ಮಾರುತಿಗೆ ಹೆಚ್ಚು ಮಾರ್ಕ್ಸ್!

ಮಾರುತಿಗೆ ಹೆಚ್ಚು ಮಾರ್ಕ್ಸ್!
Updated on: 

ಭಾರತದಲ್ಲಿ ಹನುಮಂತನಷ್ಟೇ ಖ್ಯಾತವಾಗಿರುವುದು ಮಾರುತಿ ಸುಝುಕಿ ಕಂಪನಿ. 'ಮಧ್ಯಮ ವರ್ಗಗಳ ಕಾರು' ಎಂಬ ಒಂದೇ ಕಾರಣಕ್ಕೆ ಮಾರುತಿಯನ್ನು ಜನ ನೆಚ್ಚಿಕೊಂಡಿಲ್ಲ ಎನ್ನುವುದು ಸತತ 16ನೇ ವರ್ಷ ಸಾಬೀತಾಗಿದೆ!

ಗ್ರಾಹಕರು ಬಯಸುವ ಹಾಗೂ ತೃಪ್ತರಾಗುವಂತೆ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾರುತಿ ಸುಝುಕಿಯು ಜನರಲ್ಲಿ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ ಎಂದು ಜೆ.ಡಿ. ಪವರ್ ಏಷ್ಯಾ ಪೆಸಿಫಿಕ್ ಸಂಸ್ಥೆ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿರುವ ಫಿಯಟ್ ಕಂಪನಿಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರಲ್ಲಿ ಮಾತ್ರ ಕೊನೆಯ ಸ್ಥಾನ ಗಳಿಸಿದೆ.
ಸರ್ವಿಸ್ ಗುಣಮಟ್ಟ, ಗಾಡಿಯ ಪಿಕಪ್, ಸರ್ವಿಸ್ ಮಾರ್ಗದರ್ಶಕರು, ಸರ್ವಿಸ್ ಸೌಲಭ್ಯ ಹಾಗೂ ಸರ್ವಿಸ್ ಇನಿಷಿಯೇಷನ್ ಎಂಬ 5 ಅಂಶಗಳನ್ನು ಇರಿಸಿಕೊಂಡು ಸಂಸ್ಥೆಯು ಭಾರತದಾದ್ಯಂತ ಸಮೀಕ್ಷೆ ನಡೆಸಿತ್ತು. ಪ್ರತಿ ಗ್ರಾಹಕರಿಗೂ 1000 ಅಂಕಗಳನ್ನು ನೀಡಲು ಅವಕಾಶ ನೀಡಲಾಗಿತ್ತು. ಮಾರುತಿ ಸುಝುಕಿಗೆ 876 ಅಂಕ ನೀಡಿದ್ದರೆ, ಫಿಯಟ್‌ಗೆ 740 ಅಂಕ ನೀಡಲಾಗಿದೆ.

ಭಾರತೀಯ ಅಟೋಮೊಬೈಲ್ ಉದ್ಯಮ ಹಾಗೂ ಗ್ರಾಹಕರಿಗೆ ಸಂತಸದ ವಿಚಾರವೆಂದರೆ, ಕಾರುಗಳ ಸರ್ವಿಸ್ ವಿಚಾರದಲ್ಲಿ ವರ್ಷದಿಂದ ವರ್ಷಕ್ಕೆ ಸುಧಾರಣೆಯಾಗುತ್ತಿದೆ. ಉತ್ಪಾದಕರು ಕಾರುಗಳನ್ನು ರಸ್ತೆಗೆ ಬಿಟ್ಟ ಮೇಲೆ ನಂತರದ ಸೇವೆಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಆದಾಗ್ಯೂ ಭಾರತದ ಶೇ.29 ಕಾರು ಬಳಕೆದಾರರು ಸರ್ವಿಸ್ ಕೊಟ್ಟ ನಂತರ ಹಿಂಪಡೆಯುವಾಗ ಬೇಸರದಿಂದಿರುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಕಾರನ್ನು ಸರಿಯಾಗಿ ಶುದ್ಧಗೊಳಿಸದಿರುವುದು. ಅಂದಹಾಗೆ, ಕಾರಿನ ಸರ್ವಿಸ್‌ಗೆ ಸಂಬಂಧಿಸಿದ ವಿಚಾರದಲ್ಲಿ ಗುಣಮಟ್ಟಕ್ಕೆ ಶೇ.43 ಜನ ಒತ್ತು ನೀಡುತ್ತಾರೆ. ಶೇ.17 ಜನ ಮಾತ್ರ ಸರ್ವಿಸ್ ನಂತರದ ಪಿಕಪ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಗ್ರಾಹಕರ ಕಾರುಗಳ ಸರ್ವಿಸ್‌ನಲ್ಲಿ ತೃಪ್ತಿ ಪಡಿಸುವಲ್ಲಿ ಮಾರುತಿ ಸುಝುಕಿ ಮೊದಲ ಸ್ಥಾನದಲ್ಲಿದ್ದರೆ, ಹ್ಯುಂಡೈ, ಹೋಂಡಾ, ಮಹೀಂದ್ರಾ, ಟೊಯೋಟಾ, ಟಾಟಾ, ರೆನೋ, ಷವರ್ಲೆ, ನಿಸಾನ್, ಸ್ಕೋಡಾ, ಫೋಕ್ಸ್‌ವ್ಯಾಗನ್, ಫೋರ್ಡ್ ಹಾಗೂ ಫಿಯಟ್ ನಂತರದ ಸ್ಥಾನಗಳಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com