ಟಾಂಗಾ ಟಾ ಟಾ

ಟಾಂಗಾ ಟಾ ಟಾ
Updated on: 

ಈಗಿನ ಪೊಂ ಪೊಂ ಸದ್ದಿನಲ್ಲಿ ಟಾಂಗಾವಾಲಾಗಳ ಕೂಗೂ ಯಾರಿಗೂ ಕೇಳುತ್ತಿಲ್ಲ!
ಬಸ್ ನಿಲ್ದಾಣ, ರೈಲು ನಿಲ್ದಾಣ ಹೀಗೇ ಅನೇಕ ಪ್ರಮುಖ ರಸ್ತೆಗಳಲ್ಲಿ ನೂರಾರು ಕುದುರೆಗಾಡಿಗಳು ಇರುತ್ತಿದ್ದ ಅಂದಿನ ದಿನಗಳಲ್ಲಿ ಟಾಂಗಾವಾಲಾಗಳ ಸದ್ದು ಬಲು ಜೋರಾಗಿತ್ತು. 'ಚಲೋ ಬೇಟಾ..ಚಲೋ.., ಏಯ್ ಬಾಯ್.. ಜರಾ ಸರಕೋ.. ದಾರೀ ಬಿಡ್ರೀ' ಎಂದು ಜೋರ್ಸೆ ಕೂಗುತ್ತಿದ್ದ ಧ್ವನಿ ಇದೀಗ ಮಂಕಾಗಿದೆ. ಹೆಚ್ಚಿದ ಮೂರುಗಾಲಿಗಳ ಆಟೋ ರಿಕ್ಷಾಗಳ ಭರಾಟೆಯ ನಡುವೆ ಟಾಂಗಾಗಳನ್ನು, ಟಾಂಗಾವಾಲರನ್ನು ಇದೀಗ ಕೇಳೋರಿಲ್ಲ ಎಂಬಂತಾಗಿದೆ.
ಲಗಾಮು ಹಿಡಿದು, ಟಾಂಗಾವಾಲ ಹೇಳಿದ್ದೇ ತಡ ಕುದುರೆ ಹೆಜ್ಜೆ ಹಾಕುತ್ತಿತ್ತು. ಕುದುರೆಯ ಟುಕು ಟುಕು ಹೆಜ್ಜೆಯ ಸದ್ದಿನ ಲಯದೊಂದಿಗೆ ಗಾಡಿಯ ಕುಲುಕಾಟದ ಪಯಣ ಪ್ರಯಾಣಿಕರಿಗೆ ಬಲು ಮೋಜಿನ ಸಂಗತಿಯಾಗಿತ್ತು. ಇಂಥ ಮೋಜು ಬಾಗಲಕೋಟೆಯಲ್ಲಿ ಇಂದಿಗೂ ಸಿಗುತ್ತಿದೆ.
ಘೋಡೆ ಕಾ ಮಕಾನ್
ಅಂದು ನೂರಾರು ಇದ್ದ ಟಾಂಗಾ ಇದೀಗ ಬೆರಳಣಿಕೆಯಷ್ಟು ಅಂದರೆ ನಲ್ವತ್ತಕ್ಕೆ ಬಂದಿಳಿದಿದೆ. ಒಂದಿಷ್ಟು ಜನರ ಬದುಕಿಗೆ ಇವತ್ತಿಗೂ ಟಾಂಗಾಗಳೇ ಆಧಾರವಾಗಿವೆ. ಜಿಲ್ಲೆಯಲ್ಲಿ ಟಾಂಗಾ ಓಡಿಸುವವರಲ್ಲಿ ಮುಸ್ಲಿಮರೇ ಹೆಚ್ಚು. ಅವರೆಲ್ಲ ಘೋಡೆ ಕಾ ಮಕಾನ್ ಎಂಬ ಸಂಘ ಕಟ್ಟಿಕೊಂಡಿದ್ದಾರೆ. ಈ ಸಂಘದ ಮೂಲಕ ಜಾತಿಯ ಕಟ್ಟಳೆಗಳನ್ನು ಮೀರಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ.
ನಗರದ (ಹಳೆಯ ಬಾಗಲಕೋಟೆ) ಫಂಕಾ ಮಸೀದಿ ಬಳಿ ಪಾಗಾ ಎಂಬಲ್ಲಿ ಟಾಂಗಾವಾಲಾಗಳು ಕುದುರೆಗಳನ್ನು ಕಟ್ಟುತ್ತಾರೆ. ಇದರ ಬಳಿಯೇ ಕುದುರೆಗಳಿಗೆ ಮೇವನ್ನು ಮಾರುವ ಕರಕಿ ಬಜಾರ್ ಇದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಹುಲ್ಲನ್ನು ಮಾರಲು ಹೊತ್ತು ತರುವ ಮಹಿಳೆಯರು 50-60ಕ್ಕೆ ಹುಲ್ಲಿನ ಗಂಟುಗಳನ್ನು ಟಾಂಗಾವಾಲಾಗಳಿಗೆ ಮಾರುತ್ತಾರೆ. ಕುದುರೆಗಳಿಗಷ್ಟೇ ಅಲ್ಲದ ದನ-ಕರುಗಳಿಗೂ ಇಲ್ಲಿ ಮೇವು ಲಭ್ಯ. ಈ ಮೂಲಕ ತಮ್ಮ ಬದುಕನ್ನು ಅವರು ರೂಪಿಸಿಕೊಂಡಿದ್ದಾರೆ.
'ಮುಳುಗಡೆ ನಗರಿ' ಎಂಬ ಹಣೆ ಪಟ್ಟಿ ಕಟ್ಟಿಕೊಂಡ ಊರಲ್ಲಿ ಅನೇಕ ಪರಂಪರೆಗಳು ಮುಳುಗಡೆಯಾಗಿವೆ. ಟಾಂಗಾಗಳು ಸಹ ಬರಿ ನೆನಪಾಗಿ ಉಳಿಯುವ ದಿನ ದೂರವಿಲ್ಲ.
ಇಷ್ಟು ದಿನ ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ, ವಿಶಿಷ್ಟ ಮೋಜನ್ನು ಕೊಡುತ್ತಿದ್ದ ಟಾಂಗಾಗಳನ್ನು, ಟಾಂಗಾವಾಲಾರಿಗೆ ಮತ್ತೊಂದು ನೆಲೆ ದೊರಕಬೇಕಿದೆ. ಈ ನಿಟ್ಟಿನಲ್ಲಿ ಇವರಿಗೆ ಸಹಕಾರಿಯಾಗಬೇಕಿದೆ.

ಈ ಮೊದ್ಲು ನೂರಾರು ಕುದುರೆ ಗಾಡಿಗಳಿದ್ದವು, ಇದೀಗ ನಲವತ್ತು-ಐವತ್ತಕ್ಕ ಬಂದೀಳದದ... ಈಗಿನ ಜನಕ್ಕ ಭಾಳ ಅವಸರ, ಹೀಂಗಾಗಿ ಟಾಂಗಾ ಬಿಟ್ಟು ಅಟೋ ರೀಕ್ಷಾಗಳಿಗೆ ಜನ ಹೋಗ್ತಾರ. ಹೀಂಗಾಗಿ ದಿನಾ ನಮಗ ನೂರರಿಂದ ನೂರಾ ಐವತ್ತು ರೂಪಾಯಿ ಗಳಿಕಿ ಆಗ್ತದ. ಅದ್ರಾಗ ಅರ್ಧ ರೊಕ್ಕ ಕುದುರಿ ಮೇವೀಗಾದ್ರ ಮಿಕ್ಕಿದ್ದು ನಮ್ಮ ಮನೀಗಿ ಆಗ್ತದ.
=  ಮೆಹಬೂಬ್ ಸಾಬ್ ಹುಬ್ಬಳ್ಳಿ.


= ಪ್ರವೀಣರಾಜು ಸೊನ್ನದ, ಗುಳೇದಗುಡ್ಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com