ಮೈ ಶಾಖ ಹೆಚ್ಚಿಸುವ ವೈಶಾಖ

ವೈಶಾಖ ಮಾಸ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಆಗರ. ವಿಶಾಖ ನಕ್ಷತ್ರದ ಮೂಲಕ ಈ ಮಾಸಕ್ಕೆ ವೈಶಾಖ ಎಂದು ಹೆಸರು ಬಂತು. ಬೇಸಿಗೆಯ ನೇಸರು ತನ್ನ ಶಾಖ ಹರಡುತ್ತಿದ್ದರೂ, ಕಾಡೆಲ್ಲವೂ ಹಸಿರಿನಿಂದ ತುಂಬಿರುತ್ತದೆ ಈ ತಿಂಗಳಲ್ಲಿ.
ವೈಶಾಖದ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತ ಸುಪ್ರಸಿದ್ಧ ಕವಿಗಳೆಲ್ಲರೂ ಇದರ ಮೇಲ್ಮೈಯನ್ನು ಮೆಚ್ಚಿಕೊಂಡಿದ್ದಾರೆ. ವೈಶಾಖದ ಮಹಾತ್ಮವು ಹೇಳುವ ಪೌರಾಣಿಕ ಕಥೆಗಳಲ್ಲಿ ಹುದುಗಿರುವ ರಹಸ್ಯವನ್ನು ವಿಶ್ಲೇಷಿಸಿ ನೋಡುತ್ತಾ ಹೋದರೆ, ಅದರಲ್ಲಿ ಸಾಮಾಜಿಕ ಜೀವನದ ಸುಖಸಮಾಧಾನಕರ ಆದರ್ಶವೇ ಎದ್ದು ಕಾಣುತ್ತದೆ.
ಕತ್ತಲೆಯ ಆಟ ಸೂರ್ಯ ಬರುವವರೆಗೆ ಮಾತ್ರ. ಪಾಪದಿಂದ ಪರದಾಟ ವೈಶಾಖ ಬರುವವರೆಗೆ ಮಾತ್ರ. ವೈಶಾಖ ಬಂದರೆ ಎಲ್ಲವೂ ಸಿದ್ಧಿಸಿದಂತೆಯೇ ಸರಿ. ಮಾಸಗಳಲ್ಲಿ ಮಿನುಗುವ ಕಾರ್ತಿಕಕ್ಕಿಂತ ಸಾವಿರದಷ್ಟು ಮಿಗಿಲಾದ ಮಾಸ ಮಾಘ ಮಾಸ. ಮಾಸಗಳ ರಾಜನೆನಿಸಿದ ಮಾಘಕ್ಕಿಂತ ನೂರುಪಟ್ಟು ವೈಶಿಷ್ಟ್ಯಪೂರ್ಣವಾದುದು ವೈಶಾಖ ಮಾಸ (ಪದ್ಮಪುರಾಣ).
ವೈಶಾಖದಲ್ಲಿ ರಾತ್ರಿ ಹೊತ್ತಾದರೂ ಮಲಗಲಾಗದ ಸೆಕೆ, ಉರಿಧಗೆಗೆ ಮಾನವನನ್ನು ಹಾಗೆಯೇ ಹಾಸಿಗೆಯಿಂದೆಬ್ಬಿಸುತ್ತದೆ. ಚಳಿಯಂತೂ ಇಲ್ಲವೇ ಇಲ್ಲ. ತಣ್ಣೀರಂತೂ ತಂಪೆರೆಯುವ ಮಹೋನ್ನತ ಸಾಧನ. ಹೀಗಿರುವಾಗಲೂ ಸ್ನಾನ ಮಾಡಲು ಮುನ್ನುಗ್ಗದ ಸೋಮಾರಿ ಮಾನವರನ್ನು ಮಾಧನ ಶಪಿಸುವುದು ಖಂಡಿತ ಎಂದಿದೆ ಸ್ಕಂದ ಪುರಾಣ.
ದೇಹಕ್ಕೆ ತಾಪ ತಾಳಿಕೊಳ್ಳಲು ಶಕ್ತಿ ಬರಬೇಕಾದರೆ ವಾತಾವರಣ ತಂಪಾಗಿರುವಾಗಲೇ, ದುಡಿತಕ್ಕೆ ಆರಂಭವಾಗುವ ಮೊದಲೇ ತಣ್ಣೀರನ್ನೆರೆಯಬೇಕು. ತುಂಬಾ ದೂರ ಓಡಿದ ವಾಹನ ತಣ್ಣಗಾಗಲೀ ಎಂದು ಎಂಜಿನ್‌ಗೆ ತಣ್ಣೀರು ಹಾಕುವುದಿಲ್ಲವೇ ಹಾಗೆ, ನಮ್ಮ ದೇಹ ಅದಕ್ಕಿಂತ ಕಮ್ಮಿಯೇನು. ಹೀಗಾಗಿ ವೈದ್ಯಶಾಸ್ತ್ರ ತಣ್ಣೀರನ್ನೇ ಆಯ್ಕೆ ಮಾಡುತ್ತದೆ.
ಅದರಲ್ಲೂ ಸಹ ಉರಿ ಧಗೆಯ ಕಾಂಕ್ರಿಟ್ ಮನೆಯ ತೊಟ್ಟಿಗಿಂತ ಹೊರ ವಾತಾವರಣದಲ್ಲಿರುವ ಭೂಮಿ, ಕೆರೆ, ಪುಷ್ಕರಿಣಿ, ನದಿ ಇವುಗಳು ಖಂಡಿತವಾಗಿಯೂ ಶ್ರೇಷ್ಠ. ಈ ರೀತಿಯ ನೀರು ಸೂರ್ಯನ ಕಿರಣಗಳಿಂದ ಪರಿಶುದ್ಧವಾಗಿಯೂ, ತಂಪಾಗಿಯೂ ಇರುತ್ತದೆ. ಇಂಥ ಜಲ ಜಾಢ್ಯ ಹೋಗಿಸುವಂತೆ ಕ್ರಿಯಾಶೀಲತೆ ತರುತ್ತದೆ. ವೈಶಾಖ ಮಾಸದಲ್ಲಿ ಇಂಥ ಸ್ನಾನವೂ ಅವಶ್ಯ.
ಇಂಧ್ರನ ಕಥೆ
ಒಮ್ಮೆ ಬಲಿರಾಜನಿಂದ ಸೋತ ಇಂದ್ರ ಮೇರು ಪರ್ವತದಲ್ಲಿ ಮರೆಯಾಗಿ ಕುಳಿತಿದ್ದ. ಆಗ ದೇವತೆಗಳು ಬೃಹಸ್ಪತಿ ಆಚಾರ್ಯರ ನಿರ್ದೇಶನದಂತೆ ಇಂದ್ರನನ್ನು ಕರೆಸಿ ವೈಶಾಖ ಮಾಸದ ಬಹುಳ ತೃತೀಯದಂದು ಸ್ನಾನ, ದಾನ, ಜಪ ಮೊದಲಾದ ಮಂಗಳ ಕಾರ್ಯಗಳನ್ನು ಒಟ್ಟಾಗಿ ಮಾಡಿದರಂತೆ. ಇಂದು ಮಾಡಿದ ಕರ್ಮದ ನಿಮಿತ್ತದಿಂದ ಆತ ಅಕ್ಷಯ ಫಲವನ್ನು ಪಡೆದು ಪದವಿಯನ್ನು ಏರಿ ಪರಮಾತ್ಮನ ಪ್ರೀತಿಗೂ ಪಾತ್ರನಾದನು ಎಂದು ಸ್ಕಂದ ಪುರಾಣದಲ್ಲಿ ಹೇಳಿದೆ. ಧರ್ಮ ಸಾಧನೆ ಮಾಡಬೇಕೆನ್ನುವವರಿಗೆ ವೈಶಾಖ ಮಾಸದ ಒಂದೊಂದು ದಿನವೂ ಯೋಗ್ಯ ದಿನವೆಂದು ತಿಳಿದು ಬರುತ್ತದೆ. ಉಳ್ಳವರು ಇಲ್ಲದವರಿಗೆ ನೀಡುವುದರಲ್ಲಿಯೇ ಇಹಪರಗಳ ಸಾರ್ಥಕ್ಯವಿದೆ.
-ಗುರುರಾಜ ಪೋಶೆಟ್ಟಿಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


