುತ್ತದೆ. ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ. ಕಳೆದ ವರ್ಷ ಮಧ್ಯ ಪ್ರದೇಶ ರಾಜ್ಯದಲ್ಲಿ ಸೂರ್ಯ ನಮಸ್ಕಾರ ಒಂದು ದಾಖಲೆಯನ್ನು ಮಾಡಿದ್ದು, ಆ ಕಾರ್ಯಕ್ರಮಕ್ಕೆ ಅಲ್ಲಿನ ಶಾಲಾ ಮಕ್ಕಳು 50 ಲಕ್ಷಕ್ಕೂ ಹೆಚ್ಚು ಸೇರಿದ್ದರಂತೆ. ಈ ಸೂರ್ಯ ನಮಸ್ಕಾರ ಯೋಗಾಭ್ಯಾಸದ ಒಂದು ಪ್ರಮುಖ ಭಾಗವಾಗಿದೆ.
ಸೂರ್ಯನ ದೇವಾಲಯಗಳು
ಭಾರತದಲ್ಲಿ ಕೆಲವೇ ಕೆಲವು ಸೂರ್ಯ ದೇವಾಲಯಗಳಿವೆ. ಒಡಿಸ್ಸಾದ ಕೋನಾರ್ಕ್ ದೇವಾಲಯವು ಸೂರ್ಯನ ರಥದ ಆಕಾರದಲ್ಲಿದೆ ಹಾಗೂ 7 ಕುದುರೆಗಳಿಂದ ಎಳೆಯುತ್ತಿರುವ 12 ಜೊತೆ ಚಕ್ರಗಳಿಂದ ಕೂಡಿದೆ. ಇಲ್ಲಿ ನಾವು ಕಲಾತ್ಮಕವಾಗಿ ಶಿಲ್ಪಕಲೆಗಳನ್ನು ನೋಡಬಹುದು.
ತಮಿಳುನಾಡಿನ ಕುಂಭಕೋಣಂಗೆ 22 ಕಿ.ಮೀ. ದೂರದಲ್ಲಿರುವ ಸೂರ್ಯ ಕೋಯಿಲ್ನಲ್ಲಿ ಸೂರ್ಯ ದೇವಾಲಯವಿದೆ. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅರಸಳ್ಳಿ ಎಂಬಲ್ಲಿ ಸೂರ್ಯನ ದೇವಾಲಯದಲ್ಲಿ ರಥಸಪ್ತಮಿ ದಿನ ಸೂರ್ಯನ ಪ್ರತಿಮೆಯ ಮೇಲೆ ಕಿರಣಗಳು ಬೀಳುತ್ತವೆ.
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಾಲಯ ಸೂರ್ಯನ ದೇವಾಲಯ. ಇಲ್ಲಿ 12 ಕಲ್ಲಿನ ಕಂಬಗಳಿವೆ. ಒಂದೊಂದರ ಮೇಲೂ 12 ರಾಶಿಗಳನ್ನು ಕೆತ್ತಲಾಗಿದೆ. ಸೂರ್ಯನ ಕಿರಣಗಳು ಸೌರಮಾನ ಅನುಕ್ರಮದಲ್ಲಿ ಆಯಾ ತಿಂಗಳು ಆಯಾ ರಾಶಿಯ ಕಂಬದ ಮೇಲೆ ಬೀಳುವಂತೆ ಕೆತ್ತಲಾಗಿದೆ. ಈ ಕಂಬಗಳು ವಾಸ್ತು ಮತ್ತು ಜೋತಿಷ್ಯಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯ ವಿದ್ಯಾರಣ್ಯರ ಕಾಲದಲ್ಲಿ ಕೆತ್ತಲಾಗಿದೆ. ದಕ್ಷಿಣ ಕನ್ನಡದ ಮರೋಳಿ, ಬೆಳ್ತಂಗಡಿಯ ನಾರಾವಿಗಳಲ್ಲಿಯೂ ಸೂರ್ಯ ದೇವಸ್ಥಾನಗಳಿವೆ.
-ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


