ಸ್ಕಂದ ಪುರಾಣದ ಕುಮಾರಿಕ ಕಾಂಡದ ಪ್ರಕಾರ, ತಾರಕಾಸುರನ ಹತ್ಯೆಯ ನಂತರ ಕಾರ್ತಿಕೇಯ ಈ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ಎಂಬ ಐತಿಹ್ಯವಿದೆ. ತಾರಕಾಸುರನನ್ನು ಹತ್ಯೆ ಮಾಡಿದ್ದಕ್ಕಾಗಿ ಒಂದೆಡೆ ದೇವತೆಗಳು ಕಾರ್ತಿಕೇಯನನ್ನು ಪ್ರಶಂಸಿಸುತ್ತಿದ್ದರೆ, ತನ್ನ ತಂದೆಯ ಅಂದರೆ ಶಿವನ ಭಕ್ತನಾಗಿದ್ದ ತಾರಕಾಸುರನನ್ನು ವಧಿಸಿದ್ದಕ್ಕೆ ಕಾರ್ತಿಕೇಯ ಅಸಮಾಧಾನಗೊಂಡಿರುತ್ತಾನೆ, ತನ್ನ ಅಸಮಾಧಾನವನ್ನು ಹೋಗಲಾಡಿಸಿಕೊಳ್ಳಲು ಕಾರ್ತಿಕೇಯ ವಿಷ್ಣುವಿನ ಬಳಿಗೆ ಹೋಗಿ ಪರಿಹಾರ ಕೇಳಿದಾಗ ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುವಂತೆ ವಿಷ್ಣು ಸೂಚಿಸುತ್ತಾನೆ. ವಿಷ್ಣುವಿನ ಸಲಹೆಯಂತೆ ಕಾರ್ತಿಕೇಯ ಸ್ಥಾಪಿಸಿದ ಮೂರು ಲಿಂಗಗಳ ಪೈಕಿ ಗುಜರಾತ್ ನಲ್ಲಿ ಅಲೆಗಳು ಹೆಚ್ಚಾದಾಗ ಕಣ್ಮರೆಯಾಗುವ, ಕಡಿಮೆಯಾದಾಗ ಗೋಚರವಾಗುವ ಸ್ತಂಬೇಶ್ವರ ಮಹದೇವ್ ದೇವಾಲಯದ ಲಿಂಗವೂ ಒಂದಾಗಿದೆ.