ಕಲಾತ್ಮಕ ಕಥೆಯನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನವೇ "ತಿಥಿ"

ಒಂದು ಸಾವಿನ ಬಳಿಕ ನಡೆಯುವ ಕಾಲಾತ್ಮಕ ಕಥೆಯನ್ನು ಹಾಸ್ಯ ಮಿಶ್ರಿತವಾಗಿ ಹೇಳುವ ಪ್ರಯತ್ನವೇ ತಿಥಿ ಚಿತ್ರವೆಂದು ಸೋಮವಾರ ನಿರ್ದೇಶಕ ರಾಮರೆಡ್ಡಿ ಹೇಳಿದ್ದಾರೆ...
ತಿಥಿ ಚಿತ್ರ ನಿರ್ದೇಶಕ ರಾಮರೆಡ್ಡಿ
ತಿಥಿ ಚಿತ್ರ ನಿರ್ದೇಶಕ ರಾಮರೆಡ್ಡಿ

ಬೆಂಗಳೂರು: ಒಂದು ಸಾವಿನ ಬಳಿಕ ನಡೆಯುವ ಕಾಲಾತ್ಮಕ ಕಥೆಯನ್ನು ಹಾಸ್ಯ ಮಿಶ್ರಿತವಾಗಿ ಹೇಳುವ ಪ್ರಯತ್ನವೇ ತಿಥಿ ಚಿತ್ರವೆಂದು ಸೋಮವಾರ ನಿರ್ದೇಶಕ ರಾಮರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯಿನ್ ಮಾಲ್ ನಲ್ಲಿ ನಡೆಯುತ್ತಿರುವ 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ತಿಥಿ ಚಿತ್ರದ ನಿರ್ದೇಶಕ ರಾಮರೆಡ್ಡಿ ಅವರು ಚಿತ್ರದ ಕುರಿತಂತೆ ಅಭಿಪ್ರಾಯವನ್ನು ಹಂಚಿಕೊಂಡರು. ತಿಥಿ ಚಿತ್ರದ ಶೀರ್ಷಿಕೆ ನೋಡಿ ಎಲ್ಲರೂ ಇದನ್ನು ಮಾಟ-ಮಂತ್ರ ಕೇಂದ್ರಿತ ಚಿತ್ರವೆಂದು ತಪ್ಪಾಗಿ ಆರ್ಥೈಸಿಕೊಂಡಿದ್ದಾರೆ. ತಿಥಿ ಕಲಾತ್ಮಕ ಕಥೆಯನ್ನು ಹಾಸ್ಯ ಭರಿತವಾಗಿ ಹೇಳುವ ಪ್ರಯತ್ನವಾಗಿದೆಯಷ್ಟೇ. ಹೀಗಾಗಿ ಇದು ಕಾಮಿಡಿ ಚಿತ್ರವೇ ಹೊರತು, ಬ್ಲಾಕ್ ಕಾಮಿಡಿ ಚಿತ್ರವಲ್ಲ ಎಂದು ರಾಮರೆಡ್ಡಿ ಹೇಳಿದರು.

"ಚಿತ್ರ ನಿರ್ಮಾಣ ಶಾಸ್ತ್ರೀಯ ಕಟ್ಟುಪಾಡುಗಳನ್ನು ಮೀರಿ ಚಿತ್ರ ಮಾಡುವ ಉದ್ದೇಶ ನನ್ನದಾಗಿತ್ತು. ಇದೇ ಕಾರಣಕ್ಕೆ ತಿಥಿ ಚಿತ್ರಕಥೆಯನ್ನು ಆರಿಸಿಕೊಂಡೆ. ಶಂಕರೇಗೌಡ ಎಂಬ 101 ವರ್ಷದ ಹಿರಿಯಜ್ಜನ ಸಾವಿನ ಮೂಲಕ ಕಥೆ ಆರಂಭವಾಗಿ ಬಳಿಕ ನಡೆಯುವ 11 ದಿನಗಳ ಧಾರ್ಮಿಕ ಕೈಂಕರ್ಯಗಳ ನಡುವೆ ಚಿತ್ರಕಥೆ ತಿರುಗುತ್ತದೆ. ಇಲ್ಲಿ ಶಂಕರೇಗೌಡನ ಮೂರು ತಲೆಮಾರುಗಳು ಅಂದರೆ ತಾತ, ಮಗ, ಮೊಮ್ಮಕ್ಕಳ ಪಾತ್ರಗಳ ಮೂಲಕ ಕಲಾತ್ಮಕ ಕಥೆಯನ್ನು ಹಾಸ್ಯಭರಿತವಾಗಿ ಹೇಳಲು ಯತ್ನಿಸಿದ್ದೇವೆ.

ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಪಾತ್ರಧಾರಿಗಳು ಸ್ಥಳೀಯ ಗ್ರಾಮಸ್ಥರೇ ಆಗಿದ್ದು, ಚಿತ್ರದ ಪ್ರಮುಖ ಪಾತ್ರಗಳಿಗಾಗಿ ಮಾತ್ರ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ರಾಮರೆಡ್ಡಿ ಹೇಳಿದರು. ಇದೇ ವೇಳೆ ಚಿತ್ರದ ಸಹಾಯಕ ಹಿರೇಗೌಡ ಅವರ ಕುರಿತು ಮಾತನಾಡಿದ ರಾಮರೆಡ್ಡಿ, ಹಿರೇಗೌಡ ಮತ್ತು ನಾನು ಚಿಕ್ಕವಯಸ್ಸಿನಿಂದಲೂ ಸ್ನೇಹಿತರು. ಚಿಕ್ಕವಯಸ್ಸಿನಿಂದಲೂ ಇಬ್ಬರೂ ಒಟ್ಟಿಗೆ ಬೆಳೆದದ್ದರಿಂದ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಚೆನ್ನಾಗಿ ತಿಳಿದಿದೆ. ಚಿತ್ರಕ್ಕೆ ಸ್ಕ್ರಿಪ್ಟ್ ಅನ್ನು ಇಬ್ಬರು ಸೇರಿ ಬರೆದದ್ದೇ ಆದರೂ ಇಬ್ಬರ ಯೋಚನಾ ಲಹರಿ ಒಂದೇ ಆಗಿತ್ತು. ಇದೇ ಕಾರಣಕ್ಕೆ ಚಿತ್ರ ಇಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ. ಪ್ರೇಕ್ಷಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಹರಿದುಬಂದಿದೆ. ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಮುಂದೇನಾಗುತ್ತದೆ ಎಂದು ಕಾದು ಕುಳಿತುಕೊಳ್ಳಬೇಕು. ಆನಿಟ್ಟಿನಲ್ಲಿ ತಮ್ಮ ಚಿತ್ರ ಯಶಸ್ವಿಯಾಗಿದ್ದು, ಹಾಸ್ಯ ಪಾತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ರಾಮರೆಡ್ಡಿ ಹರ್ಷ ವ್ಯಕ್ತಪಡಿಸಿದರು.

ಉತ್ತಮ ಗುಣಮಟ್ಟದ ಚಿತ್ರ ನೀಡಲು 3 ವರ್ಷ ಸಮಯ ಹಿಡಿಯಿತು: ಹಿರೇಗೌಡ

ಇದೇ ವೇಳೆ ಮಾತನಾಡಿದ ಚಿತ್ರದ ಸಹಾಯಕ ನಿರ್ದೇಶಕ ಹಿರೇಗೌಡ ಅವರು, ಉತ್ತಮ ಗುಣಮಟ್ಟದ ಚಿತ್ರ ನೀಡಬೇಕು ಎಂದು ನಿರ್ಧರಿಸಿದ್ದರಿಂದ ಚಿತ್ರಕ್ಕಾಗಿ ಮೂರು ವರ್ಷ ಕಾಯಬೇಕಾಯಿತು. ಚಿತ್ರಕ್ಕಾಗಿ ನಾವು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆವು. ಸ್ಥಳೀಯ ಗ್ರಾಮಸ್ಥರನ್ನು ಭೇಟಿ ಮಾಡಿ ಅವರಿಂದ ಅವರ ಜೀವನದಲ್ಲಾದ ಮಹತ್ವದ ಘಟನೆಗಳ ಕುರಿತು ಮಾಹಿತಿ ಕಲೆಹಾಕಿದೆವು. ಆಗ ಹುಟ್ಟಿದ್ದೇ ಈ ತಿಥಿ ಚಿತ್ರಕಥೆ. ಕೇವಲ ಚಿತ್ರಕಥೆ ನಿರ್ಧರಿಸುವುದಕ್ಕೇ ನಮಗೆ ಆರು ತಿಂಗಳ ಬೇಕಾಯಿತು.

ಬಳಿಕ ಕಾರ್ಯ ಅತ್ಯಂತ ತ್ವರಿತವಾಗಿ ನಡೆಯಿತು, ಕೇವಲ ಒಂದೇ ತಿಂಗಳಲ್ಲಿ ಸ್ಕ್ರಿಪ್ಟ್ ಕೆಲಸ ಮುಗಿದಿತ್ತು. ಚಿತ್ರಕಥೆ ವೇಳೆಯಲ್ಲಿಯೇ ನಾವು ಈ ಕಥೆಗೆ ನಟರ ಬದಲಿಗೆ ಸ್ಥಳೀಯ ರೈತರನ್ನೇ ಬಳಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ರೈತರಿಗೂ ಅವರದ್ದೇ ಕೆಲಸ ಕಾರ್ಯಗಳಿರುವುದರಿಂದ ಅವರನ್ನು ನಮ್ಮ ಚಿತ್ರೀಕರಣದ ಸಮಯಕ್ಕೆ ಹೊಂದಾಣಿಕೆ ಮಾಡುವುದು ಕಷ್ಟವಾಯಿತು. ಹೀಗಿದ್ದೂ ಚಿತ್ರದಲ್ಲಿ ಶೇ.95 ರಷ್ಟು ಸ್ಥಳೀಯ ರೈತರನ್ನೇ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಚಿತ್ರದ ಚಿತ್ರೀಕರಣಕ್ಕೆ 3 ವರ್ಷ ಬೇಕಾಯಿತು ಎಂದು ಹಿರೇಗೌಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com