ಬದುಕು ಬೆಳಕು

ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಆಕರ್ಷಕ ವ್ಯಕ್ತಿತ್ವ ಹೊಂದಬೇಕು ಎಂಬ ಮಹತ್ವಾಕಾಂಕ್ಷೆ ಸಹಜವಾಗಿ ಇದ್ದೇ ಇರುತ್ತದೆ. ಇಂಥ ಆಕರ್ಷಕ ವ್ಯಕ್ತಿತ್ವ ಹೊಂದಲು, ಎಲ್ಲರೂ ನಿಮ್ಮ ಕಡೆ ಒಮ್ಮೆ ಗಮನ ನೀಡಲು ಒಂದಷ್ಟು ಅಪರೂಪದ ಗುಣಗಳು ಅವಶ್ಯ.
ನಿರಂತರ ಕ್ರಿಯಾಶೀಲತೆ
ಯಾವುದೇ ವೇಳೆ ನಿಂತ ನೀರಾಗದಿರಿ. ಪಾದರಸದಂಥ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಯಾವುದೇ ಕಾರ್ಯಕ್ಕೂ ಉದಾಸೀನತೆ ಬೇಡ. ನಾಳೆ ಮಾಡುವ ಕೆಲಸವನ್ನು ಇಂದೇ ಮಾಡಿ. ಇಂದು ಮಾಡುವ ಕೆಲಸವನ್ನು ಈಗಲೇ ಮಾಡಿ. ನಿಮ್ಮೊಂದಿಗೆ ನಿಮ್ಮ ಸಹಚರರೂ ಕ್ರಿಯಾಶೀಲರಾಗುವಂತೆ ಕಾರ್ಯವೈಖರಿ ರೂಪಿಸಿ. ಇದರಿಂದ ನಿಮ್ಮೊಂದಿಗೆ ಒಂದು ಟೀಂ ಸದಾ ಸಿದ್ಧವಿರುತ್ತದೆ.
ಕರ್ತವ್ಯ ಪರರಾಗಿರಿ...
ನಿಮಗೆ ವಹಿಸಿರುವ ಕಾರ್ಯವನ್ನು ನಿಷ್ಠೆಯಿಂದ ಮಾಡಿ. ಇತರರು ನೀವು ಮಾಡುವ ಕೆಲಸದಿಂದ ಉತ್ತೇಜಿತರಾಗುವಂತೆ ಕಾರ್ಯನಿರ್ವಹಿಸಿ. ಬೆಳಗ್ಗೆ ಬೇಗ ಎದ್ದು, ನಿತ್ಯಕರ್ಮ ಪೂರೈಸಿ, ದಿನಪತ್ರಿಕೆ ಓದಿ, ಪ್ರಮುಖ ವಿಚಾರಗಳನ್ನು ಗಮನಿಸಿ. ಮಾಡುವ ಕೆಲಸವನ್ನು ಗಮನವಿಟ್ಟು ಮಾಡಿ. ಬೇರೆಯವರು ನಿಮ್ಮ ಬಗ್ಗೆ ಅನ್ಯಥಾ ಬೆರಳು ತೋರಿಸುವ ಹಾಗೆ ಮಾಡಬೇಡಿ.
ಭಾಷೆ- ಸಂವಹನ ಕಲೆ
ನೀವಾಡುವ ಮಾತು ಇತರರನ್ನು ಘಾಸಿಗೊಳಿಸದಂತಿರಲಿ. ಮಾತನಾಡುವುದು ಒಂದು ಕಲೆ. ಸತ್ಯಕ್ಕೆ ದೂರವಾದ ಸಂಗತಿಗಳು ಕಾಡದಿರಲಿ. ನಯ, ವಿನಯ ನಿಮ್ಮ ನಡತೆಯಲ್ಲಿರಲಿ. ಪ್ರೀತಿ ಪಾತ್ರರನ್ನು ಕಂಡಾಗ ಅಕ್ಕರೆಯಿಂದ ಮಾತನಾಡಿಸಿ. ನಿಮ್ಮ ನಡವಳಿಕೆ ಇತರರಿಗೆ ಮುಜುಗರವನ್ನುಂಟು ಮಾಡದಿರಲಿ. ನಿಮ್ಮೊಂದಿಗೆ ಬೇರೆಯವರು ಆಡುವ ಮಾತನ್ನು ಸಂಪೂರ್ಣ ಆಲಿಸಿ. ಆನಂತರ ನಿಮ್ಮ ಪ್ರತಿಕ್ರಿಯೆ ನೀಡಿ.
ಬೀ ಹ್ಯಾಪಿ, ನೋ ಬಿಪಿ
ಸದಾ ಸಂತೋಷವಾಗಿರಿ. ಇತರರನ್ನೂ ಸಂತೋಷವಾಗಿರಿಸಲು ಯತ್ನಿಸಿ. ಚಿಕ್ಕಪುಟ್ಟ ವಿಷಯಗಳಿಗೂ ಕಚ್ಚಾಡುವ ಮನೋಭಾವನೆ ಬಿಡಿ. ಸದಾ ನಗುಮುಖದಿಂದಿರಿ. ಯಾವಾಗಲೂ ಮುಖ ಗಂಟಿಕ್ಕಿಕೊಂಡಿದ್ದರೆ, ನೀವು ಎಷ್ಟೇ ಒಳ್ಳೆಯವರಾದರೂ ಜನ ನಿಮ್ಮ ಬಳಿ ಸುಳಿಯುವುದಿಲ್ಲ. ಪ್ರೀತಿಯಿಂದ ಇತರರ ಮನಸ್ಸನ್ನು ಗೆಲ್ಲಿ. ಬೇರೆಯವರ ಭಾವನೆಯೊಂದಿಗೆ ಚೆಲ್ಲಾಟ ಆಡದಿರಿ. ಯಾಂತ್ರಿಕತೆ, ಆಡಂಬರ ದೂರವಿರಲಿ. ಸಹಜತೆ, ಸರಳತೆಗೆ ಆದ್ಯತೆ ನೀಡಿ.
ತನ್ಮಯತೆ, ಚಿಂತನಶೀಲರಾಗಿ...
ನೀವು ಮಾಡುವ ಕಾರ್ಯದಲ್ಲಿ ತನ್ಮಯತೆ ಇರಲಿ. ಕಾಟಾಚಾರಕ್ಕೆ ಯಾವ ಕಾರ್ಯವನ್ನೂ ಮಾಡಬೇಡಿ. ಹಿಡಿದ ಕಾರ್ಯವನ್ನು ಛಲಬಿಡದ ತ್ರಿವಿಕ್ರಮನಂತೆ ಮಾಡುವ ಎದೆಗಾರಿಕೆ ನಿಮ್ಮಲ್ಲಿರಲಿ. ಅಪವಾದಗಳಿಗೆ ಕಿವಿಗೊಡಬೇಡಿ. ನಿರಂತರ ಕ್ರಿಯಾಶೀಲರಾಗಿರಿ. ಹೆಚ್ಚು ಪುಸ್ತಕ ಓದಿ. ಓದಿದ ವಿಚಾರದತ್ತ ಚಿಂತನೆ ಮಾಡಿ. ಸಹಪಾಠಿ, ಗೆಳೆಯರೊಂದಿಗೆ ಚರ್ಚಿಸಿ, ದೊಡ್ಡ ವ್ಯಕ್ತಿಗಳ ನುಡಿಯನ್ನು ಬರೆದಿಟ್ಟುಕೊಳ್ಳಿ. ನಿಮ್ಮ ಮಾತಿನಲ್ಲಿ ಆಗಾಗ್ಗೆ ಅವುಗಳ ಪ್ರಯೋಗವಿರಲಿ.
ಪ್ರ್ರಯೋಗಶೀಲತೆ
ಹೊಸ ಹೊಸ ಪ್ರಯೋಗಗಳಿಗೆ ನಿಮ್ಮನ್ನು ಅರ್ಪಿಸಿಕೊಳ್ಳಿ. ಯಶಸ್ಸು ಗಳಿಸಲು ಪ್ರಯತ್ನಿಸಿ. ಅಸಾಧ್ಯವೆಂಬುದಕ್ಕೆ ನಿಮ್ಮಲ್ಲಿ ಸ್ಥಾನ ನೀಡಬೇಡಿ. ಬೇರೆಯವರ ಮಾರ್ಗದರ್ಶನ ಪಡೆದಾದರೂ ಯಶಸ್ಸು ಸಾಧಿಸಿ.
ಯೋಗ-ಧ್ಯಾನ
ಜೀವನದಲ್ಲಿ ಎಷ್ಟು ಲವಲವಿಕೆಯಿಂದಿರುತ್ತೀರೋ, ಅಷ್ಟು ಸಾಧನೆಯನ್ನು ನಮ್ಮಿಂದ ಮಾಡಲು ಸಹಾಯಕವಾಗುತ್ತದೆ. ಇದಕ್ಕಾಗಿ ನಿಮ್ಮ ಚಂಚಲ ಮನಸ್ಸನ್ನು ಹದ್ದುಬಸ್ತಿನಲ್ಲಿಡಲು ಯೋಗ, ಧ್ಯಾನ, ಪ್ರಾಣಾಯಾಮದತ್ತ ಮನಸ್ಸು ಮಾಡಿ.
ಕ್ಷಮೆ ಯಾಚನೆ
ನೀವು ಯಾರಿಂದಲಾದರೂ ಪುಟ್ಟ ಸಹಾಯ ಪಡೆದರೆ, ಅದನ್ನು ಸ್ಮರಿಸುವ ಗುಣ ನಿಮ್ಮದಾಗಲಿ. ಅದೇ ರೀತಿ ನೀವು ಮಾಡಿದ ತಪ್ಪಿಗೆ, ಇತರರಿಗೆ ನೋವಾಗುವಂತೆ ನುಡಿದಿದ್ದರೆ ಅದಕ್ಕೆ ಕ್ಷಮೆ ಯಾಚಿಸುವುದನ್ನು ಮರೆಯಬೇಡಿ.
-ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


