ಡ್ಯಾಂ ಧಮಾಕ

ಡ್ಯಾಂ ಧಮಾಕ
Updated on: 

ಒಂದೇ ತಾಲೂಕಿನಲ್ಲಿ ನಾಲ್ಕು ಜಲಾಶಯಗಳು. ಈ ರೀತಿ ಇರುವುದು ಅಪರೂಪ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕು ಈ ರೀತಿಯ ವಿಶೇಷತೆಗೆ ಸಾಕ್ಷಿಯಾಗಿದೆ. ಈ ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳು ಬರುತ್ತವೆ.
ಕಾವೇರಿ ಕಣಿವೆಯಲ್ಲಿ ಬರುವ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಕಾವೇರಿ ವಿವಾದದಿಂದಾಗಿ ತಮಿಳುನಾಡು ನೀರಿಗೆ ಕ್ಯಾತೆ ತೆಗೆದಾಗಲೆಲ್ಲಾ ಹೆಚ್ಚು ನೀರು ಪೂರೈಸುವುದೇ ಕಬಿನಿ ಜಲಾಶಯದಿಂದ. ಹೀಗಾಗಿ, ಕಬಿನಿ ಜಲಾಶಯದ ಬಗ್ಗೆ ಮಾಹಿತಿ ಇದ್ದರೂ ಕಬಿನಿಯ ಸೆರಗಿನಲ್ಲೇ ಇರುವ ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳ ಬಗ್ಗೆ ಕೇಳಿರುವವರು ಕಡಿಮೆ.
ಬೀಚನಹಳ್ಳಿ ಬಳಿ ಇರುವ ಕಬಿನಿಗಂತೂ ವರ್ಷಕ್ಕೆರಡು ಬಾರಿ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಈ ಬಾರಿ ಕಬಿನಿ ಜೊತೆಗೆ ಬೀರ್ವಾಳ್ ಬಳಿ ಇರುವ ನುಗು ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿರುವುದು ವಿಶೇಷ. ಏಕೆಂದರೆ, ಕಬಿನಿ ಹೊರತುಪಡಿಸಿದರೆ ಉಳಿದ ಜಲಾಶಯಗಳು ಸಾಮಾನ್ಯವಾಗಿ ಭರ್ತಿಯಾಗುವುದಿಲ್ಲ. ಆದರೆ, ಈ ಬಾರಿ ಕೇರಳದ ವಯನಾಡು ಹಾಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ಜಲಾಶಯಗಳು ಭರ್ತಿಯಾಗಿವೆ. ಮೂರು ಜಲಾಶಯಗಳಿಂದಲೂ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ತಾರಕ ನೀರು ಹೈರಿಗೆ- ಮಟಕೆರೆ ಸಮೀಪ ಕಪಿಲಾ ನದಿಗೆ, ನುಗು ಜಲಾಶಯದಿಂದ ನದಿಗೆ ಹರಿಸಲಾದ ನೀರು ಹೊಮ್ಮರಗಳ್ಳಿ ಸಮೀಪ ಸಂಗಮ ಬಳಿ ಕಪಿಲಾ ನದಿಗೆ ಸೇರುತ್ತವೆ. ಹೀಗಾಗಿ, ಮೂರು ಜಲಾಶಯಗಳ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ.
ಅಪರೂಪಕ್ಕೆ ಭರ್ತಿಯಾಗಿರುವ ಮೂರು ಜಲಾಶಯಗಳನ್ನು ನೋಡಲು ಒಂದು ದಿನದ ಪ್ರವಾಸ ಹಾಕಿಕೊಳ್ಳಬಹುದು. ಈಗಾಗಲೇ ವಾರಾಂತ್ಯಗಳಲ್ಲಿ ಸಹಸ್ರಾರು ಜನರು ಭೇಟಿ ನೀಡುತ್ತಿದ್ದಾರೆ. ಮೂರು ಜಲಾಶಯಗಳನ್ನು ಒಟ್ಟಿಗೆ ನೋಡಿ ಬರಲು ಸ್ವಂತ ವಾಹನಗಳಲ್ಲಿ ಹೋಗುವುದು ಸೂಕ್ತ. ಕಣ್ಣು ಹಾಯಿಸಿದಷ್ಟು ದೂರ ಜಲರಾಶಿಯೇ ಕಾಣುವ ಕಬಿನಿ ಹಿನ್ನೀರಿನ ನೋಟವಂತೂ ನಯನ ಮನೋಹರ.
ಎಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ಕು ಜಲಾಶಯಗಳಿದ್ದರೂ ಇವು ಒಂದು ರೀತಿಯಲ್ಲಿ ಊರಿಗೆ ಮಾರಿ, ಪರರಿಗೆ ಉಪಕಾರಿ. ಏಕೆಂದರೆ ತಾಲೂಕಿಗೆ ಇವುಗಳಿಂದ ಹೆಚ್ಚು ಪ್ರಯೋಜನವಿಲ್ಲ. ಅಕ್ಕಪಕ್ಕದ ತಾಲೂಕುಗಳು, ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಗೆ ಅನುಕೂಲ. ಕಬಿನಿ ಹೊರತುಪಡಿಸಿ, ಉಳಿದ ಮೂರು ಯಾವ ವರ್ಷ ತುಂಬುತ್ತವೆ ಎಂಬುದನ್ನು ಕಾಯುವ ಸ್ಥಿತಿ. ಡಾ. ಡಿ.ಎಂ. ನಂಜುಂಡಪ್ಪ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿಯ ಪ್ರಕಾರ ಎಚ್.ಡಿ.ಕೋಟೆ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಆದರೆ, ವನಸಿರಿಯ ನಾಡು. ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಇದೆ. ಒಂದು ಕಾಲಕ್ಕೆ ಖೆಡ್ಡಾಗೆ ಫೇಮಸ್ ಆಗಿದ್ದ ಕಾಕನಕೋಟೆಯೂ ಇದೆ. ಕಬಿನಿ ಹಿನ್ನೀರಿನ ಪ್ರದೇಶವಂತೂ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಆನೆಗಳು ಸೇರಿದಂತೆ ನಾನಾ ಬಗೆಯ ವನ್ಯಮೃಗಗಳ ಬೀಡು.

- ಅಂಶಿ ಪ್ರಸನ್ನಕುಮಾರ್,
ಚಿತ್ರ: ಕನ್ನಡ ಪ್ರಮೋದ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com