ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ. ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ. ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ. ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.