
ಮುಂಬೈ: 2015ರಲ್ಲಿ ತೆರೆಕಂಡು ಅತಿದೊಡ್ಡ ಯಶಸ್ಸುಕಂಡ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಸೀಕ್ವೆಲ್ ನ ಚಿತ್ರೀಕರಣ ಭರದಿಂದ ಸಾಗಿದ್ದು, ಇನ್ನು 10 ತಿಂಗಳೊಳಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.
ಮೂಲಗಳ ಪ್ರಕಾರ ಸುದೀರ್ಘ ಬಿಡುವಿನ ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿರುವ ಬಾಹುಬಲಿ ಚಿತ್ರತಂಡ ತನ್ನ ಚಿತ್ರೀಕರಣ ಕಾರ್ಯವನ್ನು ತೀವ್ರಗೊಳಿಸಿದ್ದು, ನಿಗದಿಗಿಂತ ವೇಗವಾಗಿಯೇ ಚಿತ್ರೀಕರಣ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ ಅವರು ಹೇಳಿರುವಂತೆ ಚಿತ್ರದ ನಾಯಕ ಪ್ರಭಾಸ್ ಅವರ ಪಾತ್ರದ ಚಿತ್ರೀಕರಣ ಇನ್ನು 70 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಸಂಬಂಧ ಎಲ್ಲ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದೆ. ಚಿತ್ರೀಕರಣಕ್ಕೆ ಬೇಕಿರುವ ಸೆಟ್ ಗಳ ನಿರ್ಮಾಣ ಮತ್ತು ತಾಂತ್ರಿಕ ತಂಡ ಸಕಲ ರೀತಿಯಲ್ಲೂ ಸಿದ್ಧವಿದ್ದು, ಇನ್ನು 70 ದಿನಗಳಲ್ಲಿ ಪ್ರಭಾಸ್ ಪಾತ್ರದ ಚಿತ್ರೀಕರಣ ಪೂರ್ಣಗೊಳ್ಳಲಿದೆ.
10 ತಿಂಗಳೊಳಗೆ ಚಿತ್ರೀಕರಣ ಪೂರ್ಣ
ಮೂಲಗಳ ಬಾಹುಬಲಿ 2 ಸಂಬಂಧ ಬಹುತೇಕ ಎಲ್ಲ ಪಾತ್ರಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಪ್ರಭಾಸ್-ರಾಣಾ ನಡುವಿನ ಕಾದಾಟದ ದೃಶ್ಯಗಳ ಕೆಲ ಭಾಗಗಳ ಚಿತ್ರೀಕರಣ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ. ಈ ಭಾಗದ ಚಿತ್ರೀಕರಣವೂ ಸೇರಿದಂತೆ ಇಡೀ ಚಿತ್ರದ ಬಾಕಿ ಉಳಿದಿರುವ ಚಿತ್ರೀಕರಣ ಇನ್ನು 10 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜಮೌಳಿ ಅವರ ಕೆಲಸವನ್ನು ಹತ್ತಿರದಿಂದ ನೋಡಿರುವವರು ಚಿತ್ರೀಕರಣ ಬಹುಶಃ ಮತ್ತಷ್ಟು ದಿನ ಮುಂದುವರೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿರುವ ತಮನ್ನಾ
ಇನ್ನು ಚಿತ್ರದ ಎರಡನೇ ನಾಯಕಿಯಾಗಿರುವ ಮಿಲ್ಕ್ ಬ್ಯೂಟಿ ತಮನ್ನಾ ಕೂಡ ಇದೀಗ ಬಾಹುಬಲಿ 2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರದಲ್ಲಿ ಬರುವ ಕುದುರೆ ಸವಾರಿಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರಂತೆ. ಬಾಹುಬಲಿ ಚಿತ್ರದಲ್ಲಿ ಆವಂತಿಕಾಳಾಗಿ ಗ್ಲ್ಯಾಮರ್ ಪ್ರದರ್ಶಿಸಿದ್ದ ತಮನ್ನಾ, ಬಾಹುಬಲಿ 2ರಲ್ಲೂ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ತಮನ್ನಾ ಕುದುರೆ ಸ್ಟಂಟ್ ಮಾಡಬೇಕಾಗಿದ್ದು, ಇದಕ್ಕಾಗಿ ಜೀತು ವರ್ಮಾ ಎನ್ನುವ ಸಾಹಸ ಕಲಾವಿದರಿಂದ ಕುದುರೆ ಸವಾರಿಯ ತರಬೇತಿ ಪಡೆಯುತ್ತಿದ್ದಾರೆ. ತಮನ್ನಾ ತಮ್ಮ ಸಿನಿ ಕರಿಯರ್ ನಲ್ಲಿಯೇ ಇದೇ ಮೊದಲ ಬಾರಿಗೆ ಕುದುರೆ ಏರಿರುವುದು ವಿಶೇಷವಾಗಿದ್ದು, ಈ ಹಿಂದೆ ಕಂಗನಾ ರಣಾವತ್ ಹಾಗೂ ಸೋನಾಕ್ಷಿ ಸಿನ್ಹಾ ಅವರಿಗೆ ಕುದುರೆ ಸವಾರಿ ತರಬೇತಿ ನೀಡಿದ್ದ ಜೀತು ವರ್ಮ ತಮನ್ನಾಗೆ ಕುದುರೆ ಸವಾರಿ ಪಾಠ ಕಲಿಸುತ್ತಿದ್ದಾರೆ.
Advertisement